ರಾಯಚೂರು

ವಿದ್ಯಾರ್ಥಿಗಳ ಪ್ರಗತಿಗೆ ರ್ಯಾಗಿಂಗ್ ಮಾರಕ

Published On :

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜು. 11
ರ್ಯಾಗಿಂಗ್ ವಿದೇಶಿ ಸಂಸ್ಕೃತಿಯಾಗಿದ್ದು, ವಿದ್ಯಾರ್ಥಿ ಸಮೂಹದ ಪ್ರಗತಿಗೆ ಮಾರಕವಾಗಿದೆ. ಇದು ಕಾನೂನಿನಲ್ಲಿ ಅಪರಾಧವಾಗಿದ್ದು, ರ್ಯಾಗಿಂಗ್‌ಗೆ ಒಳಗಾದವರು ಕಾನೂನಿನ ನೆರವು ಪಡೆಯುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಜಿ.ಎಂ. ಪಾಟೀಲ್ ಸಲಹೆ ನೀಡಿದರು.
ನಗರದಲ್ಲಿ ಶುಕ್ರವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವೀರಶೈವ ಕಾಲೇಜು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ರ್ಯಾಗಿಂಗ್ ವಿರೋಧಿ ಕಾನೂನು ಕುರಿತು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೃತ್ತಿ ಶಿಕ್ಷಣ ಕೋರ್ಸುಗಳ ಕಾಲೇಜುಗಳಲ್ಲಿ ಹೆಚ್ಚಾಗಿ ರ್ಯಾಗಿಂಗ್ ಕಂಡುಬರುತ್ತದೆ. ವಿದೇಶಿ ಸಂಸ್ಕೃತಿಯಾಗಿರುವ ರ್ಯಾಗಿಂಗ್ ದೇಶದಲ್ಲಿ ಸಾಮಾಜಿಕ ಪಿಡುಗಾಗಿದೆ. ರ್ಯಾಗಿಂಗ್ ತಡೆಯಲು ಹಾಗೂ ರ್ಯಾಗಿಂಗ್ ಒಳಗಾದವರ ನೆರವಿಗೆ ಧಾವಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯವಾಣಿಯನ್ನು ಆರಂಭಿಸಿವೆ ಎಂದು ತಿಳಿಸಿದರು.
ವಿಕೃತ ಮನಸುಳ್ಳವರಿಗೆ ಪಾಠ ಕಲಿಸಿ: ವಿಕೃತ ಮನಸ್ಸಿನ ಯುವಕರು ರ್ಯಾಗಿಂಗ್ ನಡೆಸುತ್ತಾರೆ. ಆದರೆ ಅದರಿಂದ ಮುಗ್ಧ ಮನಸುಳ್ಳ ವಿದ್ಯಾರ್ಥಿಗಳು ನೊಂದು ಆತ್ಮಹತ್ಯೆಯಂಥ ಕೃತ್ಯಕ್ಕೂ ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಪ್ರಾಣ ಕಳೆದುಕೊಳ್ಳುವ ಬದಲು ಕಾನೂನಿನ ನೆರವು ಪಡೆದು ವಿಕೃತ ಮನಸಿನವರಿಗೆ ತಕ್ಕಪಾಠ ಕಲಿಸಲು ಮುಂದಾಗುವಂತೆ ಕರೆ ನೀಡಿದರು.
ದೇಶದಲ್ಲಿ ಈ ಮೊದಲು ರ್ಯಾಗಿಂಗ್‌ನಂಥ ಅಮಾನುಷ ಕೃತ್ಯಗಳು ನಡೆಯುತ್ತಿರಲಿಲ್ಲ. ಆದರೆ ವಿದೇಶಿ ಸಂಸ್ಕೃತಿಯತ್ತ ದೇಶದ ಯುವಜನಾಂಗವು ಆಕರ್ಷಣೆಗೊಂಡ ನಂತರದಲ್ಲಿ ರ್ಯಾಗಿಂಗ್ ಹಾವಳಿ ಕಂಡುಬಂದಿದೆ. ವಿದ್ಯಾರ್ಥಿಗಳು ಉತ್ತಮ ನಡತೆ, ಸಂಸ್ಕೃತಿಯ ಅನುಕರಣೆ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನಹರಿಸಬೇಕೇ ವಿನಾ ವಿಕೃತ ಮನಸ್ಥಿತಿ ಬೆಳೆಸಿಕೊಳ್ಳದಂತೆ ಸಲಹೆ ನೀಡಿದರು.
ಏನೇನು ಶಿಕ್ಷೆ: ರ್ಯಾಗಿಂಗ್ ಮಾಡುವಂಥ ವಿದ್ಯಾರ್ಥಿಗೆ ಕಠಿಣ ಶಿಕ್ಷೆಯಿದೆ. ಆತ ಅಧ್ಯಯನ ಮಾಡುವ ಕಾಲೇಜಿನಿಂದ ಹೊರಹಾಕುವುದು, ವಿದ್ಯಾರ್ಥಿ ವೇತನ ಕಡಿತ, 25 ಸಾವಿರದಿಂದ 1 ಲಕ್ಷವರೆಗೆ ದಂಡ ವಿಧಿಸುವುದು ಇನ್ನಿತರೆ ರೀತಿಯಲ್ಲಿ ಶಿಕ್ಷಿಸುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಸಿದರು.
ರ್ಯಾಗಿಂಗ್ ಹಾವಳಿ ತಡೆಗೆ ಕಾಲೇಜು ಮಟ್ಟದಲ್ಲಿ ಸಮಿತಿಗಳು ರಚಿಸಲಾಗಿದೆ. ಅದೇ ರೀತಿ ವಿಶ್ವವಿದ್ಯಾಲಯಗಳ ಮಟ್ಟದಲ್ಲಿಯೂ ರ್ಯಾಗಿಂಗ್ ಮೇಲೆ ನಿಗಾಯಿರಿಸಲು ಹಾಗೂ ತಡೆಗೆ ಕಣ್ಗಾವಲು ಸಮಿತಿಗಳಿದ್ದು ಅಂಥ ಚಟುವಟಿಕೆಗಳನ್ನು ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ನಡೆಯದಂತೆ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.
ಸಹಾಯವಾಣಿ ಸ್ಥಾಪನೆ: ಸುಪ್ರೀಂ ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ರ್ಯಾಗಿಂಗ್ ತಡೆಗೆ ಸಹಾಯವಾಣಿ ಸ್ಥಾಪಿಸಲಾಗಿದೆ. ಸಂತ್ರಸ್ತರು ಅಂಥ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದಲ್ಲಿ ತಪ್ಪಿತಸ್ಥರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಹೇಳಿದರು.
ರ್ಯಾಗಿಂಗ್ ವಿರೋಧಿ ಕಾನೂನು ಕುರಿತು ಉಪನ್ಯಾಸ ನೀಡಿದ ಹಿರಿಯ ವಕೀಲ ಬಿ.ಬಸವರಾಜಪ್ಪ ಅವರು, ಕುಚೇಷ್ಟೆ ಮಾಡುವುದೇ ರ್ಯಾಗಿಂಗ್ ಆಗುತ್ತದೆ. ನಮ್ಮದಲ್ಲದ ಸಂಸ್ಕೃತಿಯೇ ರ್ಯಾಗಿಂಗ್ ಆಗಿರುವ ಹಿನ್ನೆಲೆಯಲ್ಲಿ ಇಂಥ ದುಷ್ಕೃತ್ಯಗಳ ತಡೆಗೆ ನಿರ್ದಿಷ್ಟ ಕಾನೂನು ರಚಿಸಿಲ್ಲ. ಆದರೆ ಒಬ್ಬರು ಮತ್ತೊಬ್ಬರನ್ನು ಹೀಯಾಳಿಸುವುದು, ನಿಂದಿಸುವುದು, ತೊಂದರೆಯುಂಟು ಮಾಡುವುದು. ಇಂಥ ಚಟುವಟಿಕೆಗಳು ರ್ಯಾಗಿಂಗ್ ಆಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು. ಇಂಥ ಕೃತ್ಯಕ್ಕೆ ಕಾನೂನಿನಡಿ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವೀರಶೈವ ಸಮಾಜದ ಅಧ್ಯಕ್ಷ ಗುಮಗೇರಿ ಮಹಾಂತಗೌಡರು ವಹಿಸಿದ್ದರು. ಸಮಾರಂಭದಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಬಿ.ವಿ.ಪಾಟೀಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭಾನು ರಾಜ್, ಜಿಲ್ಲಾ ವೀರಶೈವ ಸಮಾಜದ ಕಾರ್ಯದರ್ಶಿ ರಾಜೇಂದ್ರ ಪಾಟೀಲ್ ರೇವೂರು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚೆಲುವಮೂರ್ತಿ, ವಕೀಲರ ಸಂಘದ ಕಾರ್ಯದರ್ಶಿ ಪ್ರಭುದೇವ್ ಪಾಟೀಲ್ ಕರಡ್ಡಿ, ಬಸವರಾಜ ಸಕ್ರಿ ಸೇರಿ ಅನೇಕರಿದ್ದರು. ವೀರಶೈವ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.