12ರಂದು ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶ
ಕ.ಪ್ರ. ವಾರ್ತೆ,ರಾಯಚೂರು,ಜ.2
ಹಿಂದುಳಿದ ಜಾತಿಗಳ ಒಕ್ಕೂಟದ ದಶಮಾನೋತ್ಸವ ಅಂಗವಾಗಿ ಜ.12ರಂದು ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸುವ ನಿರೀಕ್ಷೆಯಿದ್ದು, ರಾಜ್ಯದ ವಿವಿಧೆಡೆಯಿಂದ 6 ಲಕ್ಷ ಜನ ಪಾಲ್ಗೊಳ್ಳುವ ಸಾಧ್ಯತೆಯಿದೆ. ಎಲ್ಲ ಹಿಂದುಳಿದ ಜಾತಿಗಳಿಗೆ ಸೇರಿದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಒಕ್ಕೂಟವು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು 10 ವರ್ಷಗಳಾಗಿದ್ದರೂ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿತ್ತು. ಆದರೆ ಒಕ್ಕೂಟವನ್ನು ರಾಜ್ಯಾದ್ಯಂತ ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದು, ಒಕ್ಕೂಟಕ್ಕೆ ಜಿಲ್ಲಾವಾರು ಸಂಚಾಲಕರನ್ನು ನೇಮಿಸಲಾಗುತ್ತಿದೆ. ಸಂಘಟನೆಗೆ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಅವೈಜ್ಞಾನಿಕ: ಹಿಂದುಳಿದ ಜಾತಿಗಳಲ್ಲಿ 203 ಜಾತಿಗಳಿದ್ದು, ಪ್ರವರ್ಗ 1 ಮತ್ತು 2ಎ ದಲ್ಲಿ ಮೇಲ್ವರ್ಗದ ಸುಮಾರು 65 ಸಾವಿರಕ್ಕೂ ಹೆಚ್ಚಿನ ಜನ ಅನಧಿಕೃತವಾಗಿ ಸೇರಿದ್ದಾರೆ. ಮೂಲ ಹಿಂದುಳಿದವರಿಗೆ ದೊರೆಯಬಹುದಾಗಿದ್ದ ರಾಜಕೀಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಹೋರಾಟ ಎಚ್ಚರಿಕೆ: ಹಿಂದುಳಿದ ಜಾತಿಗಳವರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ನಿಗಮ ಮತ್ತು ಮಂಡಳಿಗಳ ಪದಾಧಿಕಾರಿಗಳ ನೇಮಕದಲ್ಲಿ ಆಗುತ್ತಿರುವ ತಾರತಮ್ಯ ನಿವಾರಿಸಬೇಕು. ಹಿಂದುಳಿದ ವರ್ಗಗಳ ವಸಗಿ ನಿಲಯಗಳ ನಿರ್ಮಾಣಕ್ಕೆ ಗರಿಷ್ಠ 5 ಲಕ್ಷ ಮಂಜೂರು ಮಾಡುತ್ತಿದ್ದು, ಈ ಮೊತ್ತವನ್ನು 25 ಲಕ್ಷ ಹೆಚ್ಚಿಸುವಂತೆ ಆಗ್ರಹಿಸಿದರು. ಬೆಂಗಳೂರಿನಲ್ಲಿ ಜ.12ರಂದು ಆಯೋಜಿಸಿರುವ ಸಮಾವೇಶದಲ್ಲಿ ರಾಜ್ಯದ ಹಿಂದುಳಿದ ಜಾತಿಗಳು ಎದುರಿಸುತ್ತಿರುವ ನಾನಾ ರೀತಿಯ ಸಮಸ್ಯೆಗಳ ಕುರಿತು ಸಮಗ್ರ ಚರ್ಚಿಸಿ ನಡೆಸಿ ನಿರ್ಣಯ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದಲ್ಲಿ ಒಕ್ಕೂಟದಿಂದ ಹೋರಾಟ ಆಯೋಜಿಸಲಾಗುತ್ತದೆ ಎಂದು ಹೇಳಿದರು. ಒಕ್ಕೂಟದ ಲೆಕ್ಕ ಪರಿಶೋಧಕ ಎಣ್ಣೆಗೆರೆ ವೆಂಕಟರಾಮಯ್ಯ, ಮುಖಂಡರಾದ ಈ. ಆಂಜಿನೇಯ, ಈರಣ್ಣ, ಮಾರೆಪ್ಪ, ಜಯವಂತರಾವ್, ನೀಲಕಂಠ ಬೇವಿನ್, ವೆಂಕಟೇಶ ಹೀರಾ, ಪುಟ್ಟಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

