ಶ್ವಾನ ಪ್ರದರ್ಶನಕ್ಕೆ ಚಾಲನೆ
ರಾಯಚೂರು: ಸದ್ಯ ಎಲ್ಲ ಸಾಕು ಪ್ರಾಣಿಗಳಲ್ಲಿ ಶ್ವಾನವು ಅತಿಯಾದ ನಂಬುಗೆಯ ಸಾಕುಪ್ರಾಣಿಯಾಗಿದೆ. ಶ್ವಾನ ಸಾಕಾಣಿಕೆಗೆ ಬಹುತೇಕರು ಈಚಿನ ದಿನಗಳಲ್ಲಿ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ಅವರು ನಗರದ ರಾಯಚೂರು ಕೃಷಿ ವಿವಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಾಣಿಗಳೊಂದಿಗೆ ಸ್ನೇಹದಿಂದ ವರ್ತಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಜಿಲ್ಲೆಯಲ್ಲಿ ಶ್ವಾನವನ್ನು ಸಾಕುವವರ ಸಂಖ್ಯೆಯೂ ಗಣನೀಯವಾಗಿರುವುದು ಮೆಚ್ಚುಗೆ ಸಂಗತಿ ಎಂದರು.
ನಂಬುಗೆಯ ಪ್ರಾಣಿಯಾಗಿರುವ ಶ್ವಾನವನ್ನು ಸಾಕುವುದು ಇಂದು ಬಹಳಷ್ಟು ಜನರಿಗೆ ಅಚ್ಚುಮೆಚ್ಚಿನ ಕಾರ್ಯವಾಗಿದೆ. ದೇಶೀ ಹಾಗೂ ವಿದೇಶಿ ತಳಿಗಳ ಶ್ವಾನಗಳನ್ನು ಖರೀದಿಸಿ ಸಾಕಾಣಿಕೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಶ್ವಾನ ಪ್ರದರ್ಶನದಂಥ ಕಾರ್ಯಕ್ರಮಗಳು ವಿವಿಧ ತಳಿಗಳ ಬಗ್ಗೆ ಮಾಹಿತಿಯೊದಗಿಸುವ ಜತೆಗೆ ಮತ್ತಷ್ಟು ಜನರಿಗೆ ಶ್ವಾನ ಸಾಕಣೆಗೆ ಪ್ರೇರಣೆ ನೀಡಲಿವೆ ಎಂದು ಹೇಳಿದರು.
20 ತಳಿಗಳ ಪ್ರದರ್ಶನ: ಪಶುವೈದ್ಯಕೀಯ ಇಲಾಖೆಯ ಡಾ. ರಶೀದ್ ಇಕ್ಬಾಲ್ ಮಾತನಾಡಿ, 15ರಿಂದ 20 ವಿವಿಧ ತಳಿಗಳ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, 200ಕ್ಕೂ ಹೆಚ್ಚಿನ ಸಂಖ್ಯೆಯ ಶ್ವಾನಗಳು ಪ್ರದರ್ಶನದಲ್ಲಿವೆ. ಸ್ಪರ್ಧೆಯನ್ನು ಆಯಾ ತಳಿಗಳ ಶ್ವಾನಗಳ ಮಧ್ಯೆಯೇ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಜೋತ್ಸ್ನಾ, ನಿರ್ಣಾಯಕರಾದ ಪ್ರೊ. ರಂಗನಾಥ್, ರವಿಕುಮಾರ್ ಸೇರಿದಂತೆ ಕೃಷಿ ವಿವಿಯ ಸಿಬ್ಬಂದಿಯಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಶ್ವಾನ ಪ್ರಿಯರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ಗಮನಸೆಳೆದ ಶ್ವಾನ ಪ್ರದರ್ಶನ: ಬಿಸಿಲ ನಾಡು ರಾಯಚೂರಿಗೆ ಶ್ವಾನ ಪ್ರದರ್ಶನ ತೀರಾ ಹೊಸ ಪ್ರಯೋಗ. ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಇಂಥ ಶ್ವಾನ ಪ್ರದರ್ಶನ ನಡೆದಿತ್ತು. ಹಾಗಾಗಿ ಬಹುವರ್ಷಗಳ ನಂತರದಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನಕ್ಕೆ ನಗರ ಸೇರಿದಂತೆ ಶಕ್ತಿನಗರ ಮತ್ತಿತರೆ ಪ್ರದೇಶದಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಶ್ವಾನ ಪ್ರಿಯರು ಆಗಮಿಸಿದ್ದರು.
ಶ್ವಾನಗಳ ಮಾಲೀಕರು ತಮ್ಮ ಮುದ್ದಿನ ಶ್ವಾನಗಳನ್ನು ಹಿಡಿದು ಕೃಷಿ ಆವರಣದಲ್ಲೆಡೆ ಸುತ್ತಾಡಿಸುತ್ತಾ ಎಲ್ಲರ ಗಮನಸೆಳೆದರೆ, ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಪೊಮೆರಿಯೆನ್, ಲ್ಯಾಬ್ರೋಡಾರ್, ಡಾಬರ್ಮನ್ ಮತ್ತಿತರೆ ತಳಿಗಳ ಶ್ವಾನಗಳು ಮಾಲೀಕರ ಸೂಚನೆಗಳನ್ನು ಚಾಚೂ ತಪ್ಪದೇ ಪ್ರದರ್ಶಿಸುವ ಮೂಲಕ ವಿಶ್ವಾಸಾರ್ಹತೆಯನ್ನು ಸಾಬೀತು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಇನ್ನು ಭಾನುವಾರವಾದ್ದರಿಂದ ಶಾಲಾ ಮಕ್ಕಳು, ಚಿಣ್ಣರೂ ವಿವಿ ಆವರಣದಲ್ಲಿನ ಶ್ವಾನ ಪ್ರದರ್ಶನಕ್ಕೆ ಆಗಮಿಸಿದ್ದರು. ಅಷ್ಟೇ ಅಲ್ಲ ಶ್ವಾನಗಳನ್ನು ವೀಕ್ಷಿಸಿ ಆನಂದಿಸಿದ್ದು ಕಂಡುಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

