ರಾಯಚೂರು

'ಕೈಗಾರಿಕಾ ತರಬೇತಿ ಕೇಂದ್ರ ಮಂಜೂರಾತಿಯಲ್ಲಿ ಅನ್ಯಾಯ'

Published On :

ರಾಯಚೂರು: ರಾಜ್ಯ ಸರ್ಕಾರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಮಂಜೂರು ಮಾಡುವ ವೇಳೆ ಜಿಲ್ಲೆಗೆ ಅನ್ಯಾಯ ಮಾಡಿದೆ. ಈ ನಿಟ್ಟಿನಲ್ಲಿ ಶಾಸಕರ ವೈಫಲ್ಯ ಸ್ಪಷ್ಟವಾಗಿದೆ ಎಂದು ಜನಸಂಗ್ರಾಮ ಪರಿಷತ್ ಪ್ರಮುಖ ಡಾ.ರಜಾಕ್ ಉಸ್ತಾದ್ ಆರೋಪಿಸಿದರು.
ಅವರು ನಗರದಲ್ಲಿ ಇತ್ತೀಚೆಗೆ ಕರೆದಿದ್ದ ಸುದ್ದಿಗೋಷಅಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳಿಗೆ ಒತ್ತು ನೀಡಿ ಸೌಲಭ್ಯ ರಹಿತ ಹಾಗೂ ಭಾಗಶಃ ಸೌಲಭ್ಯ ಹೊಂದಿದ ಹಿಂದುಳಿದ ತಾಲೂಕುಗಳಲ್ಲಿ 100 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಹೊಸದಾಗಿ ಸ್ಥಾಪಿಸಲು ನಿರ್ಧರಿಸಿತ್ತು. ಆದರೆ ಈ 100 ತರಬೇತಿ ಸಂಸ್ಥೆಗಳಲ್ಲಿ ಹಿಂದುಳಿದ ರಾಯಚೂರು ಜಿಲ್ಲೆಗೆ ಪ್ರಾಶಸ್ತ್ಯ ನೀಡುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ದೂರಿದರು.
ತಾರತಮ್ಯ: ರಾಜ್ಯ ಸರ್ಕಾರ ಜ.20ರಂದು ಮಂಜೂರಾತಿ ನೀಡಿ ಹೊರಡಿಸಿರುವ ಆದೇಶದಂತೆ ಅತೀ ಹೆಚ್ಚು ಹಿಂದುಳಿದ ತಾಲೂಕುಗಳಿರುವ ಹೈ.ಕ. ಪ್ರದೇಶಕ್ಕೆ ತಾರತಮ್ಯ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳು ಹಿಂದುಳಿದ ತಾಲೂಕುಗಳಾಗಿವೆ. ಜಿಲ್ಲೆಯ ಪ್ರತಿ ತಾಲೂಕಿಗೆ ಒಂದು ಐಟಿಐ ಕೇಂದ್ರ ಸ್ಥಾಪಿಸಲು ಸರ್ಕಾರ ಆಸಕ್ತಿ ತೋರಬೇಕಿತ್ತು ಎಂದು ಹೇಳಿದರು. ಸರ್ಕಾರ ಮತ್ತೇ ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು ನೀಡಿದೆ. ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ಶೇ.60ಕ್ಕಿಂತ ಹೆಚ್ಚು ಕೈಗಾರಿಕಾ ಸಂಸ್ಥೆಗಳನ್ನು ನೀಡಲಾಗಿದೆ. ಎಚ್.ಕೆ. ಪಾಟೀಲರ ಸಚಿವ ಸಂಪುಟ ಉಪ ಸಮಿತಿಯು 371ನೇ ಕಲಂ(ಜೆ)ಗೆ ಸಂಬಂಧಿಸಿ ಮಾಡಿದ ಶಿಫಾರಸುಗಳಲ್ಲಿ ಸಮಗ್ರ ಅಭಿವೃದ್ಧಿಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ತಲಾ ಒಂದೊಂದು ಸರ್ಕಾರಿ ಕೈಗಾರಿಕೆ ಸಂಸ್ಥೆಗಳನ್ನು ಸ್ಥಾಪಿಸಲು ಸೂಚಿಸಿದ್ದರು. ಆದರೆ ಸರ್ಕಾರ ಶಿಫಾರಸು ಮೂಲೆಗುಂಪು ಮಾಡಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ವಿಫಲ: ರಾಯಚೂರು ಮಾತ್ತು ಯಾದಗಿರಿ ಜಿಲ್ಲೆಯ ಶಾಸಕರು ಸರ್ಕಾರಿ ಕೈಗಾರಿಕಾ ಸಂಸ್ಥೆಗಳನ್ನು ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನೆಪ ಮಾತ್ರಕ್ಕೆ ಜಿಲ್ಲೆಗೆ ಭೇಟಿ ನೀಡಿ, ತಮ್ಮ ಕರ್ತವ್ಯ ಪಾಲಿಸುವಲ್ಲಿ ವಿಫಲರಾಗಿದ್ದಾರೆಂದು ದೂರಿದರು.
ಶಾಸಕರು ಕೂಡಲೇ ಪ್ರಸಕ್ತ ಅಧಿವೇಶನದಲ್ಲಿಯೇ ಜಿಲ್ಲೆಗೆ ಆಗಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕು. ತಾರತಮ್ಯ ಹೋಗಲಾಡಿಸುವ ಕಾರ್ಯ ಮಾಡಬೇಕು. ತಪ್ಪಿದಲ್ಲಿ ಸಂಘಟನೆಯಿಂದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಮೌನ ವಹಿಸಿರುವುದು ಅವರು ಜಿಲ್ಲೆಯೆಡೆಗೆ ಹೊಂದಿರುವ ನಿಷ್ಕಾಳಜಿ ಪ್ರದರ್ಶಿಸಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಮಲ್ಲನಗೌಡ ಇಂದುಪುರ, ಬಂದಪ್ಪಗೌಡ, ಎಸ್.ಕೆ. ಸೈದುದ್ದೀನ್, ಖಾಜಾ ಅಸ್ಲಂ ಪಾಷಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.