ರಾಯಚೂರು

ಪ್ರಜೆಗಳ ಕೈಯಲ್ಲಿರುವ ಶಕ್ತಿಶಾಲಿ ಅಸ್ತ್ರ

Published On :

ಕ.ಪ್ರ. ವಾರ್ತೆ ,  ಲಿಂಗಸ್ಗೂರು ,  ಜ.24
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಪಾತ್ರ ಅತ್ಯಂತ ಮಹತ್ತರವಾದುದು. ಈ ವ್ಯವಸ್ಥೆಯಲ್ಲಿ ಪ್ರಜೆಗಳು ಚುನಾವಣೆಗಳಲ್ಲಿ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ.
ಪ್ರಜೆಗಳಿಂದ ಚುನಾವಣೆಗಳ ಮೂಲಕ ಆಯ್ಕೆಯಾದ ಸರ್ಕಾರಗಳು ಜನರ ಆಶೋತ್ತರಗಳನ್ನು ಈಡೇರಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಚುನಾವಣೆಯು ಪ್ರಜೆಗಳಿಗೆ ಒಂದು ಸರ್ಕಾರವನ್ನು ಸ್ಥಾಪಿಸುವ ಹಾಗೂ ಅಧಿಕಾರದಿಂದ ತೆಗೆಯುವ ರಾಜಕೀಯ ಅಧಿಕಾರವನ್ನು ನೀಡುತ್ತದೆ. ಚುನಾವಣೆಯು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸಲು ಪ್ರಜೆಗಳ ಕೈಯಲ್ಲಿರುವ ಶಕ್ತಿಶಾಲಿ ಅಸ್ತ್ರವಾಗಿದೆ. ಚುನಾವಣೆಯು ಪ್ರಜೆಗಳಿಗೆ ಪರೋಕ್ಷವಾಗಿ ರಾಜ್ಯಾಡಳಿತದಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ. ಇದರಿಂದ ಶಾಂತಿಯುತವಾಗಿ ಸರ್ಕಾರ ಬದಲಾವಣೆ ಮಾಡಲು ಸಾಧ್ಯ. ಪರೋಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಮೂಲಕ ಆಯ್ಕೆಯಾದ ಜನಪ್ರತಿನಿಧಿಗಳು ಪ್ರಜೆಗಳ ಪರವಾಗಿ ಆಡಳಿತ ನಡೆಸುತ್ತಾರೆ. ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಲ್ಲಿ 18 ವರ್ಷ ಮೀರಿದ ಪ್ರತಿಯೊಬ್ಬರು ಮತದಾನದ ಹಕ್ಕು ಪಡೆಯುವ ಅವಕಾಶವಿದೆ. 1988ರಲ್ಲಿ ಸಂಸತ್ತು 326ನೇ ವಿಧಿಯನ್ನು ತಿದ್ದುಪಡಿ ಮಾಡಿ ಮತದಾನ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿತು. ವಯಸ್ಕ ಮತದಾನ ಪದ್ಧತಿಯಲ್ಲಿ ಜಾತಿ, ಧರ್ಮ, ಲಿಂಗ, ಬಡತನ, ಸಿರಿತನ, ಆಸ್ತಿ, ಅಂತಸ್ತು ಮುಂತಾದ ಯಾವುದೇ ಭೇದ ಭಾವಗಳಿಲ್ಲದ ಈ ಪದ್ಧತಿ ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿದೆ. ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿಯನ್ನು ಮತ್ತು ಆಗಾಗ್ಗೆ ರಾಷ್ಟ್ರಪತಿಯಿಂದ ನೇಮಿಸಲ್ಪಡುವ ಇತರೆ ಚುನಾವಣಾಧಿಕಾರಿಗಳನ್ನು ಒಳಗೊಡಿರುತ್ತದೆ.
1990 ಡಿ.12ರಂದು ಮುಖ್ಯ ಚುನಾವಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಟಿ.ಎನ್. ಶೇಷನ್ ಅವರು ಚುನಾವಣಾ ಪದ್ಧತಿಗೆ ಅರ್ಥ ಮತ್ತು ದಕ್ಷತೆಯ ಸ್ವರೂಪ ರೂಪಿಸಿದರು. ಮತದಾರ ಪ್ರಭು ಯಾವುದೇ ಆಮಿಷಕ್ಕೊಳಗಾಗದೆ ಪ್ರಜ್ಞಾವಂತನಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಮತದಾನದ ಹಕ್ಕು ಪಡೆದಿರುವ ಮತದಾರ ಸರ್ಕಾರ ರಚಿಸುವಲ್ಲಿ ನಿಷ್ಠಾವಂತ, ಜನಪರ ಕಾಳಜಿ ಇರುವ ನಾಯಕರನ್ನು ಆಯ್ಕೆ ಮಾಡಲು ಸುಸ್ಥಿರ ಅಭಿವೃದ್ಧಿ ಒದಗಿಸುವ ಸಮರ್ಥರು ಯಾರೆಂದು ನಿರ್ಧರಿಸಬೇಕು. ನಾಯಕನನ್ನು ಆಯ್ಕೆ ಮಾಡಲು ಯೋಚಿಸಿ ಮತ ಚಲಾಯಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.