ಅನುಮೋದನೆ ಇಲ್ಲದ ಕೆಲಸಗಳಿಗೆ ಬಿಲ್ ಪಾವತಿ
ಮುದಗಲ್: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕ್ರಿಯಾ ಯೋಜನೆಯಲ್ಲಿ ಇಲ್ಲದ ಕಾಮಗಾರಿಗಳಿಗೆ ಬಿಲ್ ಪಾವತಿಸಲಾಗಿದೆ. ಕ್ರಿಯಾಯೋಜನೆಯಲ್ಲಿ ಅನುಮತಿ ಪಡೆದು ಮಾಡಿದ ಕೆಲಸಗಳಿಗೆ ಒಂದು ವರ್ಷದಿಂದ ಬಿಲ್ ಪಾವತಿಸಿಲ್ಲ ಎಂದು ಗ್ರಾಮಸ್ಥರು ತಾಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಶನಿವಾರ ಮಟ್ಟೂರು ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜರುಗಿತು.
ಮಟ್ಟೂರು ಗ್ರಾಪಂ ಕ್ರಿಯಾಯೋಜನೆ ಮಾಡಿಲ್ಲ, ಕೆಲಸ ಮಾಡಿಸಿ ಬಿಲ್ ಪಾವತಿಸಿದ್ದಾರೆ. ಕ್ರಿಯಾಯೋಜನೆಯಲ್ಲಿ ಅನುಮೋದನೆ ಪಡೆಯದೆ ಕೆಲಸ ಮಾಡಿಸಿದವರಿಗೆ ಬಿಲ್ ಪಾವತಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ತಮಗೆ ಮನವಿ ಸಲ್ಲಿಸಿದರೂ ಏನು ಕ್ರಮ ಜರುಗಿಸಿಲ್ಲ ಎಂದು ಗ್ರಾಮಸ್ಥರಾದ ಮಾನಪ್ಪ, ಶರಣಬಸವ, ಶಂಕ್ರಪ್ಪ ಅಮರಪ್ಪ ತಾಪಂ ಇಒ ಶರಣಬಸವ ಅವರನ್ನು ಮಾತಿಗೆಳೆದರು.
ನೇರವಾಗಿ ಕೂಲಿಕಾರರ ಖಾತೆಗೆ: ಗ್ರಾಮಸ್ಥರನ್ನುದ್ದೇಶಿಸಿ ತಾಪಂ ಇಒ ಮಾತನಾಡಿ, ಮಟ್ಟೂರು ಗ್ರಾ.ಪಂ.ಯಲ್ಲಿ ವರ್ಷಕ್ಕೆ ಏಳು ಕ್ರಿಯಾಯೋಜನೆ ಮಾಡಿ ಒಟ್ಟು 2.85 ಕೋಟಿ ಯೋಜನೆ ಸಿದ್ಧಪಡಿಸಿ ಕಳಿಸಿದ್ದಾರೆ. ವರ್ಷಕ್ಕೆ 85 ಲಕ್ಷಗಳವರೆಗೆ ಮಾತ್ರ ಕ್ರಿಯಾಯೋಜನೆ ಮಾಡಬೇಕು. ಅದು ಬಿಟ್ಟು ಸಿಕ್ಕಾಪಟ್ಟೆ ಹೆಚ್ಚುವರಿ ಯೋಜನೆ ಸಿದ್ಧಪಡಿಸಿದ್ದಕ್ಕೆ ಸರ್ಕಾರ ಅದನ್ನು ರದ್ದುಪಡಿಸಿದೆ. ಕೆಲಸ ಮಾಡಿದ ಬಾಕಿ ಹಣವನ್ನು ಜಿಪಿಆರ್ಎಸ್ ಮೂಲಕ ನೇರವಾಗಿ ಕೂಲಿಕಾರರ ಖಾತೆಗೆ ಅತೀ ಶೀಘ್ರದಲ್ಲೇ ಜಮಾ ಮಾಡಲಾಗುತ್ತದೆ ಎಂದರು.
ಖಾತ್ರಿ ಯೋಜನೆಯಡಿ ಇನ್ನು ಮುಂದೆ ಕೆರೆ, ಎಸ್ಡಿಎಸ್ ಜಂಗಲ್ ಕಟಾವು, ರಸ್ತೆ ದುರಸ್ತಿ ಕಾಮಗಾರಿಗಳನ್ನು ರದ್ದುಗೊಳಿಸಿ ವೈಯಕ್ತಿಕ ಕೆಲಸಗಳು ಮತ್ತು ಜಮೀನು ಅಭಿವೃದ್ಧಿಪಡಿಸಲು, ಅಂತರ್ಜಲ ಹೆಚ್ಚಿಸಲು ಜಮೀನುಗಳಿಗೆ ಒಡ್ಡು ಹಾಕಿಸಲು, ಚೆಕ್ ಡ್ಯಾಂ ನಿರ್ಮಿಸಲು, ಕೃಷಿ ಹೊಂಡ ನಿರ್ಮಿಸಲು ಪ್ರಥಮಾದ್ಯತೆ ನೀಡಲಾಗುತ್ತದೆ ಎಂದರು.
ನಿರ್ಮಲ ಭಾರತ: ಇನ್ನು ಮುಂದೆ ಗ್ರಾಮಗಳನ್ನು ನಿರ್ಮಲ ಗ್ರಾಮಗಳನ್ನಾಗಿ ಮಾಡಲು ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲು 10 ಸಾವಿರ ಸಹಾಯ ಧನ ನೀಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಂಡು ನಿರ್ಮಲ ಗ್ರಾಮವನ್ನಾಗಿ ಮಾಡಲು ಪ್ರತಿಜ್ಞೆ ಮಾಡಬೇಕು ಎಂದರು.
ಪಡಿತರ ಹಂಚಿಲ್ಲ: ಗ್ರಾಮದ ನ್ಯಾಯಬೆಲೆ ಅಂಗಡಿಯ ಏಪ್ರಿಲ್ ತಿಂಗಳ ಪಡಿತರವನ್ನು ಹಂಚಿಕೆ ಮಾಡಿಲ್ಲ, ಈ ಬಗ್ಗೆ ತಹಸೀಲ್ದಾರರಿಗೆ ದೂರು ನೀಡಿದರೂ ಇನ್ನು ಪರಿಶೀಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಪಡಿತರ ವಂಚಿಸಿದವರ ಮೇಲೆ ಏನು ಕ್ರಮ ಜರುಗಿಸಿದ್ದೀರಿ ಇನ್ನು ಎಷ್ಟು ದಿನ ಬೇಕು ಎಂದು ಗ್ರಾಮಸ್ಥರು ಉಪ ತಹಸೀಲ್ದಾರ್ ಖಾಜಾಹುಸೇನರನ್ನು ತರಾಟೆಗೆ ತೆಗೆದುಕೊಂಡರು.
ಪಡಿತರ ವಿತರಿಸಿಲ್ಲ ಯಾಕೆ ಎಂದು ಕೇಳಿದ್ದಕ್ಕೆ ಅಧಿಕಾರಿಗಳು ಸಂಚಾರಿ ನ್ಯಾಯಬೆಲೆ ಅಂಗಡಿಯನ್ನು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಗ್ರಾಮದಲ್ಲಿ ಸೊಸೈಟಿ ಇದೆ, ಅವರಿಗೆ ನೀಡಿ ಎಂದು ಒತ್ತಾಯಿಸಿದರು. ವಾರದಲ್ಲಿ ಸರಿಪಡಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜೆಸ್ಕಾಂ ಅಧಿಕಾರಿ ರಿಯಾಜ ಅಹ್ಮದ್, ಪಶು ಅಧಿಕಾರಿ ರಾಚಪ್ಪ, ಸಿಡಿಪಿಒ ಪ್ರಭಾಕರ, ಉಪಾಧ್ಯಕ್ಷ ಶರಣಪ್ಪ ಹುಲ್ಲೂರು, ರೇಷ್ಮೆ ಅಧಿಕಾರಿ, ಕೆಎಸ್ಆರ್ಟಿಸಿ, ಕೃಷಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು. ಗ್ರಾಪಂ ಅಧ್ಯಕ್ಷೆ ಗುಂಡಮ್ಮ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

