ಸದಾಶಿವ ವರದಿ ಚರ್ಚೆಗೆ ಒತ್ತಾಯಿಸಿ ಧರಣಿ
ಕ.ಪ್ರ. ವಾರ್ತೆ, ರಾಯಚೂರು, ಜ.29
ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಬಹಿರಂಗಗೊಳಿಸಿ ಚರ್ಚೆಗೊಳಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಧರಣಿ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಸಮಿತಿಯ ಕಾರ್ಯಕರ್ತರು, ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿಗಳಿಗೆ ನೀಡಿದ ಮೀಸಲಾತಿ ಸೌಲಭ್ಯವನ್ನು ಕಳೆದ 60 ವರ್ಷಗಳಿಂದ ಪರಿಶಿಷ್ಟ ಜಾತಿಯ ಕೆಲವೇ ಕೆಲ ಸಮುದಾಯಗಳು ಪಡೆದಿವೆ. ಈ ನಿಟ್ಟಿನಲ್ಲಿ ಮಾದಿಗರಿಗೆ ಒಳ ಮೀಸಲಾತಿ ಅವಕಾಶ ನೀಡುವಂತೆ ಸದಾಶಿವ ಆಯೋಗ ಸೂಚಿಸಿದ್ದು, ಆಯೋಗದ ವರದಿಯನ್ನು ಸರ್ಕಾರ ಬಹಿರಂಗೊಳಿಸಬೇಕಿದೆ ಎಂದು ಒತ್ತಾಯಿಸಿದರು.
ವರದಿ ಜಾರಿಗೆ ವಿರೋಧ: ಸದಾಶಿವ ಆಯೋಗದ ವರದಿಯ ಬಗ್ಗೆ ಆಯೋಗ ವಿರೋಧಿ ಸಂಘಟನೆಗಳವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಗೊಂದಲ ನಿವಾರಣೆಗೆ ವರದಿಯನ್ನು ಕೂಡಲೇ ಬಹಿರಂಗಗೊಳಿಸಬೇಕು. ಆ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.
ಸದಾಶಿವ ಆಯೋಗದ ವರದಿಯ ಬಗ್ಗೆ ಮಾಹಿತಿ ಬಹಿರಂಗಗೊಳಿಸಲು ಸರ್ಕಾರ ಸಿದ್ಧವಿಲ್ಲ ಎಂಬುದು ಅದರ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಸ್ಪಷ್ಟಪಡಿಸುತ್ತದೆ. ವಿವಿಧ ಸಂಘಟನೆಗಳಿಗೆ ಆಯೋಗದ ವರದಿಯಲ್ಲಿನ ಅಂಶಗಳು, ಶಿಫಾರಸುಗಳ ಬಗ್ಗೆ ಸಮರ್ಪಕ ಮಾಹಿತಿಯೇ ಇಲ್ಲದಿದ್ದರೂ ವರದಿ ಜಾರಿಗೆ ವಿರೋಧಿಸುತ್ತಿರುವುದು ಪೂರ್ವಾಗ್ರಹ ವರ್ತನಾಯಿಗಿದೆ ಎಂದು ಆರೋಪಿಸಿದರು.
ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ: ಕೂಡಲೇ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಸದಾಶಿವ ಆಯೋಗದ ವರದಿಯಲ್ಲಿನ ವಿಚಾರಗಳನ್ನು ಬಹಿರಂಗಗೊಳಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ ಹೋರಾಟಗಾರರು, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪನವರ ವಿರುದ್ಧ ಬೇನಾಮಿ ಪತ್ರದ ಆಧಾರದಲ್ಲಿ ಸಿಐಡಿ ತನಿಖೆಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು.
ಸಿಐಡಿ ಅಧಿಕಾರಿಗಳು ಅನಗತ್ಯವಾಗಿ ಗೋನಾಳ ಭೀಮಪ್ಪ ಅವರ ವಿರುದ್ಧ ತನಿಖೆ ನಡೆಸಿದ್ದು, ಯಾವುದೇ ರೀತಿಯ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಆದರೆ ಅದೇ ವೇಳೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ 1998ರಿಂದ 2004ರವರೆಗೆ ನಡೆದ ಭ್ರಷ್ಟಾಚಾರದ ಬಗ್ಗೆ ಸಿಐಡಿ ತನಿಖಾ ವರದಿ ಸಲ್ಲಿಸಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ವಿವಿ ನಿಯಮಗಳ ನೇರ ಉಲ್ಲಂಘನೆ: ಲೋಕಸೇವಾ ಆಯೋಗದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಅಕ್ರಮದ ಬಗ್ಗೆ ಲೋಕಸತ್ತಾ ಪಾರ್ಟಿಯ ಕಾರ್ಯಕರ್ತರು ಗೋನಾಳ ಭೀಮಪ್ಪನವರ ಮನೆ ಎದುರಿಗೆ ಪ್ರತಿಭಟನೆ ನಡೆಸುವ ಮೂಲಕ ಅವರ ತೇಜೋವಧೆ ಮಾಡುವ ಕಾರ್ಯ ಮಾಡಿದೆ ಎಂದು ಆರೋಪಿಸಿದರು.
ಕರ್ನಾಟಕ ವಿವಿ ಕುಲಸಚಿವ, ಕುಲಸಚಿವ(ಮೌಲ್ಯಮಾಪನ) ಅವರನ್ನು ಕಾರಣ ನೀಡದೇ ಹುದ್ದೆಯಿಂದ ಕೆಳಗಿಳಿಸಿದ್ದು ವಿವಿ ನಿಯಮಗಳ ನೇರ ಉಲ್ಲಂಘನೆಯಾಗಿದೆ. ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಕೇವಲ ಮಾದಿಗ ಸಮುದಾಯ ವಿರೋಧಿ ಕ್ರಮಗಳೇ ಜರುಗುತ್ತಿರುವುದಕ್ಕೆ ಈ ಮೂರು ಘಟನೆಗಳು ಸಾಕ್ಷಿಯಾಗಿವೆ ಎಂದು ದೂರಿದರು.
ಕಠಿಣ ಕ್ರಮಕ್ಕೆ ಒತ್ತಾಯ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ವಿರೋಧಿಸಿದ ಮಾದಿಗ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಕೈಗೊಂಡ ಮಾದಿಗ ಸಮುದಾಯ ವಿರೋಧಿ ನೀತಿಗಳಿಂದಾಗಿ ಮಾದಿಗರು ಅಸಮಾಧಾನಗೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಮಾದಿಗ ಸಮುದಾಯವು ಕಾಂಗ್ರೆಸ್ಗೆ ತಕ್ಕಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಕೂಡಲೇ ಸದಾಶಿವ ಆಯೋಗದ ವರದಿ ಬಹಿರಂಗಗೊಳಿಸಿ ಚರ್ಚೆಗೆ ಅವಕಾಶ ನೀಡಬೇಕು. ಯಾವುದೇ ಆಧಾರವಿಲ್ಲದೇ ಕರ್ನಾ ಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಲೋಕಸತ್ತಾ ಪಾರ್ಟಿಯ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಭ್ರಷ್ಟಾಚಾರದ ಆರೋಪಿಗಳಿಗೆ ಶಿಕ್ಷೆಯಾಗಲಿ: 1998ರಿಂದ 2004ರವರೆಗೆ ಲೋಕಸೇವಾ ಆಯೋಗದಲ್ಲಿ ನಡೆದ ಭ್ರಷ್ಟಾಚಾರದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಕರ್ನಾಟಕ ವಿವಿ ನಿಯಮ ಉಲ್ಲಂಘನೆ ಮಾಡಿ ಡಾ. ಜೆ.ಬಿ. ನಂದನ್ ಮತ್ತು ಡಾ.ದುರ್ಗಾದಾಸ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ ಆದೇಶ ರದ್ದುಪಡಿಸಬೇಕು. ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಮತ್ತು ದಳಪತಿ ದೇವೇಂದ್ರಪ್ಪ ಅವರನ್ನು ಕೊಲೆ ಮಾಡಿದ ಆರೋಪಿಗಳ ಬಂಧನಕ್ಕೆ ಹೋರಾಟಗಾರರು ಒತ್ತಾಯಿಸಿದರು.
ಅದೇ ರೀತಿ ನಗರಸಭೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಹೊರ ಗುತ್ತಿಗೆ ಮೂಲಕ ಸಿಬ್ಬಂದಿ ನೇಮಕ ಪದ್ಧತಿಯನ್ನು ಕೈಬಿಡುವಂತೆ ಧರಣಿ ನಿರತರು ಆಗ್ರಹಿಸಿದರು.
ಸಂಘಟನೆಯ ಪ್ರಮುಖರಾದ ಎಸ್. ಮಾರೆಪ್ಪ ವಕೀಲರು, ತಿಮ್ಮಪ್ಪ ಗುಂಜಳ್ಳಿ, ಏಸು ಆಶಾಪುರ, ರಾಜರತ್ನಂ, ತಿಮ್ಮಪ್ಪ ಜಗಲಿ, ರವಿ, ಶಿವರಾಯ ಅಕ್ಕರಕಿ, ಹನುಮಂತ ಮನ್ನಾಪುರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

