ನಾಗರಿಕರ ಸಹಭಾಗಿತ್ವ ಪ್ರಗತಿಗೆ ಪೂರಕ: ಡಿಸಿ
ಕ.ಪ್ರ. ವಾರ್ತೆ ರಾಯಚೂರು ಜ.14
ದೇಶದ ಭವಿಷ್ಯದ ಭದ್ರತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದ ವಿವಿಧ ಇಲಾಖೆಗಳ ಜತೆಗೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕರೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಮಂಗಳವಾರ ನಾಗರಿಕ ಬಂದೂಕು ತರಬೇತಿ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಭವ್ಯ ಭಾರತ ನಿರ್ಮಾಣ ಕೇವಲ ಅಧಿಕಾರಿಗಳಿಂದ ಅಸಾಧ್ಯ. ನಾಗರಿಕರು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿದಲ್ಲಿ ಮಾತ್ರ ದೇಶದ ಭವಿಷ್ಯ ಭವ್ಯವಾಗಲು ಸಾಧ್ಯ ಎಂದು ಹೇಳಿದರು.
ತರಬೇತಿಗಳು ಪೂರಕ: ತರಬೇತಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಪೊಲೀಸ್ ಇಲಾಖೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಮತ್ತು ಬಂದೂಕು ಬಳಕೆ ಬಗ್ಗೆ ಮಾಹಿತಿ ಒದಗಿಸಿದೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀಡಿದ ಸಲಹೆ ಮುಂದಿನ ಜೀವನದಲ್ಲಿಯೂ ಪಾಲಿಸಿ ಕೊಂಡು ಹೋಗುವಂತೆ ಸಲಹೆ ನೀಡಿದರು.
ಸಮಯ ಪ್ರಜ್ಞೆ, ಶಿಸ್ತು ಜೀವನದ ಪ್ರಗತಿಯಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತವೆ. ಶಿಸ್ತುಬದ್ಧ ಜೀವನದಿಂದ ವೈಯಕ್ತಿಕವಾಗಿ ಹಾಗೂ ದೇಶದ ಪ್ರಗತಿಗೆ ಕೊಡುಗೆ ನೀಡಲು ಅನುಕೂಲವಾಗುತ್ತದೆ ಎಂದ ಅವರು, ಸಮಾಜದಲ್ಲಿ ಜಾತಿ, ಮತ, ಪಂಥಗಳ ಹೆಸರಿನಲ್ಲಿ ಉಂಟಾಗಿರುವ ಕಂದಕದ ನಿವಾರಣೆಗೆ ಇಂಥ ತರಬೇತಿಗಳು ಪೂರಕವಾಗಿವೆ ಎಂದು ಹೇಳಿದರು.
ನಾಗರಿಕ ಬಂದೂಕು ತರಬೇತಿಯನ್ನು ಪಡೆದವರಿಗೆ ಪೊಲೀಸ್ ಇಲಾಖೆಯು ಎಲ್ಲ ರೀತಿಯ ಮಾಹಿತಿ ಒದಗಿಸಿದೆ. ಮುಂದಿನ ದಿನಗಳಲ್ಲಿ ನೈಸರ್ಗಿಕ ವಿಪತ್ತು ಮತ್ತಿತರೆ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ನೆರವಿಗೆ ಸಿದ್ಧರಿರುವಂತೆ ಸೂಚನೆ ನೀಡಿ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೊಂದುವುದು ಎಲ್ಲರ ಗುರಿಯಾಗಬೇಕೆಂದರು.
ವಿನೂತನ, ವೈಶಿಷ್ಟ್ಯಪೂರ್ಣ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆಯು 20 ವರ್ಷಗಳ ಸುದೀರ್ಘ ಸಮಯದ ನಂತರದಲ್ಲಿ ನಾಗರಿಕ ಬಂದೂಕು ತರಬೇತಿ ಆಯೋಜಿಸಿದೆ. ಈ ಮೂಲಕ ಜನತೆಯ ಬಹುದಿನದ ಬೇಡಿಕೆಯೂ ಈಡೇರಿದಂತಾಗಿದೆ ಎಂದು ತಿಳಿಸಿದರು.
ಸದ್ಯದ ನಾಗರಿಕ ಬಂದೂಕು ತರಬೇತಿ ಶಿಬಿರವು ರಾಯಚೂರಿನ ಇತಿಹಾಸದಲ್ಲಿಯೇ ವಿನೂತನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ. ಎಲ್ಲ ಜಾತಿ ಜನಾಂಗದವರು, ಸಮಾಜದಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿರುವವರೂ ತರಬೇತಿಯಲ್ಲಿ ಪಾಲ್ಗೊಂಡು ಶಿಬಿರದ ವಿಶೇಷ ಎಂದರು.
ಸಮಗ್ರ ತರಬೇತಿ: ಶಿಬಿರದಲ್ಲಿ 130 ಜನ ಬಂದೂಕಿನ ಭಾಗಗಳು, ಪರೇಡ್ ಮಾಡುವ ಬಗೆ, ಬಂದೂಕಿನ ಸದ್ಬಳಕೆ ಮತ್ತು ನಿರ್ವಹಣೆ ಕುರಿತು ತರಬೇತಿಯನ್ನು ಪಡೆದಿದ್ದಾರೆ. ಬಹುತೇಕರು ಆಸಕ್ತಿಯಿಂದ ಪಾಲ್ಗೊಂಡಿರುವುದು ಅವರ ಸಾಧನೆಯಿಂದಲೇ ಗೊತ್ತಾಗುತ್ತದೆ. ಈ ಮೂಲಕ ಬಂದೂಕಿನ ಸದ್ಬಳಕೆಯ ಬಗ್ಗೆ ಸಮಗ್ರ ತರಬೇತಿ ಒದಗಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬಂದೂಕು ತರಬೇತಿ ಪಡೆದವರಿಗೆ ಮಾತ್ರ ಬಂದೂಕು ಬಳಕೆಯ ಪರವಾನಗಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದ ಅವರು, ಈ ಮೂಲಕ ಬಂದೂಕಿನ ದುರ್ಬಳಕೆಯಿಂದಾಗುವ ಅನಾಹುತ ತಡೆಯುವುದು ಇಲಾಖೆಯ ಉದ್ದೇಶ ಎಂದು ಹೇಳಿದರು.
ಉತ್ತಮ ಸಾಧನೆ: ತರಬೇತಿಯಲ್ಲಿ ಬಂದೂಕು ಚಲಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರವೀಣಗೆ ಪ್ರಥಮ ಬಹುಮಾನ, ಈರಣ್ಣ ಅವರಿಗೆ ದ್ವಿತೀಯ ಮತ್ತು ಶ್ರೀಪಾಲ್ ಕೊಠಾರಿ ಅವರಿಗೆ ಮೂರನೇ ಬಹುಮಾನ ಜಿಲ್ಲಾ ಪೊಲೀಸ್ ಇಲಾಖೆಯಿಂದ ನೀಡಲಾಯಿತು.
ಡಿವೈಎಸ್ಪಿ ಎಂ. ಪಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಸ್ಪಿ ಕಾಶಪ್ಪನವರ್, ಆರ್ಎಸ್ಐ ಶರಣಪ್ಪ ಇದ್ದರು.
ನಾಗರಿಕ ಬಂದೂಕು ತರಬೇತಿಯಲ್ಲಿ ಪಾಲ್ಗೊಂಡವರ ಕುಟುಂಬದವರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

