ರಾಯಚೂರು

ಮಕ್ಕಳ ಹಕ್ಕುಗಳಿಗೆ ಮೊದಲಾದ್ಯತೆ ಕೊಡಿ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಜ.22
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಕ್ಕಳ ಹಕ್ಕುಗಳಿಗೆ ಪ್ರಣಾಳಿಕೆಯಲ್ಲಿ ಮೊದಲಾದ್ಯತೆಗೆ ಒತ್ತಾಯಿಸಿ ಜ.25ರಿಂದ ಫೆ.10ರವರೆಗೆ ಜಿಲ್ಲಾದ್ಯಂತ 50ಸಾವಿರ ಜನರ ಸಹಿ ಸಂಗ್ರಹ ಚಳವಳಿ ನಡೆಸಲಾಗುತ್ತದೆ ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನ ತಿಳಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆಯ ಮುಖಂಡ ಕೆ.ಪಿ. ಅನಿಲಕುಮಾರ್, ರಾಷ್ಟ್ರದ ಜನಸಂಖ್ಯೆಯ ಮೂರನೇ ಒಂದು ಭಾಗ ಮಕ್ಕಳಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ  ಭಾರತದಲ್ಲಿ ಎಲ್ಲ ಕಾಯಿದೆ ಕಾನೂನುಗಳು ಹಾಗೂ ಕಾರ್ಯಕ್ರಮಗಳು ಮಕ್ಕಳತ್ತಲೇ ಕೇಂದ್ರಿತವಾಗಿರಬೇಕಿತ್ತು. ಆದರೆ ರಾಜಕೀಯ ಪಕ್ಷಗಳವರು ಮಕ್ಕಳ ಹಕ್ಕುಗಳ ಬಗ್ಗೆ ಸೊಲ್ಲೆತ್ತಿಲ್ಲ ಎಂದು ಆರೋಪಿಸಿದರು.
ಪ್ರಣಾಳಿಕೆಯಲ್ಲಿರಲಿ: ದೇಶದ ಪ್ರತಿ ಮಗು ಸಂತೋಷ, ಆರೋಗ್ಯಕರ ಮತ್ತು ಸೃಜನಾತ್ಮಕ ಬಾಲ್ಯವನ್ನು ಅನುಭವಿಸುವಂಥ ವ್ಯವಸ್ಥೆ ನಿರ್ಮಿಸುವ ಕಾರ್ಯ ದೇಶದ ರಾಜಕೀಯ ನಾಯಕರು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಾದರೂ ಮಕ್ಕಳ ವಿಚಾರವನ್ನೇ ಮೊದಲಾದ್ಯತೆ ಮಾಡಿಕೊಳ್ಳುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಹಿ ಸಂಗ್ರಹ ಚಳವಳಿ ಆಯೋಜಿಸಲಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಜ.24ರಂದು ನಗರದ ಪತ್ರಿಕಾ ಭವನದಲ್ಲಿ ಸಮಾಲೋಚನಾ ಸಭೆಯನ್ನು ಕರೆದಿದೆ. ಜ.25ರಿಂದ ಫೆ.10 ರವರೆಗೆ ಜಿಲ್ಲೆಯ ವಿವಿಧೆಡೆ ಸಂಘಟನೆಯವರು ಸಂಚರಿಸಿ ಜಾಗೃತಿ ಮೂಲಕ 50ಸಾವಿರ ಜನರ ಸಹಿ ಸಂಗ್ರಹಿಸಿ ರಾಜಕೀಯ ಪಕ್ಷಗಳಿಗೆ ಸಲ್ಲಿಸುವ ಮೂಲಕ ಒತ್ತಡ ಹೇರಲಾಗುತ್ತದೆ ಎಂದರು.
ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ 2013ರ ಮಕ್ಕಳ ರಾಷ್ಟ್ರೀಯ ನೀತಿಯಂತೆ ಮಕ್ಕಳಿಗೆ ಸಂಬಂಧಿಸಿದ ಎಲ್ಲ ಕಾಯಿದೆಗಳಲ್ಲಿ 18ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲರನ್ನೂ ಮಕ್ಕಳೆಂದು ಪರಿಗಣಿಸಬೇಕು. 2009ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಮೂಲಭೂತ ಹಕ್ಕೆಂದು ಪರಿಗಣಿಸಿ ಅದಕ್ಕೆ ತಿದ್ದುಪಡಿ ತಂದು ಸೊನ್ನೆಯಿಂದ ಆರು ವರ್ಷ ಮತ್ತು 14 ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳನ್ನು ಕಾಯಿದೆ ವ್ಯಾಪ್ತಿಗೆ ಸೇರಿಸಬೇಕೆಂದು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಗುಣಮಟ್ಟದ ಪೂರಕ ಹಾಗೂ ಪೌಷ್ಟಿಕ ಆಹಾರ, ಮಕ್ಕಳ ಮಹಿಳೆಯರ ಮತ್ತು ಬಾಣಂತಿಯರ ಆರೋಗ್ಯ ತಪಾಸಣೆ, ರೋಗ ನಿರೋಧಕ ಲಸಿಕೆ ನೀಡಿಕೆ, ಪೌಷ್ಟಿಕ ಆಹಾರ ಮತ್ತು ಆರೋಗ್ಯ ಶಿಕ್ಷಣ ಹಾಗೂ ಗುಣಮ್ಟದ ಶಾಲಾ ಪೂರ್ವ ಶಿಕ್ಷಣದ ಸೇವೆ ಒದಗಿಸಬೇಕು.ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಅಪೌಷ್ಟಿಕತೆ: ಶಿಶು ಮರಣ ಹಾಗೂ ಅನಾರೋಗ್ಯ ಪ್ರಮಾಣ ತಡೆಗೆ ಮತ್ತು ಅಪೌಷ್ಟಿಕತೆಯಿಂದ ಮಗು ಬಳಲದಂತೆ ತಡೆಯಲು ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ರೂಪಿಸಬೇಕು. ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಿಕೆಯನ್ನು ಮೂಲಭೂತ ಹಕ್ಕಾಗಿಸಬೇಕು. 2012ರ ಬಾಲಕಾರ್ಮಿಕ ಕಾಯಿದೆ ತಿದ್ದುಪಡಿ ತಂದು ಅಪಾಯಕಾರಿ ಮತ್ತು ಅಪಾಯರಹಿತ ಕೆಲಸಗಳೆರಡರಲ್ಲೂ ಕಾರ್ಯನಿರ್ವಹಿಸುವ 18 ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕ ಮಕ್ಕಳೆಂದು ಪರಿಗಣಿಸಬೇಕೆಂದು ರಾಜಕೀಯ ಪಕ್ಷಗಳಿಗೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಆಯವ್ಯಯ: ಮಕ್ಕಳನ್ನು ದೌರ್ಜನ್ಯದಿಂದ ಪಾರು ಮಾಡಿ ಅವರಿಗೆ ಪುನಾವಸತಿ ಕಲ್ಪಿಸುವಂಥ ಕಾರ್ಯಕ್ಕೆ ಸೂಕ್ತ ಅನುದಾನ ಒದಗಿಸಬೇಕು. ಸಮಾಜದ ಎಲ್ಲ ವರ್ಗಗಳಿಗೆ ಹಾಗೂ ವಿಕಲಚೇತನರು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಅವಕಾಶಗಳನ್ನು ನೀಡಬೇಕು. ಆಯವ್ಯಯದಲ್ಲಿ ಮಕ್ಕಳಿಗೆ ಸದ್ಯ ಶೇ.4.64ರಷ್ಟು ಅನುದಾನ ನಿಗದಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಶೇ.10ಕ್ಕೇರಿಸುವ ಭರವಸೆ ಪ್ರಣಾಳಿಕೆಯಲ್ಲಿ ನೀಡಿ ಜಾರಿಗೆ ತರುವಂತೆ ಚಳವಳಿ ವೇಳೆ ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಎಂ.ಆರ್.ಭೇರಿ, ಹೇಮರಾಜ ಅಸ್ಕಿಹಾಳ, ಚಂದ್ರಶೇಖರ್ ಯಕ್ಲಾಸ ಪುರ, ತಾಯಪ್ಪ ಹೆಗ್ಗಸನಹಳ್ಳಿ, ಶಿವರಾಮ ರೆಡ್ಡಿ, ವಿದ್ಯಾ ಪಾಟೀಲ್, ಎಸ್. ಹುಲಿಗೆಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.