ತಾಪಂ ಎದುರು ನಿರಾಶ್ರಿತರ ಧರಣಿ
ಸಿಂಧನೂರು: ತಾಲೂಕಿನ ತುರ್ವಿಹಾಳ ಗ್ರಾಮದಲ್ಲಿ ರಾಜ್ಯಪಾಲರ ಹೆಸರಿನ ಆಶ್ರಯ ಕಮಿಟಿಗೆ ನೋಂದಣಿಯಾದ 6 ಎಕರೆ ಜಮೀನಲ್ಲಿ ಬಡನಿರಾಶ್ರಿತರ 136 ಕುಟುಂಬಗಳಿಗೆ ಪ್ಲಾಟ್, ಹಕ್ಕುಪತ್ರ, ಮನೆ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ದಲಿತ ಮಹಾಸಭಾ ನೇತೃತ್ವದಲ್ಲಿ ನೂರಾರು ನಿರಾಶ್ರಿತರು ತಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ದಲಿತ ಮಹಾಸಭಾ ತಾಲೂಕಾಧ್ಯಕ್ಷ ಗುಡದೇಶ ಭೇರ್ಗಿ ಮಾತನಾಡಿ, 30 ವರ್ಷಗಳ ಹಿಂದೆ ಕೂಲಿಗಾಗಿ ಬಂದು ತುರ್ವಿಹಾಳ ಎಸ್.ಎಚ್. ರಸ್ತೆಯ ಪಕ್ಕ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. 1988- 99ರಲ್ಲಿ ಅಂದಿನ ಆಶ್ರಯ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಕೆ.ವಿರೂಪಾಕ್ಷಪ್ಪ ನೇತೃತ್ವದಲ್ಲಿ 136 ಕುಟುಂಬಗಳ ಪೈಕಿ ಕೆಲವರಿಗೆ ಹಕ್ಕುಪತ್ರ ಕೊಟ್ಟಿದ್ದರು. ಅದರಂತೆ ಆಶ್ರಯ ಕಮಿಟಿಗೆ ನೋಂದಣಿಯಾದ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಸಾಗಿಸುತ್ತಿದ್ದಾಗ ಅಂದಿನ ತಹಸೀಲ್ದಾರ್, ನಾಡ ತಹಸೀಲ್ದಾರರ ನೇತೃತ್ವದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಮಾತು ಕೇಳಿ ಗುಡಿಸಲು ತೆರವುಗೊಳಿಸಿದರು.
ಮತ್ತೆ ಗುಡಿಸಲು ತೆರವಿಗೆ ಒತ್ತಾಯ: ಅಂದಿನಿಂದ ಈವರೆಗೆ ಪಿಡಿಒ, ತಾಪಂ ಇಒ ಈ ಭಾಗದ ಮಸ್ಕಿ ಕ್ಷೇತ್ರದ ಶಾಸಕರಾಗಲಿ, ಜಿಪಂ ಸದಸ್ಯರಾಗಲಿ ಯಾರೂ ಸಮಸ್ಯೆ ಬಗ್ಗೆ ಗಮನಹರಿಸುತ್ತಿಲ್ಲ. ಈಗ ರಸ್ತೆ ಅಗಲೀಕರಣ ಪ್ರಾರಂಭಗೊಂಡಿದ್ದು, ಮತ್ತೆ ಗುಡಿಸಲುಗಳ ತೆರವಿಗೆ ಪಿಡಿಒ ಮೌಖಿಕವಾಗಿ ಒತ್ತಾಯಿಸುತ್ತಿದ್ದಾರೆ. ಸುಮಾರು 3 ದಶಕಗಳಿಂದ ಇವೇ ಗುಡಿಸಲಿನಲ್ಲಿ ವಾಸವಾಗಿದ್ದ ನಾವೀಗ ಎಲ್ಲಿಗೆ ಹೋಗಬೇಕೆಂದು ಅವರು ಪ್ರಶ್ನಿಸಿದ್ದಾರೆ.
ಧರಣಿ ಸತ್ಯಾಗ್ರಹದಲ್ಲಿ ದಲಿತ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಇ. ಕುಮಾರ, ಜಿಲ್ಲಾ ಮುಖಂಡ ಮಹಾಂಕಾಳೆಪ್ಪ ಮಲ್ಲಾಪುರ, ಕಾನೂನು ಸಲಹೆಗಾರ ಹನುಮಂತಪ್ಪ ವಕೀಲರು, ಗೌರವಾಧ್ಯಕ್ಷ ಲಗುಮಪ್ಪ ಗೊರೇಬಾಳ, ತುರ್ವಿಹಾಳ ಗೌರವಾಧ್ಯಕ್ಷ ಶಂಕ್ರಪ್ಪ, ತುರ್ವಿಹಾಳ ಅಧ್ಯಕ್ಷ ಗವಿಸಿದ್ಧಪ್ಪ ಮಧ್ಯಕ್ಯಾಂಪ್, ತಾಲೂಕ ಪ್ರಧಾನ ಕಾರ್ಯದರ್ಶಿ ವೀರೇಶ ಕೆ.ಹಂಚಿನಾಳ, ಖಜಾಂಚಿ ನಾಗಲಿಂಗಪ್ಪ ಘಂಟೆರು, ಕಾರ್ಯದರ್ಶಿ ಮೌನೇಶ ತುರ್ವಿಹಾಳ, ಮಾನಪ್ಪ, ನಾಗಲಿಂಗಪ್ಪ, ಶ್ರೀಕಾಂತ ಸೇರಿದಂತೆ ನೂರಾರು ಗುಡಿಸಲು ನಿವಾಸಿಗಳು ಭಾಗವಹಿಸಿದ್ದರು.
ಬೇಡಿಕೆಗಳು
25ರಿಂದ 30 ವರ್ಷವಾದರೂ ಸರ್ಕಾರದಿಂದ ಸೂರಿನ ಅಡಿಯಲ್ಲಿ ಈ ನಮ್ಮ ಕುಟುಂಬಸ್ಥರನ್ನು ಮನೆಯ ಫಲಾನುಭವಿಗಳನ್ನಾಗಿ ಗುರುತಿಸದೇ ಇರುವುದು ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು.
ರಸ್ತೆ ಅಗಲೀಕರಣಕ್ಕಾಗಿ ತಮ್ಮ ಗುಡಿಸಲುಗಳ ತೆರವಿಗೆ ಪಿಡಿಒ ಮೌಖಿಕವಾಗಿ ಒತ್ತಾಯಿಸುವುದನ್ನು ತಡೆದು ಜಮೀನಿನಲ್ಲಿ ಪ್ಲಾಟ್, ಹಕ್ಕುಪತ್ರ ಮನೆ ಒದಗಿಸಿ ನಂತರ ಕೀಳಲು ಅವಕಾಶ ಮಾಡಿಕೊಡಬೇಕು.
ಕೂಲಿ ನಾಲಿ ಮಾಡಿಕೊಂಡು ಹಾಕಿಕೊಂಡ ಈ ಗುಡಿಸಲುಗಳನ್ನು ಕಿತ್ತುವ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

