ರಾಯಚೂರು

ಹಂಗಾಮಿ ಕಾರ್ಮಿಕರ ಅನಿರ್ದಿಷ್ಟ ಧರಣಿ

Published On :

ಕ.ಪ್ರ. ವಾರ್ತೆ  ರಾಯಚೂರು  ಜ.23
ಮೂರು ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಕಾರ್ಯಕರ್ತರು ಅನಿರ್ದಿಷ್ಟ ಧರಣಿ ಆರಂಭಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಆರಂಭಿಸಿದ ಕಾರ್ಮಿಕರು ಕಳೆದ ಮೂರು ತಿಂಗಳಿಂದ ಹಂಗಾಮಿ ಕಾರ್ಮಿಕರು ತುಂಗಭದ್ರಾ ನೀರಾವರಿ ಇಲಾಖೆಯಿಂದ ವೇತನ ನೀಡಿಲ್ಲ. 9 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುವ ನೀರಾವರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ವೇತನವನ್ನು ಸರಿಯಾಗಿ ಪಾವತಿಸುತ್ತಿಲ್ಲ ಎಂದು ಆರೋಪಿಸಿದರು.
ಕಾರ್ಮಿಕರ ಕೊರತೆ: ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ 1,818 ಜನ ಕಾರ್ಮಿಕರ ಅವಶ್ಯಕತೆಯಿದ್ದು, ಸದ್ಯ 1,130 ಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ 1,818 ಕಾರ್ಮಿಕರ ಕಾರ್ಯವನ್ನೂ ಸದ್ಯ ಲಭ್ಯವಿರುವ ಕಾರ್ಮಿಕರಿಂದಲೇ ಕೆಲಸ ಪಡೆಯಲಾಗುತ್ತಿದೆ ಎಂದು ದೂರಿದರು.
ಕಳೆದ 25 ವರ್ಷಗಳಿಂದ ಹಂಗಾಮಿ ಕಾರ್ಮಿಕರು ಸತತ ದುಡಿಯುತ್ತಿದ್ದರೂ ಕಾನೂನಿನಂತೆ ದಿನಗೂಲಿ ಪಾವತಿಸಲಾಗುತ್ತಿಲ್ಲ. ಹಾಜರಾತಿ ಪುಸ್ತಕ ನಿರ್ವಹಣೆಯಾಗುತ್ತಿಲ್ಲ. ವೇತನ ಚೀಟಿ, ಭವಿಷ್ಯ ನಿಧಿಯಂಥ ಸವಲತ್ತುಗಳು ದೊರೆತಿಲ್ಲ. ವರ್ಷಪೂರ್ತಿ ಕೆಲಸ ಕೊಡದೇ ಕಾಲುವೆಯಲ್ಲಿ ನೀರಿನ ಹರಿವಿದ್ದಾಗ ಮಾತ್ರ ಕೆಲಸ ಪಡೆದು ಆನಂತರದಲ್ಲಿ ಮನೆಗೆ ಕಳಿಸುವ ಪದ್ಧತಿ ಜಾರಿಯಲ್ಲಿದೆ ಎಂದು ಆರೋಪಿಸಿದರು.
ಸೌಲಭ್ಯಕ್ಕೆ ಆಗ್ರಹ: ತಿಂಗಳಿಗೆ 26 ದಿನ ಹಾಗೂ ವರ್ಷಪೂರ್ತಿ ಕೆಲಸದ ಭರವಸೆ ಕಾರ್ಮಿಕರಿಗೆ ನೀಡಬೇಕು. ಹಂಗಾಮಿ ಕಾರ್ಮಿಕರಿಗೆ ಸರ್ಕಾರ ನಿಗದಿಗೊಳಿಸಿದ ದರದಲ್ಲಿ ದಿನಗೂಲಿ ಪಾವತಿಸಬೇಕು. ಕಾರ್ಮಿಕರಿಗೆ ಸಮವಸ್ತ್ರ, ಗುರುತಿನ ಚೀಟಿ, ಸುರಕ್ಷತಾ ಸಲಕರಣೆ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಹಂಗಾಮಿ ಕಾರ್ಮಿಕರ ಮೇಲೆ ನಡೆಯುತ್ತಿರುವ ಕಿರುಕುಳ ನಿಲ್ಲಬೇಕು. ಕಾರ್ಮಿಕರ ವರ್ಗಾವಣೆ ಮಾಡುವುದು ಸರಿಯಲ್ಲ. ಇಂಥ ಎಲ್ಲ ಬೇಡಿಕೆಗಳನ್ನಿರಿಸಿ ಅನೇಕ ವರ್ಷಗಳಿಂದ ಸಂಘಟನೆಯು ಹೋರಾಡುತ್ತಿದ್ದರೂ ಅಧಿಕಾರಿಗಳಾಗಲೀ, ಸರ್ಕಾರಗಳಾಗಲೀ ಕಿವಿಗೊಡುತ್ತಿಲ್ಲ ಎಂದು ದೂರಿದರು.
ಅನಿರ್ದಿಷ್ಟಾವಧಿ ಧರಣಿ: ಈಗಾಗಲೇ ಮುನಿರಾಬಾದ್‌ನ ನೀರಾವರಿ ಕಚೇರಿಯ ಮುಖ್ಯ ಎಂಜಿನಿಯರ್ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳಿಗೆ ಹಂಗಾಮಿ ಕಾರ್ಮಿಕರ ಹೋರಾಟದ ಬಗ್ಗೆ ಎಚ್ಚರಿಸಲಾಗಿದೆ. ಬೇಡಿಕೆ ಈಡೇರಿಸುವವರೆಗೆ ಹಂಗಾಮಿ ಕಾರ್ಮಿಕರು ಅನಿರ್ದಿಷ್ಟ ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಹಂಗಾಮಿ ಕಾರ್ಮಿಕರ ಹೋರಾಟಕ್ಕೆ ಬೆಂಬಲಿಸಬೇಕು. ರೈತರು, ಅಕ್ಕಿ ಗಿರಣಿಗಳ ಮಾಲೀಕರು, ವಾಣಿಜ್ಯೋದ್ಯಮಿಗಳು ಹಾಗೂ ಕಾರ್ಮಿಕರು ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ಮಾನಸಯ್ಯ, ವಾದಿರಾಜ್ ಜಗನ್ನಾಥರಾವ್, ಅಡವಿ ರಾವ್, ಸಿದ್ದಪ್ಪ ಮತ್ತಿತರರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.