ರಾಯಚೂರು

ಬತ್ತ ಖರೀದಿಗೆ ಹಿಂದೇಟು: ಅಧಿಕಾರಿಗಳ ತರಾಟೆ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಜ.22
ಬತ್ತಕ್ಕೆ ಬೆಂಬಲ ಬೆಲೆ ಪ್ರಕಟಿಸಿ ಖರೀದಿ ಕೇಂದ್ರ ಆರಂಭಿಸಿ ಎಂದು ಒತ್ತಾಯಿಸಿದ್ದ ರೈತರಿಗೆ ಭ್ರಮನಿರಸನವಾಗುವ ರೀತಿಯಲ್ಲಿ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರೈತರು ಕೇಂದ್ರಕ್ಕೆ ಬತ್ತದೊಂದಿಗೆ ಆಗಮಿಸಿದರೆ ಖರೀದಿಗೆ ಅಧಿಕಾರಿಗಳು ನಿರಾಸಕ್ತಿ ತೋರುತ್ತಿರುವುದು ಬೆಳಕಿಗೆ ಬಂದಿದೆ. ಇಲ್ಲಸಲ್ಲದ ಕಾರಣವೊಡ್ಡಿ ರೈತರನ್ನು ವಾಪಸು ಕಳಿಸುವ ವರ್ತನೆಗೆ ಬುಧವಾರ ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಆವರಣದಲ್ಲಿನ ಬತ್ತ ಖರೀದಿ ಕೇಂದ್ರಕ್ಕೆ ಎರಡು ಟ್ರಾಕ್ಟರ್‌ಗಳಲ್ಲಿ ರೈತರು ಬತ್ತ ಮಾರಾಟಕ್ಕೆ ತಂದಿದ್ದಾರೆ. ಆದರೆ ಕೇಂದ್ರದ ಅಧಿಕಾರಿಗಳು ಬತ್ತ ಖರೀದಿಗೆ ನೇರಾನೇರ ನಿರಾಕರಿಸುವ ಬದಲಿಗೆ ಭತ್ತ ಗುಣಮಟ್ಟದ ಬಗ್ಗೆಯೇ ಶಂಕೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಹತ್ತಾರು ಕಾರಣವೊಡ್ಡಿದ್ದಾರೆಂದು ಆರೋಪಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ರೈತರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ವಿಳಂಬ: ಕಳೆದ ಕೆಲ ದಿನಗಳ ಹಿಂದಷ್ಟೇ ರೈತರು ಬತ್ತದ ಬೆಳೆಯ ಸ್ಯಾಂಪಲ್ ಖರೀದಿ ಕೇಂದ್ರಕ್ಕೆ ತಂದಿದ್ದಾರೆ. ಆಗ ಖರೀದಿ ಕೇಂದ್ರದ ಅಧಿಕಾರಿಗಳು ಪರಿಶೀಲಿಸಿ, ವಾರ ಬಿಟ್ಟು ಖರೀದಿ ಕೇಂದ್ರಕ್ಕೆ ತರುವಂತೆ ಸೂಚಿಸಿದ್ದಾರೆ. ಅದರಂತೆ ಎರಡು ದಿನಗಳ ಹಿಂದೆ ರೈತರು ಖರೀದಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಧಿಕಾರಿಗಳೇ ರೈತರ ಹೊಲದಲ್ಲಿ ಬತ್ತ ಪರೀಕ್ಷಿಸುವುದಾಗಿ ಹೇಳಿ, ಅಲ್ಲಿಗೆ ತೆರಳಿ ಬತ್ತ ಗುಣಮಟ್ಟದ್ದಾಗಿದೆ, ಖರೀದಿ ಕೇಂದ್ರಕ್ಕೆ 50ಕೆಜಿ ಚೀಲಗಳಲ್ಲಿ ತುಂಬಿ ತರುವಂತೆ ಸೂಚಿಸಿದ್ದಾರೆ.
ಅಧಿಕಾರಿಗಳ ಮಾತಿನಂತೆಯೇ ರೈತರು ಬುಧವಾರ ಬೆಳಗ್ಗೆ ಖರೀದಿ ಕೇಂದ್ರಕ್ಕೆ 50ಕೆಜಿ ಚೀಲಗಳಲ್ಲಿ ಬತ್ತ ತುಂಬಿಕೊಂಡು ಮಾರಾಟಕ್ಕೆ ಆಗಮಿಸಿದ ರೈತರಿಗೆ ಮತ್ತೆ ಅಧಿಕಾರಿಗಳು ಖರೀದಿಗೆ ನಿರಾಕರಿಸಿದ್ದಾರೆಂದು ಆರೋಪಿಸಲಾಗಿದೆ.
ಅಸಮಾಧಾನ: ಇದರಿಂದ ತೀವ್ರ ಆಕ್ರೋಶಗೊಂಡ ರೈತರು ಖರೀದಿ ಕೇಂದ್ರ ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಚಂದ್ರಬಂಡಾ ಗ್ರಾಮದ ಬತ್ತ ಬೆಳೆದ ರೈತರು ಟ್ರ್ಯಾಕ್ಟರ್‌ನಲ್ಲಿ ಬತ್ತವನ್ನು ಇರಿಸಿಕೊಂಡು ಖರೀದಿ ಕೇಂದ್ರಕ್ಕೆ ತಂದ ನಂತರದಲ್ಲಿ ಆಕ್ಷೇಪಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತರು, ಈ ಬಗ್ಗೆ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ಅವರಿಗೆ ದೂರವಾಣಿಯಲ್ಲಿ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅವರು ಆಹಾರ ಇಲಾಖೆ ಉಪನಿರ್ದೇಶಕರನ್ನು ಖರೀದಿ ಕೇಂದ್ರಕ್ಕೆ ಕರೆಯಿಸಿ ರೈತರಿಗಾಗು ತ್ತಿರುವ ಅನ್ಯಾಯದ ಬಗ್ಗೆ ವಿವರಿಸಿ ಎಚ್ಚರಿಸಿದ್ದಾರೆ. ಅಧಿಕಾರಿಗಳ ವರ್ತನೆ ಸುಧಾರಣೆ ಕಾಣದಿದ್ದಲ್ಲಿ ಹೋರಾಟಕ್ಕಿಳಿಯುವ ಮುನ್ಸೂಚನೆಯನ್ನೂ ನೀಡಿ ಖರೀದಿ ಕೇಂದ್ರದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
  ಈ ಸಂದರ್ಭ ಆಹಾರ ಇಲಾಖೆಯ  ಉಪನಿರ್ದೇಶಕ ಪಶುಪತಿ ಬತ್ತ ಪರಿಶೀಲಿಸಿ ಖರೀದಿಸಲು ಯೋಗ್ಯವಾಗಿವೆ ಎಂದು ಬುದ್ಧಿ ಹೇಳಿದ ನಂತರ ಖರೀದಿ ಕೇಂದ್ರದ ಅಧಿಕಾರಿಗಳು ಬತ್ತ ಖರೀದಿಸಿದರು.
ಅವ್ಯವಸ್ಥೆಯ ಆಗರ: ನಗರದಲ್ಲಿ ಸರ್ಕಾರದಿಂದ ಆರಂಭಿಸಿರುವ ಬತ್ತ ಖರೀದಿ ಕೇಂದ್ರವು ಅವ್ಯವಸ್ಥೆಯ ಆಗರವಾಗಿದೆ. ರೈತರಿಗೆ ಅನುಕೂಲಕರ ಸ್ಥಳದಲ್ಲಿ ಕೇಂದ್ರ ಸ್ಥಾಪಿಸಿಲ್ಲ ಎಂಬ ಆರೋಪ ಒಂದೆಡೆಯಾದರೆ, ರೈತರು ಮಾರಾಟಕ್ಕೆ ತರುವ ಬತ್ತದ ಗುಣಮಟ್ಟ ಪರೀಕ್ಷೆಗೆ ತಜ್ಞರನ್ನೇ ನೇಮಿಸಿಲ್ಲ ಎಂಬುದು ಬಯಲಾಗಿದೆ.
 ಖರೀದಿ ಕೇಂದ್ರದ ಅಧಿಕಾರಿಗಳು ಸಲ್ಲದ ಸಬೂಬು ಒಡ್ಡಿ ರೈತರು ತರುವ ಬತ್ತವನ್ನು ಅಕ್ಕಿ ಗಿರಣಿಗಳಿಗೆ ಕೊಂಡೊಯ್ಯುವಂತೆ ಸಲಹೆ ನೀಡುತ್ತಿದ್ದಾರೆಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಈ ವೇಳೆ ಆರೋಪಿಸಿ, ಬತ್ತ ಖರೀದಿ ಕೇಂದ್ರ ಅವ್ಯವಸ್ಥೆ ಆಗರವಾಗಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಖರೀದಿ ಕೇಂದ್ರದ ಅಧಿಕಾರಿಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.