ಜನಸಂಖ್ಯಾಧಾರ ಗ್ರಾಪಂ ಪುನಾರಚನೆ ಅವಶ್ಯ
ಕ.ಪ್ರ. ವಾರ್ತೆ ರಾಯಚೂರು ಜೂ.4
ರಾಜ್ಯದಲ್ಲಿ 1991ರ ಜನಸಂಖ್ಯೆಯಾಧರಿಸಿ ಗ್ರಾಮ ಪಂಚಾಯಿತಿಗಳನ್ನು ಈ ಮೊದಲು ರಚಿಸಿದ್ದು, ಸದ್ಯದ ಜನಸಂಖ್ಯೆಯಂತೆ ಗ್ರಾಪಂಗಳ ಪುನಾರಚನೆಯ ಅವಶ್ಯಕತೆಯಿದೆ ಎಂದು ಗ್ರಾಪಂ ಪುನಾವಿಂಗಡಣೆ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯಮಠ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿ, ಗ್ರಾಪಂಗಳು ಜನರ ಬಳಿಯೇ ಇರಬೇಕೆಂಬುದು ಸರ್ಕಾರದ ಆಶಯ. ಅಂತೆಯೇ ತಮ್ಮ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈಗಾಗಲೇ ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು ಸಾರ್ವಜನಿಕರು ಹಾಗೂ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರಿಂದ ಅಹವಾಲು ಸ್ವೀಕರಿಸಿದ್ದಾಗಿ ತಿಳಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ: ಸದ್ಯ ರಾಜ್ಯದಲ್ಲಿ 35 ಕಿ.ಮೀ.ನಿಂದ 71 ಕಿ.ಮೀ.ವರೆಗೆ ದೂರದಲ್ಲಿ ಗ್ರಾಪಂಗಳಿರುವುದು ಕಂಡುಬಂದಿದೆ. ಅದರಿಂದ ಅಭಿವೃದ್ಧಿ ಕಾರ್ಯ ಸೇರಿ ವಿವಿಧ ಕೆಲಸ ಕಾರ್ಯಗಳಿಗೆ ತಡವಾಗುತ್ತಿದೆ. ಹಾಗೆಯೇ ಜನಸಂಖ್ಯೆಯೂ ಹೆಚ್ಚಳ ಕಂಡಿರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ ಸದ್ಯ ಗ್ರಾಪಂಗಳ ಪುನಾರಚನೆ ತುರ್ತು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಅಹವಾಲು ಸ್ವೀಕರಿಸಿ ಅವುಗಳನ್ನು ಪರಿಶೀಲಿಸಿ ನೂತನ ಗ್ರಾಪಂಗಳ ರಚನೆಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದರು.
ಪ್ರತಿ 5ರಿಂದ 6 ಕಿಮೀಗೆ ಒಂದು ಗ್ರಾಪಂ ಇರಬೇಕು. ಹಾಗೆಯೇ ಪ್ರತಿ 10 ಸಾವಿರ ಜನರಿಗೆ ಒಂದು ಗ್ರಾಪಂ ರಚನೆಯಾಗುವುದು ಅವಶ್ಯ ಎಂಬುದು ಪ್ರವಾಸದ ವೇಳೆ ಜನರಿಂದ ಬಂದ ಅಹವಾಲುಗಳಿಂದ ಅರಿವಿಗೆ ಬಂದಿದೆ. ಸಮಿತಿಯು ಸಲ್ಲಿಸುವ ವರದಿಯಲ್ಲಿ ಇಂಥ ಎಲ್ಲ ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂದು ಅವರು ಸಭೆಯಲ್ಲಿ ಹೇಳಿದರು.
ಹಿಂದೊಮ್ಮೆ ಕೇವಲ ಮೇಲುಜಾತಿಯವರು ಗ್ರಾಮೀಣ ಮಟ್ಟದಲ್ಲಿ ಪಂಚಾಯಿತಿಗಳಲ್ಲಿ ಅಧಿಕಾರ ನಡೆಸುತ್ತಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ಸಮಾಜದ ಕೆಳ ವರ್ಗದವರೂ ಗ್ರಾಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅಧಿಕಾರ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಮತ್ತಷ್ಟು ಗ್ರಾಪಂಗಳ ರಚನೆಯಿಂದ ಎಲ್ಲರಿಗೂ ಸಮಾನತೆ ದೊರೆಯುವ ಕಾರ್ಯವಾಗಲಿದೆ ಎಂದರು.
ಅಹವಾಲು ಸಲ್ಲಿಕೆ: ಈ ವೇಳೆ ಸಭೆಯಲ್ಲಿ ಹಾಜರಿದ್ದ ಮಾನವಿ ತಾಲೂಕಿನ ಅಮೀನಗಡದ ರಾಜೇಶ್ವರಿ ಶ್ರೀನಿವಾಸ್ ಅವರು ಅಮೀನಗಡ ಗ್ರಾಪಂ.ನಲ್ಲಿ 9 ಗ್ರಾಮಗಳಿದ್ದು ಸದ್ಯ ವಟಗಲ್ ಗ್ರಾಪಂ ರಚನೆಯ ಅವಶ್ಯಕತೆಯಿದೆ ಎಂದು ಮನವಿ ಸಲ್ಲಿಸಿದರು.
ಅದೇ ರೀತಿ ರಾಯಚೂರು ತಾಲೂಕಿನ ಯರಗೇರಾ ಗ್ರಾಪಂ ವಿಭಜಿಸಿ ಉಪ್ರಾಳ ಗ್ರಾಪಂ ಸ್ಥಾಪಿಸಬೇಕು. ಕಡಗಂದೊಡ್ಡಿ ಗ್ರಾಮವನ್ನು ಸಿಂಗನೋಡಿ ಗ್ರಾಪಂನ ಬದಲಿಗೆ ಚಂದ್ರಬಂಡಾ ಗ್ರಾಪಂ ವ್ಯಾಪ್ತಿಗೆ ಸೇರಿಸಬೇಕು. ಜೇಗರಕಲ್ ಗ್ರಾಪಂ ವ್ಯಾಪ್ತಿಯಲ್ಲಿರುವ ಮೀರಾಪುರದಲ್ಲಿ ಗ್ರಾಪಂ ಸ್ಥಾಪಿಸಬೇಕು. ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಪಂ ವ್ಯಾಪ್ತಿಯಲ್ಲಿರುವ ಸೂಲದಗುಡ್ಡ ಹಾಗೂ ಗಾಜಲದಿನ್ನಿ ಗ್ರಾಮಗಳನ್ನು ಕರಡಿಗುಡ್ಡ ಗ್ರಾಪಂ ಗೆ ಸೇರಿಸುವಂತೆ ಸಾರ್ವಜನಿಕರು ಹಾಗೂ ಗ್ರಾಪಂ ಸದಸ್ಯರು ಮನವಿ ಸಲ್ಲಿಸಿದರು.
ಮತದಾರರಿಂದ ಅಧ್ಯಕ್ಷರ ಆಯ್ಕೆ ಸೂಕ್ತ: ಜೆಡಿಎಸ್ ಮುಖಂಡ ನಿಜಾಮುದ್ದೀನ್ ಸಭೆಯಲ್ಲಿ ಮಾತನಾಡಿ, ಗ್ರಾಪಂ ಅಧ್ಯಕ್ಷರನ್ನೂ ಮತದಾರರೇ ನೇರವಾಗಿ ಆಯ್ಕೆ ಮಾಡುವಂಥ ವ್ಯವಸ್ಥೆ ಜಾರಿಗೆ ಬರಬೇಕಿದೆ. ಹಾಗೆಯೇ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿ ವೇಳೆ ಸದ್ಯದ 20-20 ತಿಂಗಳ ಬದಲಿಗೆ 30 ತಿಂಗಳು ಪ್ರತಿ ಅವಧಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಂಜಯ್ಯಮಠ ಅವರು, ಈ ಬಗ್ಗೆ ಕಾನೂನು ಸಮಿತಿ ಅಧ್ಯಕ್ಷ ರಮೇಶ್ಕುಮಾರ್ ಅವರ ಬಳಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಸುಧಾಮಣಿ, ಗಣೇಶ್ ಪ್ರಸಾದ್, ಜಿಪಂ ಸಿಇಒ ವಿಜಯ ಜೋತ್ಸ್ನಾ, ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಸೇರಿದಂತೆ ಜಿಪಂನ ಅಧಿಕಾರಿಗಳಿದ್ದರು.
ಹಾಜರಾತಿ ಕಡಿಮೆಗೆ ಅಸಮಾಧಾನ
ರಾಯಚೂರು: ಗ್ರಾಮ ಪಂಚಾಯಿತಿಗಳ ಪುನಾವಿಂಗಡಣೆ ಹಿನ್ನೆಲೆ ಗ್ರಾಪಂ ಸದಸ್ಯರು ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಕರೆದಿದ್ದ ಸಭೆಯಲ್ಲಿ ಬೆರಳೆಣಿಕೆಯ ಸದಸ್ಯರು ಹಾಜರಾಗಿದ್ದು ಗ್ರಾಪಂ ಪುನಾವಿಂಗಡಣೆ ಸಮಿತಿಯ ಅಸಮಾಧಾನಕ್ಕೆ ಕಾರಣವಾದ ಪ್ರಸಂಗ ಬುಧವಾರ ನಡೆಯಿತು.
ನಗರದ ಜಿಪಂ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಬೆರಳೆಣಿಕೆ ಸಂಖ್ಯೆಯ ಜನತೆ ಉಪಸ್ಥಿತರಿದ್ದರು. ಇದನ್ನು ಕಂಡ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯಮಠ ಅವರು, ಜಿಪಂ ಅಧಿಕಾರಿಗಳು ಎಲ್ಲ ಗ್ರಾಪಂಗಳವರಿಗೆ ಹಾಗೂ ಸಾರ್ವಜನಿಕರಿಗೆ ಸಭೆಯ ಕುರಿತು ಸಮರ್ಪಕ ಮಾಹಿತಿ ನೀಡಿದಂತಿಲ್ಲ. ಆ ಕಾರಣಕ್ಕಾಗಿಯೇ ಹಾಜರಾತಿ ಕಡಿಮೆ ಪ್ರಮಾಣದಲ್ಲಿದೆ. ಇಂಥ ಸಭೆಗಳಿಂದ ಯಾವುದೇ ರೀತಿ ಪ್ರಯೋಜನವಾಗದು. ಜತೆಗೆ ಸರ್ಕಾರ ರಚಿಸಿದ ಸಮಿತಿಯ ಆಶಯಕ್ಕೆ ಧಕ್ಕೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ಮುಂದಾದರೂ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸಭೆಗೆ ಸೇರುವಂತೆ ಮಾಡಬೇಕು. ಹಾಗೆಯೇ ಜಿಪಂ ಗೆ ಅಹವಾಲು ಸಲ್ಲಿಸಿದರೂ ಅವುಗಳನ್ನು ಸಮಿತಿಯು ಪರಿಗಣಿಸಲಿದ್ದು, ಎಲ್ಲರೂ ಗ್ರಾಪಂ ಪುನಾವಿಂಗಡಣೆಗೆ ಸಂಬಂಧಿಸಿ ಜಿಪಂಗೆ ಅರ್ಜಿ ಸಲ್ಲಿಸಲು ಮನವಿ ಮಾಡಿದರು.
ಸೆ.15ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ
ಕ.ಪ್ರ. ವಾರ್ತೆ ರಾಯಚೂರು ಜೂ.4
ರಾಜ್ಯದಲ್ಲಿ ಗ್ರಾಪಂ ಪುನಾವಿಂಗಡಣೆ ಸಮಿತಿಯು ನೂತನ ಗ್ರಾಪಂಗಳ ರಚನೆ ನಿಟ್ಟಿನಲ್ಲಿ ಸಲ್ಲಿಸುವ ವರದಿಯಲ್ಲಿ ಪ್ರತಿ 5 ರಿಂದ 6ಕಿಮೀ ವ್ಯಾಪ್ತಿಯಲ್ಲಿ ಒಂದು ಗ್ರಾಪಂ ಸ್ಥಾಪನೆಗೆ ಆದ್ಯತೆ ನೀಡಲಿದೆ. ಹಾಗೆಯೇ ಪ್ರತಿ 10ಸಾವಿರ ಜನಸಂಖ್ಯೆಗೆ ಒಂದು ಗ್ರಾಪಂ ಸ್ಥಾಪನೆಯಾಗುವಂತೆ ಗಮನಹರಿಸಲಾಗುತ್ತದೆ. ಸಪ್ಟಂಬರ್ 15ರೊಳಗೆ ಸರ್ಕಾರಕ್ಕೆ ಈ ಕುರಿತು ಸಮಗ್ರ ವರದಿ ಸಲ್ಲಿಸುವುದಾಗಿ ಗ್ರಾಪಂ ಪುನಾವಿಂಗಡಣೆ ಸಮಿತಿಯ ಅಧ್ಯಕ್ಷ ಎಸ್.ಜಿ.ನಂಜಯ್ಯಮಠ ಹೇಳಿದರು.
ನಗರದಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಪಂ ವ್ಯಾಪ್ತಿಯನ್ನು ಕಡಿಮೆಗೊಳಿಸುವುದರಿಂದ ಹಾಗೂ ಕಡಿಮೆ ಜನಸಂಖ್ಯೆಗೆ ಒಂದು ಗ್ರಾಪಂ ಸ್ಥಾಪನೆಯಿಂದ ಅಭಿವೃದ್ಧಿ ದಾರಿ ಯಾಗಲಿದೆ. ಈ ವಿಚಾರವನ್ನು ಗಮನದಲ್ಲಿರಿಸಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದರು.
ನೇಮಕಾತಿ: ರಾಜ್ಯದ 13 ಜಿಲ್ಲೆಗಳಲ್ಲಿ ಈಗಾಗಲೇ ತಾವು ಪ್ರವಾಸ ಕೈಗೊಂಡಿದ್ದು, ಪ್ರತಿ ಜಿಲ್ಲೆಯಲ್ಲಿ 7 ರಿಂದ 8 ಹೊಸ ಗ್ರಾಪಂಗಳ ರಚನೆಗೆ ಬೇಡಿಕೆ ಬಂದಿದೆ. ಆದರೆ ನೂತನ ಗ್ರಾಪಂ ರಚನೆ ವೇಳೆ ಆರ್ಥಿಕ ಸಂಪನ್ಮೂಲ ಲಭ್ಯತೆ ಮತ್ತು ಸಿಬ್ಬಂದಿ ನೇಮಕಾತಿಯಂಥ ವಿಚಾರಗಳನ್ನು ಪರಿಗಣಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು. ಸದ್ಯ ರಾಜ್ಯದ ವಿವಿಧೆಡೆ ಪಟ್ಟಣ ಪ್ರದೇಶದಲ್ಲೂ ಗ್ರಾಪಂಗಳಿದ್ದು ಅವುಗಳು ಮುಂದಿನ ದಿನಗಳಲ್ಲಿ ಮೇಲ್ದರ್ಜೆಗೇರುವ ಸಾಧ್ಯ ತೆಯಿರುವುದರಿಂದ ಅಂಥ ಗ್ರಾಪಂಗಳನ್ನು ಗ್ರಾಪಂ ಪುನಾವಿಂಗಡಣೆಯ ಪ್ರಕ್ರಿಯೆಯಲ್ಲಿ ಪರಿಗಣಿಸುವುದಿಲ್ಲ. ಭೌಗೋಳಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಹಾಗೂ ಜನರ ನಿರೀಕ್ಷೆಯಂತೆಯೇ ಸಮಿತಿಯು ವರದಿ ನೀಡಲಿದೆ ಎಂದು ತಿಳಿಸಿದರು.
ಎಚ್ಚರಿಕೆ: ಗ್ರಾಪಂಗಳ ಪುನಾ ವಿಗಂಡಣೆ ವೇಳೆ ಹಾಗೂ ನೂತನ ಗ್ರಾಪಂಗಳ ರಚನೆ ವೇಳೆ ಜನರಿಂದ ಅತಿ ದೂರದಲ್ಲಿ ಗ್ರಾಪಂ ಕಚೇರಿಯಿರದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಆಡಳಿತವು ಜನತೆಯ ಬಳಿಯಿರಬೇಕೆಂಬ ಕಲ್ಪನೆಯಿಂದಲೇ ಗ್ರಾಪಂ ಸ್ಥಾಪಿಸಿದ್ದು, ಈಗ್ಗೆ 23 ವರ್ಷಗಳ ಹಿಂದೆ ಗ್ರಾಪಂ ಗಳ ಸ್ಥಾಪನೆ ವೇಳೆ ಆಗಿನ ಜನಸಂಖ್ಯೆ ಪರಿಗಣಿಸಲಾಗಿತ್ತು. ಈಗ ಜನಸಂಖ್ಯೆಯೂ ಹೆಚ್ಚಳ ಕಂಡಿರುವುದು ಗ್ರಾಪಂಗಳ ಮತ್ತಷ್ಟು ರಚನೆಯ ಅವಶ್ಯಕತೆ ಉಂಟು ಮಾಡಿದೆ ಎಂದರು.
ಸವಾಲು: ಸಮಿತಿಗೆ ಅನುದಾನ ನೀಡಲಾಗಿದೆ. ಆದರೆ ಅದರ ಹಂಚಿಕೆಯ ವಿಚಾರ ಸದ್ಯ ಹಣಕಾಸು ಇಲಾಖೆಯ ಮುಂದಿದ್ದು, ಶೀಘ್ರದಲ್ಲಿಯೇ ಸಮಿತಿಗೆ ಅನುದಾನ ಲಭ್ಯವಾಗಲಿದೆ. ಆದರೆ ಅಲ್ಲಿಯವರೆಗೆ ಕಾಲಹರಣ ಮಾಡದೇ ಸಮಿತಿ ಪ್ರವಾಸ ಕೈಗೊಳ್ಳುತ್ತಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಅರ್ಜಿಗಳು ಚಾಮರಾಜನಗರ ಜಿಲ್ಲೆಯಿಂದ ಬಂದಿದ್ದು, ಆ ಜಿಲ್ಲೆಯ ಭೌಗೋಳಿಕ ವ್ಯವಸ್ಥೆಯ ಕಾರಣಕ್ಕೆ ನೂತನ ಗ್ರಾಪಂಗಳ ರಚನೆ ಸಮಿತಿಗೆ ಬಹುದೊಡ್ಡ ಸವಾಲಾಗಲಿದೆ ಎಂದರು. ಸಮಿತಿಯ ಸದಸ್ಯೆ ಸುಧಾಮಣಿ, ಜಿಪಂ ಉಪಾಧ್ಯಕ್ಷ ಕೆ. ಶರಣಪ್ಪ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

