ರಾಯಚೂರು

'371' ಶಿಫಾರಸು ಅನುಷ್ಠಾನಕ್ಕೆ ಹೋರಾಟ ಅನಿವಾರ್ಯ

Published On :

ಕ.ಪ್ರ. ವಾರ್ತೆ   ರಾಯಚೂರು   ಜ.19
ಹೈದರಾಬಾದ್ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿರುವ 371ನೇ ಕಲಂ(ಜೆ) ನ ಸಮರ್ಪಕ ಜಾರಿಗೆ ಮತ್ತು ಅದರಲ್ಲಿನ ಶಿಫಾರಸುಗಳ ನಿರ್ದಿಷ್ಟ ಕಾಲಮಿತಿಯಲ್ಲಿನ ಅನುಷ್ಠಾನಕ್ಕೆ ಮತ್ತೊಂದು ಹೋರಾಟ ಮಾಡುವುದು ಅನಿವಾರ್ಯ ಎಂದು ಹೈ.ಕ. ಹೋರಾಟ ಸಮಿತಿಯ ಮುಖಂಡ ಡಾ. ರಜಾಕ್ ಉಸ್ತಾದ್ ಕರೆ ನೀಡಿದರು.
ನಗರದ ಟಾಗೋರ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಹೈ.ಕ. ಭಾಗದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸದಸ್ಯರು ಹಾಗೂ ಉಪನ್ಯಾಸಕರ ಮಹತ್ವದ ಸಭೆಯಲ್ಲಿ ಮಾತನಾಡಿದರು.
ಅಭಿವೃದ್ಧಿ ಕುಂಠಿತ: ರಾಜ್ಯದಲ್ಲಿ ಕಳೆದ ಅನೇಕ ವರ್ಷಗಳಿಂದ ಹೈ.ಕ. ಭಾಗದವರಿಗೆ ನಿರಂತರ ಅನ್ಯಾಯವಾಗುತ್ತಲೇ ಸಾಗಿದೆ. ಈ ಭಾಗದಲ್ಲಿ ನಿರುದ್ಯೋಗಿ ಸಂಖ್ಯೆ ಹೆಚ್ಚುತ್ತಿದೆ. ಅಭಿವೃದ್ಧಿ ಕುಂಠಿತಗೊಂಡಿದೆ. 371ನೇ ಕಲಂಗಾಗಿ ನಡೆಸಿದ ಹೋರಾಟ ಫಲಪ್ರದವಾದರೂ ಅನುಷ್ಠಾನ ವಿಳಂಬದಿಂದ ಲಾಭ ದೊರೆಯುವುದು ಇನ್ನೂ ತಡವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ 25 ವರ್ಷಗಳಲ್ಲಿ ರಾಜ್ಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳ 2.12 ಲಕ್ಷ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಹೈ.ಕ. ಭಾಗಕ್ಕೆ ಕೇವಲ 12400 ಜನ ನೇಮಕಗೊಂಡಿದ್ದಾರೆ. ಇದು ಹೈ.ಕ. ಭಾಗಕ್ಕೆ ಆಗಿರುವ ಅನ್ಯಾಯ ಸಾಬೀತು ಮಾಡುತ್ತದೆ ಎಂದು ಹೇಳಿದರು.
ನೌಕರಿಯ ನಿರೀಕ್ಷೆಯಿಲ್ಲ: ರಾಜ್ಯ ಸರ್ಕಾರ ಹೊರಗುತ್ತಿಗೆ ಮತ್ತಿತರೆ ಪದ್ಧತಿ ಅನುಸರಿಸುತ್ತಿರುವುದರಿಂದ ವಿವಿಧ ಹುದ್ದೆಗಳಿಗೆ ಕಾಯಂ ನೇಮಕಾತಿ ಪದ್ಧತಿಯಡಿ ನೌಕರಿ ದೊರೆಯುವ ನಿರೀಕ್ಷೆಯಿಲ್ಲ. ಆಗೀಗ ನಡೆಯುವ ನೇಮಕಾತಿಯಲ್ಲಿಯೂ ಹೈ.ಕ. ಭಾಗದವರಿಗೆ ಅನ್ಯಾಯ ನಡೆಯುವುದನ್ನು ತಪ್ಪಿಸುವ ಅನಿವಾರ್ಯತೆಯಿದೆ.
ರಾಜ್ಯ ಸರ್ಕಾರ ರಚಿಸಿದ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಸಂಪುಟ ಉಪಸಮಿತಿಯು ನೀಡಿದ 24 ಶಿಫಾರಸುಗಳ ಪೈಕಿ ಹೈ.ಕ. ಭಾಗದಲ್ಲಿರುವ ಎಲ್ಲ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಅನುದಾನ ಒದಗಿಸಬೇಕೆಂದು ಹೇಳಲಾಗಿದೆ. ಅದಕ್ಕಾಗಿ ಆರು ತಿಂಗಳ ಕಾಲಮಿತಿಯನ್ನೂ ನಿಗದಿ ಮಾಡಿದೆ. ಆದರೆ ಸರ್ಕಾರ ಶಿಫಾರಸು ಅಂಗೀಕಾರವಾಗಿ ಆರು ತಿಂಗಳು ಗತಿಸಿದರೂ ಅನುಷ್ಠಾನ ಮಾತ್ರ ಕೈಗೊಂಡಿಲ್ಲ ಎಂದು ದೂರಿದರು.
ಶಿಕ್ಷಣ ಸಂಸ್ಥೆಗಳಿಗೆ ತಾರತಮ್ಯ: ಈಗಾಗಲೇ ಸಿಎಂ ಸಿದ್ದರಾಮಯ್ಯ ವಿಧಾನಮಂಡಲದ ಎರಡೂ ಸದನಗಳಲ್ಲಿ ಈ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ ಭರವಸೆ ಈಡೇರಲು ವಿಳಂಬವಾದರೆ ಇದುವರೆಗೆ ಹೈ.ಕ. ಭಾಗದ ಶೈಕ್ಷಣಿಕ ಬೆಳವಣಿಗೆಗಳಿಗೆ ಸಾಕಷ್ಟು ಕೊಡುಗೆ ನೀಡಿದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಾರತಮ್ಯ ಮಾಡಿದಂತಾಗುತ್ತದೆ ಎಂದು ಆರೋಪಿಸಿದರು.
ಈ ನಿಟ್ಟಿನಲ್ಲಿ ಹೈ.ಕ. ಭಾಗದ ಎಲ್ಲ ಸಂಸ್ಥೆಗಳು ಹಾಗೂ ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರು ಮತ್ತು ಬೋಧಕ ವರ್ಗದವರು ಹೋರಾಟಕ್ಕಿಳಿಯುವುದು ಅನಿವಾರ್ಯವಾದಂತಾಗಿದೆ ಎಂದ ಅವರು, ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರಲು ಇದು ಸಕಾಲ ಎಂದರು.
ಶಾಸಕರ ಮೇಲೆ ಒತ್ತಡ: ಬಳ್ಳಾರಿ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಮಾತನಾಡಿದ ಮಹೇಶ್ವರಸ್ವಾಮಿ, ಹೋರಾಟ ಸದ್ಯಕ್ಕೆ ಅನಿವಾರ್ಯ. ಆದರೆ ಅದಕ್ಕೂ ಮುನ್ನ ಹೈ.ಕ. ಭಾಗದ ವಿವಿಧ ಜಿಲ್ಲೆಗಳ ಶಾಸಕರ ಮೇಲೆ ಈ ಬಗ್ಗೆ ಒತ್ತಡ ಹೇರಬೇಕು. ಆನಂತರ ಸಿಎಂ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರಿಗೂ ಮನವಿ ಸಲ್ಲಿಸುವುದು ಹೆಚ್ಚು ಸೂಕ್ತ ಎಂದು ಹೇಳಿದರು. ಕೊಪ್ಪಳ ಜಿಲ್ಲೆಯ ಪ್ರತಿನಿಧಿ ರಾಘವೇಂದ್ರ ಪಾನಗಂಟಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಒದಗಿಸುವ ಜತೆಗೆ ಅಂಥ ಸಂಸ್ಥೆಗಳ ಶಾಲೆಗಳಿಗೆ ಸೌಲಭ್ಯ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ನೆರವು ನೀಡಲು ಮುಂದಾಗುವಂತೆ ಒತ್ತಾಯಿಸಿ ಹೋರಾಟ ಮಾಡುವ ಅವಶ್ಯಕತೆಯಿದೆ ಎಂದರು.
ಹೋರಾಟದ ಅವಶ್ಯಕತೆ: ನಗರದ ಖಾಸಗಿ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ. ಜಗದೀಶ್ ಮಾತನಾಡಿ, ಸಂಘಟನೆಯನ್ನು ಬಲಪಡಿಸುವ ಮೂಲಕ ಹೋರಾಟ ಮಾಡುವ ಅವಶ್ಯಕತೆಯಿದೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಹಾಗೂ ಬೋಧಕ ವರ್ಗದವರು ಒಗ್ಗೂಡಿ ಹೋರಾಡಿದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಗಂಗಾವತಿಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಿದ್ದರಾಮಯ್ಯಸ್ವಾಮಿ, ಸರ್ಕಾರದ ಮುಂದೆ ಮನವಿಯೊಂದಿಗೆ ತೆರಳುವ ಮೊದಲು ಒಗ್ಗೂಡುವಿಕೆ ಮತ್ತು ಹೋರಾಟಕ್ಕೆ ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಳ್ಳುವುದು ಸೂಕ್ತ. ಆನಂತರವಷ್ಟೇ ಹೋರಾಟಕ್ಕಿಳಿಯಬಹುದಾಗಿದೆ ಎಂದು ಹೇಳಿದರು. ಹೈ.ಕ. ಭಾಗದ ವಿವಿಧೆಡೆಯಿಂದ ಆಗಮಿಸಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಪ್ರಮುಖರು, ಉಪನ್ಯಾಸಕರು ಅನಿಸಿಕೆ ವ್ಯಕ್ತಪಡಿಸಿದರು. ರಾಘವೇಂದ್ರ ಕುಷ್ಟಗಿ, ಎಸ್.ಎಸ್. ಪಾಟೀಲ್, ಬಸವರಾಜ ಸಿರವಾರ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.