ರಾಯಚೂರು

ಮಂಜೂರಾದ ಎಲ್ಲ ಕೋರ್ಸ್ ಪ್ರಾರಂಭಕ್ಕೆ ಸಂಘಟನೆಗಳ ಧರಣಿ

Published On :

ರಾಯಚೂರು: ನಗರದ ಮಹಿಳಾ ಸರ್ಕಾರಿ ಪದವಿ ಕಾಲೇಜಿಗೆ ಮಂಜೂರಾಗಿರುವ ಎಲ್ಲ 7 ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಒತ್ತಾಯಿಸಿ ನಗರದಲ್ಲಿ ಮಂಗಳವಾರ ಎಐಡಿಎಸ್‌ಒ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್, ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ ಜಿಲ್ಲಾ ಸಮಿತಿಗಳು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ನಗರಕ್ಕೆ ರಾಜ್ಯ ಸರ್ಕಾರದಿಂದ ಹೊಸದಾಗಿ ಮಂಜೂರಾದ ಮಹಿಳಾ ಪದವಿ ಕಾಲೇಜಿಗೆ ಅನುಮತಿ ನೀಡಿದ ಎಲ್ಲಾ 7 ಕೋರ್ಸ್‌ಗಳನ್ನು ಆರಂಭಿಸಲು ಹಾಲಿ ಪ್ರಾಚಾರ್ಯರ ನಿರಾಸಕ್ತಿಯಿಂದ ವಿಳಂಬವಾಗಿದೆ ಎಂದು ದೂರಿದರು.
ಸರ್ಕಾರ ಮಹಿಳಾ ಪದವಿ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಎಸ್ ಡಬ್ಲೂ, ಬಿಬಿಎ, ಬಿಸಿಎ ಹಾಗೂ ಬಿಎಸ್ಸಿ ಹೋಂ ಸೈನ್ಸ್ ಕೋರ್ಸುಗಳಲ್ಲಿ ಕೇವಲ ಬಿಎ ಕೋರ್ಸ್ ಮಾತ್ರ ಆರಂಭಿಸಲಾಗಿದೆ. ಇತರೆ ಕೋರ್ಸ್‌ಗಾಗಿ ಬರುವ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಲ್ಲ, ಕೊಠಡಿಗಳಿಲ್ಲ ಎಂದು ನೆಪ ಹೇಳುತ್ತಾ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಿಕಾಂಗೆ ಈಗಾಗಲೇ 10 ಜನ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ತಯಾರಿದ್ದಾರೆ. ಆದರೂ ಇನ್ನೂ ಐವರು ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದರೆ ತೊಂದರೆಯಾಗಲಿದೆ ಎಂದು ಹೇಳುವ ಮೂಲಕ ಬಿಕಾಂ ಕೋರ್ಸ್ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಕಾಲೇಜಿನ ಪ್ರಾಚಾರ್ಯರು ಪ್ರವೇಶ ಪಡೆಯಲು ಆಗಮಿಸುವವರಿಗೆ ಯಾವುದೇ ಕೋರ್ಸ್‌ಗೆ ಸೇರಲು ಬಯಸಿದರೆ ಆ ಕೋರ್ಸ್‌ಗೆ ಪ್ರವೇಶಾವಕಾಶ ಕಲ್ಪಿಸಬೇಕು. ಅಗತ್ಯ ಸಂಖ್ಯೆಯ ವಿದ್ಯಾರ್ಥಿನಿಯರು ಪ್ರವೇಶ ಪಡೆಯದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಈ ನಿಟ್ಟಿನಲ್ಲಿ ಮತ್ತೆ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.
ಈ ಸಂದರ್ಭ ವಿವಿಧ ಸಂಘಟನೆಗಳ ಪ್ರಮುಖರಾದ ಸರೋಜಾ ಗೋನವಾರ್, ಚನ್ನಬಸವ ಜಾನೇಕಲ್, ಮಹೇಶ ಚೀಕಲ ಪರ್ವಿ, ಪ್ರಸಾದ್, ರಾಜು, ಸುನೀತಾ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.