ವಿವಾದಿತ ಅನಂತಮೂತ್ರ, ಕಲ್ಬುರ್ಗಿ ಗಡಿಪಾರು ಮಾಡಿ
ಕ.ಪ್ರ. ವಾರ್ತೆ , ರಾಯಚೂರು , ಜೂ. 10
ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ತಪ್ಪಲ್ಲ ಎಂದು ವಿವಾದಾತ್ಮಕ ಹೇಳಿಕೆ ಖಂಡಿಸಿ ಪ್ರೊ.ಎಂ.ಎಂ.ಕಲ್ಬುರ್ಗಿ ಮತ್ತು ಯು.ಆರ್.ಅನಂತಮೂರ್ತಿ ಅವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ನಗರದಲ್ಲಿ ಬಿಜೆಪಿ ನಗರ ಯುವಮೋರ್ಚಾ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಯುವ ಮೋರ್ಚಾದ ಹೋರಾಟಗಾರರು ಪ್ರೊ.ಎಂ.ಎಂ. ಕಲ್ಬುರ್ಗಿ ಮತ್ತು ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ್ದಾರೆ. ದೇವರ ಮೂರ್ತಿಯ ಮೇಲೆ ಮೂತ್ರ ಮಾಡಿದರೂ ತಪ್ಪಲ್ಲ, ಪೂಜೆ ನಿಲ್ಲಿಸಿದ್ರೆ ಅಪಾಯವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ದೇಶದ ಬಹುಸಂಖ್ಯಾತ ಹಿಂದೂಗಳ ನಂಬಿಕೆಗೆ ಧಕ್ಕೆಯುಂಟು ಮಾಡಿದ್ದಾರೆಂದು ಟೀಕಿಸಿದರು.
ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳು ಶತಶತಮಾನಗಳಿಂದ ಸನಾತನ ಧರ್ಮದ ಹಿನ್ನೆಲೆಯಲ್ಲಿ ಮೂರ್ತಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಶಕ್ತಿಸ್ವರೂಪವಾಗಿ ದೇವರ ಮೂರ್ತಿಗಳನ್ನು ನಂಬಿದ್ದಾರೆ. ಆದರೆ ಕಲ್ಬುರ್ಗಿ ಮತ್ತು ಅನಂತಮೂರ್ತಿಯಂಥವರು ಹಿಂದೂಗಳ ನಂಬಿಕೆಯ ವಿಚಾರದಲ್ಲಿ ಅನಗತ್ಯ ಗೊಂದಲ ಎಬ್ಬಿಸುವ ಕಾರ್ಯ ಮಾಡಿದ್ದಾರೆಂದು ಆರೋಪಿಸಿದರು.
ಹಿಂದೂಗಳ ಬಗ್ಗೆ ಕಲ್ಬುರ್ಗಿ ಮತ್ತು ಅನಂತಮೂರ್ತಿಯವರು ಕಳೆದ ಕೆಲ ಕಾಲದಿಂದ ಅನಗತ್ಯ ವಿವಾದ ಎಬ್ಬಿಸುವ ಹೇಳಿಕೆ ನೀಡುತ್ತಿದ್ದಾರೆ. ಹಿಂದೂ ಸಮಾಜ ವಿರೋಧಿ ಹೇಳಿಕೆ ನೀಡುವ ಮೂಲಕ ಸಮಾಜಘಾತುಕ ಕಾರ್ಯ ಮಾಡುತ್ತಿದ್ದಾರೆ. ಸೌಹಾರ್ದ ಕೆಡಿಸುವ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆಂದು ದೂರಿದರು.
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರ ಕುರಿತು ಅನಂತಮೂರ್ತಿ ಪ್ರತಿಕ್ರಿಯಿಸಿ, ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿಕೆ ನೀಡಿ ವಿವಾದಕ್ಕೆ ದಾರಿ ಮಾಡಿದ್ದರು. ಸದ್ಯ ಅದೇ ಧಾಟಿಯಲ್ಲಿ ಹಿಂದೂಗಳ ಮನೋಭಾವಕ್ಕೆ ಧಕ್ಕೆಯುಂಟು ಮಾಡುವ ಕಾರ್ಯ ಮಾಡಿದ್ದಾರೆಂದು ಆರೋಪಿಸಿದರು.
ದೇಶ ವಿರೋಧಿ ಹಾಗೂ ಹಿಂದೂ ವಿರೋಧಿ ಹೇಳಿಕೆ ನೀಡಿ ಜನರ ಭಾವನೆಗಳಿಗೆ ತೊಂದರೆಯುಂಟು ಮಾಡುತ್ತಿರುವ ಪ್ರೊ.ಎಂ.ಎಂ.ಕಲ್ಬುರ್ಗಿ ಹಾಗೂ ಅನಂತಮೂರ್ತಿ ಅವರನ್ನು ಕೂಡಲೇ ಸರ್ಕಾರ ಬಂಧಿಸಬೇಕು. ಅವರನ್ನು ಮಾನಸಿಕ ಚಿಕಿತ್ಸೆಗೊಳಪಡಿಸಿ ಗಡಿಪಾರು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ ಹೋರಾಟಗಾರರು ಸಮಾಜಘಾತುಕ ಕಾರ್ಯದಲ್ಲಿ ತೊಡಗಿರುವ ಅನಂತಮೂರ್ತಿ ಅವರಿಗೆ ಈ ಹಿಂದೆ ಕೇಂದ್ರ ಸರ್ಕಾರ ನೀಡಿದ ಜ್ಞಾನಪೀಠ ಪ್ರಶಸ್ತಿ ವಾಪಸು ಪಡೆಯುವಂತೆ ಒತ್ತಾಯಿಸಿದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗದಿದ್ದಲ್ಲಿ ಬಿಜೆಪಿ ವತಿಯಿಂದ ಉಗ್ರ ಹೋರಾಟ ನಡೆಸ ಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶಶಿಲ್ ನಮೋಶಿ, ಬಸನಗೌಡ ಬ್ಯಾಗವಾಟ್, ಬಂಡೇಶ್ ವಲ್ಕಂದಿನ್ನಿ, ರಮಾನಂದ ಯಾದವ್, ಭರತ್ ಅಂಗಡಿ, ಗಿರೀಶ್ ಕನಕವೀಡು, ದೇವಿಸಿಂಗ್ ಠಾಕೂರ್, ರಾಮಚಂದ್ರ ಕಡಗೋಳ, ನರಸಪ್ಪ ಯಕ್ಲಾಸಪುರ, ನಾರಾಯಣರಾವ್ ಪೂರತಿಪ್ಲಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

