ರಾಯಚೂರು

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಭಾಷಾ ನೀತಿ ಉಲ್ಲಂಘನೆ

Published On :

ಕ.ಪ್ರ. ವಾರ್ತೆ ,  ರಾಯಚೂರು ,  ಜ.31
ನಗರದ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಮಾಧ್ಯಮದ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದು ಅಂಥ ಸಂಸ್ಥೆಗಳ ವಿರುದ್ಧ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ನಗರ ಸಂಚಾಲಕ ರಾಜುಪಟ್ಟಿ ಹೇಳಿದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಪ್ರತಿಷ್ಠಿತ ಕರ್ನಾಟಕ ವೆಲ್ಫೇರ್ ಟ್ರಸ್ಟ್, ಇನ್ಫೆಂಟ್ ಜೀಸಸ್ ಸೇರಿದಂತೆ ಬಹುಕೇತ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಮಾಧ್ಯಮ ಶಾಲೆಯ ಆರಂಭಕ್ಕೆ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಬೋಧಿಸುತ್ತಿವೆ ಎಂದು ಟೀಕಿಸಿದರು.
ಪೂರ್ವ ಪ್ರಾಥಮಿಕ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಮಾನ್ಯತೆಯನ್ನು ಪಡೆಯುವ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ರಿಂದ 5ನೇ ತರಗತಿವರೆಗೆ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮದ ಮೂಲಕ ಶಿಕ್ಷಣವನ್ನು ನೀಡುವುದಾಗಿ ಪ್ರತಿಜ್ಞೆ ಸ್ವೀಕರಿಸಿ, ಪ್ರಮಾಣ ಪತ್ರ ನೀಡಿದ್ದರೂ, ಆನಂತರದಲ್ಲಿ ಭಾಷಾ ನೀತಿ ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು.
ಆಂಗ್ಲ ಮಾಧ್ಯಮ: ನಗರದ ಕರ್ನಾಟಕ ವೆಲ್ಫೇರ್ ಟ್ರಸ್ಟ್ ಶಾಲೆಯಲ್ಲಿ ಅನಧಿಕೃತವಾಗಿ ಶುಲ್ಕ ವಸೂಲು ಮಾಡಲಾಗುತ್ತಿದೆ. ಅನಧಿಕೃತವಾಗಿ ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ಈ ಶಾಲೆಯನ್ನು ರಾಜ್ಯ ಸರ್ಕಾರ 2012ರಲ್ಲಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಯೆಂದು ಘೋಷಿಸಿದೆ ಎಂದು ಟೀಕಿಸಿದರು.
ಟ್ರಸ್ಟ್‌ನ ಶಾಲೆಯಲ್ಲಿ ಸಿಬಿಎಸ್‌ಇ ಆಂಗ್ಲ ಮಾಧ್ಯಮದಲ್ಲಿ ಬೋಧಿಸುತ್ತಿದ್ದು, ಆರ್ಟಿಇ ಅಡಿ ಕಳೆದ ಎರಡು ವರ್ಷಗಳಿಗೆ ಶೇ.25ರಷ್ಟು ಪ್ರವೇಶವನ್ನು ಬಡಮಕ್ಕಳಿಗೆ ನೀಡದೇ ಕಡ್ಡಾಯ ಶಿಕ್ಷಣ ಕಾಯಿದೆಯನ್ನು ಉಲ್ಲಂಘಿಸಿದೆ. ಅದೇ ರೀತಿ ನಗರದ ಇನ್ಪೆಂಟ್ ಜೀಸಸ್ ಶಾಲೆಯೂ ಸಹ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಅನುಮತಿ ಪಡೆದಿದೆ. ಆದರೆ ಎಲ್‌ಕೆಜಿ ಯಿಂದ ಐದನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿಯೇ ಬೋಧಿಸುತ್ತಿದೆ ಎಂದು ದೂರಿದರು.
ಇನ್ಫೆಂಟ್ ಜೀಸಸ್ ಶಾಲೆಯಲ್ಲೂ ಬಾಲಯೇಸು ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿದ್ದು, ಅದರಲ್ಲಿ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಬೋಧಿಸುತ್ತಿದ್ದು, ಈ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಅಡಿ ಶೇ.25ರಷ್ಟು ಪ್ರವೇಶ ನೀಡಿಲ್ಲ ಎಂದು ಆರೋಪಿಸಿದರು.
ಉಲ್ಲಂಘನೆ: ನಗರದ ಕನ್ನಿಕಾ ಪರಮೇಶ್ವರಿ ಶಿಕ್ಷಣ ಸಂಸ್ಥೆ, ಆದರ್ಶ ವಿದ್ಯಾಪೀಠ, ಚೈತನ್ಯ ಶಿಕ್ಷಣ ಸಂಸ್ಥೆ, ಜಾನ್ ಮಿಲ್ಟನ್ ಟೆಕ್ನೊ ಶಿಕ್ಷಣ ಸಂಸ್ಥೆಗಳೂ ಸಹ ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಕಲಿಸುವ ಮಾನ್ಯತೆ ಪಡೆದು ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಮೂಲಕ ಭಾಷಾ ನೀತಿ ಉಲ್ಲಂಘಿಸಿವೆ ಎಂದು ದೂರಿದರು.
ನಗರದ ರೇಸ್ ಕಲ್ಚರ್, ರೇಸ್ ಬಚಪನ್, ಕಾಕತೀಯ, ವಿಜ್ಞಾನ ಎಜುಕೇಷನ್ ಟ್ರಸ್ಟ್, ಆದೋನಿ ಲಕ್ಷ್ಮಮ್ಮ ಶಾಲೆ ಸೇರಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದ ಬೋಧನೆ ಹೆಸರಿನಲ್ಲಿ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದೂ ಮೌನ ವಹಿಸಿದ್ದಾರೆಂದು ಆರೋಪಿಸಿದರು.
ಶಿಕ್ಷಣ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ನಡೆಯುತ್ತಿರುವ ಅಕ್ರಮ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅಧಿಕಾರಿಗಳ ವಿರುದ್ಧ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಾಗೂ ಶಿಕ್ಷಣ ಸಚಿವರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸುವುದಾಗಿ ದಸಂಸ ನಗರ ಸಂಚಾಲಕ ರಾಜು ಪಟ್ಟಿ ಎಚ್ಚರಿಸಿದರು.
ಸಂಘಟನೆ ಅಮರೇಶ್, ಅಂಜಿನಯ್ಯ, ದೇವಿಸಿಂಗ್ ಠಾಕೂರ್, ರಾಜಗೋಪಾಲ, ಮಹಿಬೂಬ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.