ಶೈಕ್ಷಣಿಕ ಪ್ರಗತಿಯಿಂದ ಸಮಾಜ ಅಭಿವೃದ್ಧಿ
ಕ.ಪ್ರ. ವಾರ್ತೆ ರಾಯಚೂರು ಜ.13
ಸಮಾಜದಲ್ಲಿ ಹಿಂದುಳಿದ ವರ್ಗಗಳವರ ಸಮಗ್ರ ಪ್ರಗತಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಜಯಂತ್ಯುತ್ಸವವನ್ನು ಸರ್ಕಾರವೇ ಆಚರಿಸಲು ಮುಂದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ ಹೇಳಿದರು.
ನಗರದ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ ಮತ್ತಿತರೆ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಕೆಳವರ್ಗದಲ್ಲಿ ಜನಿಸಿದ ಮಹಾನ್ ವ್ಯಕ್ತಿಗಳು ಇಂದು ಕೇವಲ ಆಯಾ ಜಾತಿ ಜನಾಂಗಕ್ಕಲ್ಲ. ಬದಲಾಗಿ ಇಡೀ ಮನುಕುಲಕ್ಕೆ ಮಾದರಿ ಎನಿಸಿದ್ದಾರೆ ಎಂದರು.
ಮೊದಲು ಮಕ್ಕಳಿಗೆ ಶಿಕ್ಷಣ ಕೊಡಿಸಿ: ದೇಶದಲ್ಲಿ ನೆಲೆಸಿರುವ ಎಲ್ಲ ಜಾತಿ ಜನಾಂಗದವರ ಅಭಿವೃದ್ಧಿಗೆ ಶಿಕ್ಷಣದ ಕಲಿಕೆ ಪೂರಕವಾಗಿದೆ. ಕಲ್ಲು ಒಡೆಯುವ ವೃತ್ತಿಯಲ್ಲಿರುವ ಭೋವಿ ಸಮಾಜದವರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯಕ್ಕೆ ಮುಂದಾಗಬೇಕು. ಆಗ ಮಾತ್ರ ಸಮಾಜದ ಪ್ರಗತಿಯಾಗಲು ಸಾಧ್ಯ ಎಂದು ಹೇಳಿದರು.
ಈಚೆಗೆ ಹೈ.ಕ. ಭಾಗದವರಿಗೆ 371(ಜೆ)ನೇ ಕಲಂ ಅಡಿ ವಿಶೇಷ ಸ್ಥಾನಮಾನ ದೊರೆತಿದೆ. ಎಲ್ಲ ವಿದ್ಯಾವಂತರಿಗೆ ಇದರಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಆಸಕ್ತಿ ತೋರುವಂತೆ ಮನವಿ ಮಾಡಿದರು.
ಜಿಲ್ಲಾಡಳಿತ, ಜನಪ್ರತಿನಿಧಿಗಳಿಂದ ಅಗೌರವ: ಜಿಲ್ಲಾ ಭೋವಿ(ವಡ್ಡರ) ಸಮಾಜದ ಮಾಜಿ ಅಧ್ಯಕ್ಷ ಪಿ.ಯಲ್ಲಪ್ಪ ಮಾತನಾಡಿ, ಸರ್ಕಾರದಿಂದ ಮೊದಲ ಬಾರಿಗೆ ಜಯಂತಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಕಡೆಗಣಿಸಿರುವುದು ಅಗೌರವ ತೋರಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಈರಪ್ಪ ವಿಶೇಷ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಜಿಪಂ ಅಧ್ಯಕ್ಷೆ ಲಲಿತಮ್ಮ, ಡಿಸಿ ಎಸ್.ಎನ್. ನಾಗರಾಜು, ಸಿಇಒ ವಿಜಯ ಜ್ಯೋತ್ಸ್ನಾ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಮೆರವಣಿಗೆ: ಕುಂಭ ಕಳಸಹೊತ್ತ ಮಹಿಳೆಯರು, ವಿವಿಧ ವಾಧ್ಯಮೇಳಗಳಿಂದ ಕೂಡಿದ್ದ ಮೆರವಣಿಗೆಯು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ರಂಗಮಂದಿರ ತಲುಪಿತು. ಸಮಾರಂಭದಲ್ಲಿ ಜಿಪಂ ಯೋಜನಾಧಿಕಾರಿ ಡಾ. ಟಿ.ರೋಣಿ, ತಹಸೀಲ್ದಾರ್ ಅಶೋಕ ಜಾಗೀರದಾರ್, ಜಿಲ್ಲಾ ಭೋವಿ (ವಡ್ಡರ) ಸಮಾಜದ ಅಧ್ಯಕ್ಷ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಗಟ್ಟು ಗೋವಿಂದ, ನೌಕರರ ಸಂಘದ ಅಧ್ಯಕ್ಷ ಆರ್.ಈರಣ್ಣ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಸಮಾಜದ ಮುಖಂಡರಾದ ಶಶಿಕಲಾ ಭೀಮರಾಯ, ಬಿ.ಈರಣ್ಣ, ಯಂಕಪ್ಪ, ಇಂದಿರಾ ಈರಪ್ಪ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭೋವಿ ಸಮಾಜದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

