ರಾಜೋಳಿಬಂಡಾ ಬಿಕ್ಕಟ್ಟು: ಸರ್ಕಾರದ ನಿಲುವು ಬದಲು
ಜಗನ್ನಾಥ ಆರ್. ದೇಸಾಯಿ
ರಾಯಚೂರು: ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರ ಮಧ್ಯೆ ಉಂಟಾಗಿದ್ದ ಸಂಘರ್ಷದಿಂದ ರಾಜೋಳಿಬಂಡಾ ತಿರುವು ಯೋಜನೆ (ಆರ್ಡಿಎಸ್) ಅಣೆಕಟ್ಟೆ ಆಧುನೀಕರಣ ಕಾಮಗಾರಿಗೆ ಸಂಬಂಧಿಸಿ ತಟಸ್ಥ ನಿಲುವು ತಳೆದಿದ್ದ ಕರ್ನಾಟಕ ಸರ್ಕಾರ ಈಗ ನಿಲುವು ಬದಲಿಸಿದೆ. ಪೊಲೀಸ್ ಭದ್ರತೆಯಲ್ಲಿ ಆಧುನೀಕರಣ ಕಾರ್ಯ ಪುನಾರಂಭಿಸಲು ನಿರ್ಧರಿಸಿದೆ.
ಮಾನವಿ ತಾಲೂಕಿನ ರಾಜೋಳಿ ಬಂಡಾ ತಿರುವು ಯೋಜನೆಯ ಅಣೆಕಟ್ಟೆಯು 2009ರ ಪ್ರವಾಹ ಸಂದರ್ಭ ಅಲ್ಲಲ್ಲಿ ಹಾನಿ ಗೀಡಾಗಿತ್ತು. ಅಂತೆಯೇ ಕರ್ನಾಟಕ ಸರ್ಕಾರದ ನೀರಾವರಿ ಇಲಾಖೆ ಅಣೆಕಟ್ಟೆ ಆಧುನೀಕರಣಕ್ಕೆ ಮುಂದಾಗಿತ್ತು. ಕಾಮಗಾರಿ 3 ವರ್ಷ ತಡವಾಗಿ ಈಚೆಗಷ್ಟೇ ಆರಂಭಗೊಂಡಿತ್ತು.
ಆದರೆ ಆಂಧ್ರದ ಕರ್ನೂಲು ಜಿಲ್ಲೆಯ ರೈತರ ವಿರೋಧದಿಂದ ಕೆಲಸ ಸ್ಥಗಿತಗೊಂಡಿತ್ತು. ಸದ್ಯ ಕರ್ನಾಟಕ ಸರ್ಕಾರ ಪೊಲೀಸ್ ಬಿಗಿ ಕಾವಲಿನಲ್ಲಿ ಕಾಮಗಾರಿ ಪುನಾರಂಭಿಸಲು ಮುಂದಾಗಿದೆ. ವಿವಾದಕ್ಕೆ ಸಂಬಂಧಿಸಿ ತೆಲಂಗಾಣ ರಾಜ್ಯದ ಮಹೆಬೂಬ್ ನಗರ ಜಿಲ್ಲಾಧಿಕಾರಿ ಗಿರಿಜಾ ಶಂಕರ್ ಇತ್ತೀಚೆಗೆ ರಾಯಚೂರಿನ ಪ್ರಭಾರಿ ಜಿಲ್ಲಾಧಿಕಾರಿ ವಿಜಯ ಜೋತ್ಸ್ನಾ ಅವರನ್ನು ಭೇಟಿ ಮಾಡಿ ಕಾಮಗಾರಿ ಮುಂದುವರಿಸಲು ಒತ್ತಾಯಿಸಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿ ರಾಯಚೂರು ಜಿಲ್ಲಾಧಿಕಾರಿ ಜತೆಗಿನ ಭೇಟಿಯಿಂದ ದೂರವುಳಿದಿದ್ದ ಆಂಧ್ರದ ಕರ್ನೂಲು ಜಿಲ್ಲಾಧಿಕಾರಿ ವಿಜಯ ಮೋಹನ್ ವಿವಾದಕ್ಕೆ ಸಂಬಂಧಿಸಿ ಚಕಾರವೆತ್ತಿರಲಿಲ್ಲ. ಆಧುನೀಕರಣ ಕಾಮಗಾರಿ ಬಗ್ಗೆ ಕರ್ನಾಟಕ ಸರ್ಕಾರವು, ಆಂಧ್ರ ಮತ್ತು ತೆಲಂಗಾಣ ಮಧ್ಯದ ಬಿಕ್ಕಟ್ಟು ಬಗೆಹರಿಯಲೆಂದು ತಟಸ್ಥಗೊಂಡಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ರಾಜೋಳಿ ಬಂಡಾ ತಿರುವು ಯೋಜನೆ ಅಣೆಕಟ್ಟೆಯ ಕರ್ನಾಟಕ ಭಾಗದ 410 ಮೀ. ಗೋಡೆಯ ಆಧುನೀಕರಣ ಕಾಮಗಾರಿ ಮುಂದುವರಿಸಲು ಕರ್ನಾಟಕ ನಿರ್ಧರಿಸಿದೆ.
ಆದೇಶ: ಈ ನಿಟ್ಟಿನಲ್ಲಿ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಜು.25ರಂದು ರಾಯಚೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಆರ್ಡಿಎಸ್ ಅಣೆಕಟ್ಟೆಯ ಕರ್ನಾಟಕದ ಭಾಗದಲ್ಲಿರುವ ಆಧುನೀಕರಣ ಕಾಮಗಾರಿಯನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಮುಂದುವರಿಸಿ ಪೂರ್ಣಗೊಳಿಸಲು ಸೂಚಿಸಿದ್ದಾರೆ.
ಉಲ್ಲೇಖ: ತೆಲಂಗಾಣದ ನೀರಾವರಿ, ಸಂಸದೀಯ ವ್ಯವಹಾರ, ಮಾರುಕಟ್ಟೆ ಮತ್ತು ಭೂ ಹಾಗೂ ಗಣಿ ಸಚಿವ ಟಿ. ಹರೀಶ್ ರಾವ್ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಆರ್ಡಿಎಸ್ ಆಧುನೀಕರಣ ಕಾಮಗಾರಿ ಈಗಾಗಲೇ ವಿಳಂಬವಾಗಿದೆ. ಅದರಿಂದ ರೈತರಿಗೆ ತೊಂದರೆಯಾಗುವ ಸಾಧ್ಯತೆಯ ಮನಗಂಡು ಶೀಘ್ರ ಪೂರ್ಣಗೊಳಿಸಲು ಮನವಿ ಮಾಡಿದ್ದಾರೆಂದು ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರ್ಡಿಎಸ್ ಆಧುನೀಕರಣ ಕಾಮಗಾರಿಯನ್ನು ಕೂಡಲೇ ಸೂಕ್ತ ಪೊಲೀಸ್ ಬಿಗಿ ಭದ್ರತೆಯನ್ನೊದಗಿಸಬೇಕು. ಯಾವುದೇ ರೀತಿ ಅಡ್ಡಿ ಆತಂಕ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ ಕಾಮಗಾರಿ ಪೂರ್ಣಗೊಳ್ಳಲು ಪೂರಕ ಕ್ರಮ ಕೈಗೊಳ್ಳುವಂತೆ ರಾಯಚೂರು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಈಗಾಗಲೇ ಆಂಧ್ರ, ತೆಲಂಗಾಣ ರಾಜ್ಯಗಳು ಪ್ರತ್ಯೇಕಗೊಂಡಾಗಿನಿಂದ ವಿವಾದದ ಕೇಂದ್ರವಾಗಿರುವ ಆರ್ಡಿಎಸ್ ಯೋಜನೆ ಸ್ಥಳದಲ್ಲಿ ಅಣೆಕಟ್ಟೆ ಆಧುನೀಕರಣ ಮುಗಿಸುವುದು ಜಿಲ್ಲಾಡಳಿತಕ್ಕೆ ಅನಿವಾರ್ಯವಾಗಿದೆ. ತುಂಗಭದ್ರಾ ಜಲಾಶಯವು ಬಹುತೇಕ ಭರ್ತಿಯಾಗುತ್ತಿರುವ ಈ ಹಂತದಲ್ಲಿ ನದಿಗೆ ನೀರು ಹರಿಸುವ ದಿನಗಳು ದೂರವಿಲ್ಲ. ಆರ್ಡಿಎಸ್ ಅಣೆಕಟ್ಟೆಗೆ ನೀರು ತಲುಪುವ ಮೊದಲೇ ಸುರಕ್ಷತಾ ದೃಷ್ಟಿಯಿಂದ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಆಸಕ್ತಿ ತೋರಿದಂತಿದೆ ಎಂಬ ಮಾತು ಕೇಳಿಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

