ಜೀತದಾಳುಗಳ ಪತ್ತೆ, ಪುನಾವಸತಿಗೆ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ ರಾಯಚೂರು ಜ.27
ಜೀತದಾಳುಗಳನ್ನು ಗುರುತಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ, ಜೀತದಾಳುಗಳಿಗೆ ಬಿಡುಗಡೆ ಪತ್ರ ಮತ್ತು ಪುನಾವಸತಿ ಕಲ್ಪಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಜೀತವಿಮುಕ್ತಿ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರವು 2008ರಲ್ಲಿಯೇ ಜೀತದಾಳು ಪುನಾವಸತಿ ಕ್ರಿಯಾ ಯೋಜನೆಯೆಂಬ ಕಾನೂನು ಜಾರಿಗೆ ತಂದಿದ್ದು, ಅದರ ಬಗ್ಗೆ ಈಗಾಗಲೇ ಸಂಘಟನೆಯಿಂದ ಅಧಿಕಾರಿಗಳಿಗೆ ಅನೇಕ ಸಂದರ್ಭದಲ್ಲಿ ತರಬೇತಿ ನೀಡಲಾಗಿದೆ.
ಅಸಮರ್ಪಕ ಕಾರ್ಯನಿರ್ವಹಣೆ: ತರಬೇತಿಯಲ್ಲಿ ಕೆಲವೇ ಕೆಲ ಅಧಿಕಾರಿಗಳು ಪಾಲ್ಗೊಂಡಿದ್ದು, ಇನ್ನುಳಿದವರು ತರಬೇತಿಯಿಂದ ದೂರವೇ ಉಳಿದಿದ್ದಾರೆ. ಅಷ್ಟೇ ಅಲ್ಲ, ಅಧಿಕಾರಿಗಳಲ್ಲಿ ಬಹುತೇಕರು ಜೀತದಾಳುಗಳ ಪತ್ತೆ ಮತ್ತು ಪುನಾವಸತಿ ಕಾರ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಕ್ರಮ ಕೈಗೊಳ್ಳುವಲ್ಲಿ ವಿಫಲ: 2010ರಿಂದ 2013ರವರೆಗೆ ಜೀತವಿಮುಕ್ತಿ ಕರ್ನಾಟಕ ಸಂಘಟನೆಯು ಜಿಲ್ಲೆಯಲ್ಲಿ 469 ಜೀತದಾಳುಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳಿಗೆ ಆ ಬಗ್ಗೆ ಮಾಹಿತಿ ಸಲ್ಲಿಸಿ ಕ್ರಮಕ್ಕೆ ಕೋರಿದೆ. ಆದರೆ ಅರ್ಜಿ ಸಲ್ಲಿಸಿ ಎರಡು ವರ್ಷಗಳಾದರೂ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.
2 ತಿಂಗಳಿಗೊಮ್ಮೆ ಸಭೆ ನಡೆಸಿ: ಸರ್ಕಾರದ ಆದೇಶದಂತೆ ಕಡ್ಡಾಯವಾಗಿ 2 ತಿಂಗಳಿಗೊಮ್ಮೆ ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ಜೀತದಾಳು ಜಾಗೃತಿ ಸಮಿತಿ ಸಭೆ ನಡೆಸಬೇಕು. ಅಧಿಕಾರಿಗಳು ತನಿಖೆ ನಡೆಸಿದ 129 ಜನ ಜೀತದಾಳುಗಳಿಗೆ ತಕ್ಷಣವೇ ಬಿಡುಗಡೆ ಪತ್ರ ನೀಡಿ ಸಮಗ್ರ ಪುನಾವಸತಿ ಕಲ್ಪಿಸುವಂತೆ ಒತ್ತಾಯಿಸಿದರು.
ತರಬೇತಿ ಬಾಕಿ ಮೊತ್ತ ಬಿಡುಗಡೆ ಮಾಡಿ: ಜಿಲ್ಲೆಯಲ್ಲಿ ಜೀತ ಪದ್ಧತಿ ನಿರ್ಮೂಲನೆ ಕಾರ್ಯದಲ್ಲಿ ತೊಡಗಿರುವ ಜೀತವಿಮುಕ್ತಿ ಕರ್ನಾಟಕ ಸಂಘಟನೆಯವರಿಗೆ ಭದ್ರತೆ ಒದಗಿಸಬೇಕು. ಮಾನವಿ ತಾಲೂಕಿನ ಕವಿತಾಳ ಗ್ರಾಮದಲ್ಲಿ ಮಾದಿಗ, ಚಲುವಾದಿ ಹಾಗೂ ಕುಂಚಿ ಕೊರವರ, ಮಚಿಗರ ಜನಾಂಗದವರಿಗೆ ಸ್ಮಶಾನ ಜಮೀನು ಮಂಜೂರು ಮಾಡಬೇಕು.
ಸಂಘಟನೆಗೆ ಬಾಕಿಯಿರುವ ತರಬೇತಿ ನೀಡಿಕೆ ಮೊತ್ತ 70 ಸಾವಿರ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ಪ್ರಕಾಶ್, ಪ್ರಮುಖರಾದ ಅಲ್ಲಮಪ್ರಭು ಕವಿತಾಳ, ಚಿನ್ನಪ್ಪ ಲಿಂಗಸ್ಗೂರು, ಹುಸೇನಪ್ಪ ಬಾಗಲವಾಡ, ರಾಜಪ್ಪ ಗಬ್ಬೂರು, ಬಸವರಾಜ್ ಯರಮಸಾಳ್, ರಾಘವೇಂದ್ರ ಅಂಜಳ, ಮರಿಯಪ್ಪ, ಹುಸೇನಪ್ಪ ಆನಂದಗಲ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

