ರಾಯಚೂರು

ಸರ್ವ ಭೂತಾಂತರಾತ್ಮನ ಆರಾಧಾನೆಯ ಹಬ್ಬವಿದು

Published On :

 ಅಮರೇಶಸ್ವಾಮಿ ಬಲ್ಲಟಗಿ
ಲಿಂಗಸ್ಗೂರು: ಸರ್ವ ಭೂತಾಂತರಾತ್ಮ ಎನಿಸಿಕೊಂಡಿರುವ ದೇವರಲ್ಲಿ ನಾಗದೇವತೆಗೂ ಪೂಜ್ಯನೀಯ ಸ್ಥಾನವಿದೆ. ಅಂತೆಯೇ ಶ್ರಾವಣ ಮಾಸದ ಶುದ್ಧ ಪಂಚಮಿಯಂದು ನಾಗರಾಧನೆ ಮಾಡಲಾಗುತ್ತದೆ. ಈ ಬಾರಿ ಶುಕ್ರವಾರ ನಾಗರ ಪಂಚಮಿ ಆಚರಿಸಲಾಗುತ್ತಿದ್ದು, ಭಕ್ತಿಯಿಂದ ಹಾಲನೆರೆದು ಭಕ್ತಿ ಸಮರ್ಪಿಸಲಾಗುತ್ತದೆ.
ವಿಶ್ವದ ಅನೇಕ ಪ್ರಾಚೀನ ಸಂಸ್ಕೃತಿಗಳಲ್ಲಿ ಸರ್ಪಗಳ ಕುರಿತು ಕಥೆ-ವ್ಯಾಖ್ಯಾನಗಳಿದ್ದು, ಕೆಲ ಪ್ರಾಣಿ, ಪಕ್ಷಿ, ಮರ, ನದಿಗಳನ್ನು ಪ್ರಕೃತಿಯ ದಿವ್ಯ ಶಕ್ತಿಗಳ ಸಂಕೇತವಾಗಿ ಮಾನ್ಯ ಮಾಡಲಾಗಿದೆ. ವಿಶೇಷವಾಗಿ ಆನೆ ಸೊಂಡಿಲು ಗಣಪ, ಕುದುರೆ ಮುಖದ ಹಯಗ್ರೀವ, ವರಾಹ ಮುಖದ ವರಾಹಾವತಾರ ಮುಂತಾದ ದೇವತಾ ಮೂರ್ತಿಗಳು ಹಾಗೂ ಶೇಷ, ಆನೆ, ಮೀನು, ಆಮೆ, ಸಿಂಹ, ಇಲಿ, ನಂದಿ ಮೊದಲಾದ ಪ್ರಾಣಿಗಳು ನವಿಲು, ಹಂಸ, ಗರುಡ ಮೊದಲಾದ ಪಕ್ಷಿಗಳು ದೇವತಾ ಸಾನ್ನಿಧ್ಯದಲ್ಲಿ ಅವಕಾಶ ಪಡೆದಿವೆ.
ಸರ್ಪದೋಷ ನಿವಾರಣೆ: ಹಿಂದೂ ಸಂಸ್ಕೃತಿಯಲ್ಲಿ ನಾಗರಪಂಚಮಿಯ ಮುನ್ನಾ ದಿನ ನಾಗರಚೌತಿ ಎಂದು ಆಚರಿಸುವ ಕ್ರಮವಿದೆ. ನಾಗಪಂಚಮಿ ಹಾಗೂ ಭಾದ್ರಪದ ಮತ್ತು ಆಶ್ವೀಜ ಶುದ್ಧ ಪಂಚಮಿಗಳಲ್ಲಿ ನಾಗನ ಪೂಜಿಸಿದರೆ ಸರ್ಪದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ನಾಗರಹಾವನ್ನು ಫಲವಂತಿಕೆಯ ಪ್ರತೀಕವೆಂದೂ ಕರೆಯಲಾಗುತ್ತದೆ. ನಾಗರ ಪಂಚಮಿ ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ಧಿ ಪಡೆದಿದ್ದು ಮಾಂಗಲ್ಯ, ಪುತ್ರ ಸಂಪತ್ಪ್ರದವೆಂದು ಭಾವಿಸಲಾಗುತ್ತದೆ.
ಜೋಕಾಲಿ ವಿಶೇಷ: ಉತ್ತರ ಕರ್ನಾಟಕ ಭಾಗದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಪಂಚಮಿ ಅಂಗವಾಗಿ ಮನೆಗಳಲ್ಲಿ ವಾರಗಟ್ಟಲೆ ಜೋಕಾಲಿ ಕಟ್ಟಿ ಮಹಿಳೆಯರು 'ನಾಗಪ್ಪಗ್ಹಾಲ ಹೊಯ್ಯೋಣ, ನಾಗರ ಹೆಡಿಯಾಂಗ ಆಡೋಣ, ನಾಗರ ಪಂಚಮಿ ನಾಡ ಹೆಣ್ಣಿಗೆ ಹಬ್ಬ ನಾಗಪ್ಪಗ್ಹಾಲ ಎರಿಯೋಣ-ನನ್ಗೆಣತಿ ನಾಗರ ಹೆಡಿಹಾಂಗ ಆಡೋಣ. ಅಳ್ಳಿಟ್ಟು ತಂಬಿಟ್ಟು ಮಾಡಿಟ್ಟು ಎಳ್ಳುಂಡಿ ದಳ್ಳೂರಿ ಕಣ್ಣ ಹಣೆಯಾನ-ಕೊರಳಾನ ನಾಗ ನಿನಗೆಡೆಯೋ-ಕೈ ಮುಗಿರೋ' ಎಂಬ ಜನಪದ ಹಾಡುಗಳನ್ನು ಪರಸ್ಪರ ಸವಾಲಿನಿಂದ ಹಾಡುತ್ತಾರೆ. ವಿವಿಧ ಬಗೆಯ ಉಂಡಿಗಳು, ತಿಂಡಿ ತಿನಸುಗಳನ್ನು ಮನೆಮನೆಗೆ ತೆರಳಿ ಹಂಚುವುದು, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಕಂಡು ಬರುತ್ತದೆ.
ಒಟ್ಟಾರೆ ನಾಗರ ಪಂಚಮಿ ಹಬ್ಬ ವಿಶಿಷ್ಟ ರೀತಿಯಲ್ಲಿ ಆಚರಿಸುವುದು ಒಂದೆಡೆಯಾದರೆ ಕಲ್ಲು ನಾಗರಗಳಿಗೆ ಹಾಲನೆರೆದು, ದಿಟ ನಾಗರವನ್ನು ಕೊಲ್ಲುವ ಮಾನವನ ಮೌಢ್ಯವನ್ನು ನೋಡಿದಾಗ ಹಬ್ಬಗಳ ಹಿನ್ನೆಲೆಯ ಆಚರಣೆಗಳ ಭಕ್ತಿ-ಭಾವದಿಂದ, ಪವಿತ್ರ ಸಂಕಲ್ಪದಿಂದ ವೃಷ್ಟಿ ಸಮೃಷ್ಟಿಗಳ ಕಲ್ಯಾಣ ಸಾಧನೆಗಾಗಿ ಆಚರಿಸಲ್ಪಡಬೇಕು ಎಂಬುದು ಮನಗಣಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.