ಮಾಸ್ಟರ್ ಪ್ಲಾನ್ಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ ರಾಯಚೂರು ಜ.23
ನಗರದ ರಸ್ತೆಗಳು ಇಕ್ಕಟ್ಟಾಗಿದ್ದು ರಸ್ತೆಗಳ ಅಗಲೀಕರಣ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಜಾರಿಗೆ ತರಬೇಕು. ನಗರದಲ್ಲಿ ಸಂಚರಿಸುತ್ತಿರುವ ನಗರ ಸಾರಿಗೆ ಬಸ್ಗಳಿಂದಾಗಿ ಆಟೋ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಬಸ್ ಗಳ ಸಂಖ್ಯೆ ಕಡಿತಗೊಳಿಸುವಂತೆ ಒತ್ತಾಯಿಸಿ ಗುರುವಾರ ವಿವಿಧ ಆಟೋ ಚಾಲಕರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ನೇತಾಜಿ ನಗರದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನೆ ನಡೆಸಿದ ಸಂಜೀವಿನಿ ಆಟೋ ಚಾಲಕರ ಸಂಘ ಹಾಗೂ ಅಲ್ಪಸಂಖ್ಯಾತರ ಆಟೋ ಚಾಲಕರ ವಿವಿಧೋದ್ದೇಶ ಸಹಕಾರಿ ಸಂಘದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದ ರಸ್ತೆಗಳು ತೀರಾ ಇಕ್ಕಟ್ಟಾಗಿವೆ. ಹಳೆಯ ಕಾಲದ ರಸ್ತೆಗಳಲ್ಲಿ ನೂರಾರು ಸಂಖ್ಯೆಯ ಬೈಕ್ಗಳು, ನಗರ ಸಾರಿಗೆ ಬಸ್ಗಳು, ಕಾರು ಸೇರಿ ಅನೇಕ ವಾಹನಗಳು ಏಕಕಾಲಕ್ಕೆ ಸಂಚರಿಸುತ್ತಿದ್ದು, ಅದರಿಂದ ಸಂಚಾರ ಅವ್ಯವಸ್ಥೆಗೆ ದಾರಿ ಮಾಡಿದೆ ಎಂದು ಆರೋಪಿಸಿದರು.
ರಸ್ತೆ ಸಂಚಾರಕ್ಕೆ ತೊಂದರೆ: ನಗರದ ತೀನ್ ಕಂದೀಲ್, ಸೂಪರ್ ಮಾರ್ಕೆಟ್, ಬಟ್ಟೆ ಬಜಾರ್, ಸರಾಫ್ ಬಜಾರ್ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಇಕ್ಕಟ್ಟಾಗಿವೆ. ಅದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಾಸ್ಟರ್ ಪ್ಲಾನ್ ಜಾರಿ ಮೂಲಕ ಎಲ್ಲ ಇಕ್ಕಟ್ಟಾದ ರಸ್ತೆಗಳ ಅಗಲೀಕರಣಕ್ಕೆ ಮುಂದಾಗುವಂತೆ ಒತ್ತಾಯಿಸಿದರು.
ನಗರದಲ್ಲಿ ರಸ್ತೆಗಳು ಹಾಳಾಗಿದ್ದು, ಅದರಿಂದಾಗಿ ಆಟೋಗಳು ಮೇಲಿಂದ ಮೇಲೆ ದುರಸ್ತಿಗೀಡಾಗುತ್ತಿವೆ. ಲಕ್ಷಾಂತರ ರು. ಸಾಲ ಮಾಡಿ ತಂದ ಆಟೋಗಳ ದುರಸ್ತಿಗೆ ಗಳಿಸಿದ ಹಣವೆಲ್ಲ ಪೋಲಾಗುತ್ತಿದೆ. ಅಷ್ಟೇ ಅಲ್ಲ ಈಚೆಗೆ ಸಾರಿಗೆ ಸಂಸ್ಥೆಯು ನಗರದಲ್ಲಿ ನಗರ ಸಾರಿಗೆ ಸಂಚಾರದ 20ಕ್ಕೂ ಹೆಚ್ಚಿನ ಬಸ್ ಗಳನ್ನು ಓಡಿಸುತ್ತಿದೆ. ಅದರಿಂದ ಆಟೋಗಳ ಆದಾಯಕ್ಕೆ ಹಿನ್ನಡೆಯಾಗಿದೆ. ಆರ್ಥಿಕ ಸಂಕಷ್ಟಕ್ಕೆ ಚಾಲಕರು ಸಿಲುಕಿದ್ದಾರೆಂದು ಆರೋಪಿಸಿದರು.
ಸಿಟಿ ಬಸ್ ಸಂಚಾರ ಕಡಿತಗೊಳಿಸಿ: ಕಾರಣ ಕೂಡಲೇ ನಗರದಲ್ಲಿ ಸಿಟಿ ಬಸ್ಗಳ ಸಂಚಾರ ಅರ್ಧದಷ್ಟು ಕಡಿಮೆ ಮಾಡಬೇಕು. ಮಾಸ್ಟರ್ ಪ್ಲಾನ್ ಜಾರಿಗೆ ತಂದು ರಸ್ತೆ ಅಗಲೀಕರಣ ಮಾಡಬೇಕು. ಸಿಟಿ ಬಸ್ಗಳು ನಿಗದಿ ಮಾಡಿದ ಸ್ಥಳದಲ್ಲಿಯೇ ನಿಲುಗಡೆ ಮಾಡಬೇಕು. ಆಟೋ ಚಾಲಕರಿಗೆ ಪೆಟ್ರೋಲ್ ಮತ್ತು ಆಟೋ ಗ್ಯಾಸ್ ರಿಯಾಯಿತಿ ದರದಲ್ಲಿ ಒದಗಿಸಬೇಕೆಂದು ಆಗ್ರಹಿಸಿದರು.
ಬೇಡಿಕೆಗಳನ್ನು 15 ದಿನದಲ್ಲಿ ಈಡೇರಿಸದಿದ್ದರೆ ಆಟೋ ಚಾಲಕರು ನಗರದಲ್ಲಿ ಅನಿರ್ದಿಷ್ಟ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದರು. ಈ ವೇಳೆ ವಿವಿಧ ಆಟೋ ಚಾಲಕರ ಸಂಘಟನೆಯ ಪ್ರಮುಖರಾದ ಅಮರೇಶ್, ಮೆಹಬೂಬ್ ಆಲಂ, ಎಂ.ಎ. ಅಲಿ, ಜಿ.ನರಸಿಂಹಲು, ಎಂ.ಡಿ.ಖದೀರ್, ಜಾಫರ್, ನೂರ್ ಅಹ್ಮದ್, ಶೇಖ್ ಹಾರೂನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

