ನ. 9ರಿಂದ ವಿಶ್ವ ವೀರಶೈವ ಮಹಾಸಮ್ಮೇಳನ: ಕಾಶಿಶ್ರೀ
ರಾಯಚೂರು: ವೀರಶೈವ ಸಮಾಜದ ವತಿಯಿಂದ ಮೂರು ದಿನಗಳ ವಿಶ್ವ ವೀರಶೈವ ಮಹಾಸಮ್ಮೇಳನವನ್ನು ಕಾಶಿಯಲ್ಲಿ ನ.9ರಿಂದ ಆಯೋಜಿ ಸಲಾಗಿದೆ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ತಿಳಿಸಿದರು. ಅವರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ವೀರಶೈವ ಮಹಾಸಮ್ಮೇಳನವು ಹತ್ತು ಹಲವು ರೀತಿಯಿಂದ ವಿಶೇಷವಾಗಿರಲಿದ್ದು, ದಕ್ಷಿಣ ಭಾರತದ ವೀರಶೈವರ ಜತೆ ರಾಜಸ್ಥಾನ, ಕಾಶ್ಮೀರ, ಗುಜರಾತ ಸೇರಿದಂತೆ ದೇಶದ ಇತರೆ ರಾಜ್ಯಗಳಿಂದಲೂ ವೀರಶೈವರು ಆಗಮಿಸಿ ಪಾಲ್ಗೊಳ್ಳಲಿದ್ದಾರೆಂದರು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಸಮ್ಮೇಳನದಲ್ಲಿ ವೀರಶೈವ ಸಮಾಜದ ಉಗಮ, ಬೆಳವಣಿಗೆ ಮತ್ತಿತರೆ ವಿಚಾರಗಳ ಬಗ್ಗೆ ಗೋಷ್ಠಿ ಆಯೋಜಿಸಲಾಗುತ್ತಿದ್ದು, ಸಮ್ಮೇಳನದ ಸಿದ್ಧತೆಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಜಪ ಯಜ್ಞ: ಕಾಶಿ ಪೀಠವು ಜು.7 ರಿಂದ ನ.11ರವರೆಗೆ 120 ದಿನಗಳ ಕಾಲ ನಿರಂತರ 12 ಕೋಟಿ ಶಿವ ಪಂಚಾಕ್ಷರಿ ಮಹಾಮಂತ್ರದ ಜಪಯಜ್ಞ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಾನವ ಕುಲದ ಒಳಿತಿಗಾಗಿ ಹಾಗೂ ವಿಶ್ವ ಶಾಂತಿಗಾಗಿ ಕಾಶಿಪೀಠವು ನಿರಂತರ ಧಾರ್ಮಿಕ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.
ತಮ್ಮ ಗುರುಗಳಾದ ಲಿಂ. ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯರ ಪುಣ್ಯಾರಾಧನೆ ರಜತ ಮಹೋತ್ಸವ ಹಾಗೂ ಕಾಶಿ ಜ್ಞಾನಪೀಠ ಆರೋಹಣ ಮಾಡಿದ 25 ವರ್ಷ ಪೂರೈಸಿದ ರಜತ ಮಹೋತ್ಸವ ನಿಮಿತ್ತ ಈ ಬೃಹತ್ 12 ಕೋಟಿ ಶಿವಪಂಚಾಕ್ಷರಿಯ ಜಪಯಜ್ಞ ನಡೆಸಲು ಸಂಕಲ್ಪ ಮಾಡಿದ್ದಾಗಿ ತಿಳಿಸಿದರು. ಜಪಯಜ್ಞದಲ್ಲಿ ದಿನವೂ 100 ಜನರು ತಲಾ 10ಸಾವಿರ ಜಪ ಮಾಡಲಿದ್ದಾರೆ. ಈ ಮೂಲಕ 120 ದಿನಗಳಲ್ಲಿ ಒಟ್ಟು 12 ಕೋಟಿ ಜಪ ಪೂರೈಸಲಾಗುತ್ತದೆ. ಇದಕ್ಕಾಗಿ ಕಾಶಿ ಪೀಠದಲ್ಲಿ ಸಂಘಟನಾ ಸಮಿತಿ ರಚಿಸಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಪಯಜ್ಞದ ವೇಳೆ ದಿನವೂ 10ಲಕ್ಷ ಜಪಗಳನ್ನು ಮಾಡುವುದರೊಂದಿಗೆ ಶಿವನಿಗೆ ನಿತ್ಯ 10 ಲಕ್ಷ ರುದ್ರಾಕ್ಷಿಗಳನ್ನು ಸಮರ್ಪಿಸಲಾಗುವುದು. ಪ್ರತಿ ದಿನ 10 ಲಕ್ಷ ಜಪಯಜ್ಞ, ಶಕ್ತಿ ಆರಾಧನೆ, ಅನ್ನಪೂರ್ಣೇಶ್ವರಿ ಮಾತೆಗೆ ಕುಂಕುಮಾರ್ಚನೆ, ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದ ಪಾರಾಯಣ, 18 ಸಿದ್ಧಾಂತ ಶಿಖಾಮಣಿ ಪಾರಾಯಣ ಸಪ್ತಾಹಗಳು ಮತ್ತು ಧರ್ಮ ಚಿಂತನೆ ಗೋಷ್ಠಿಗಳನ್ನು ನಡೆಸಲಾಗುವುದು ಎಂದು ವಿವರಿಸಿದರು.
ಮೀಸಲಿನಿಂದ ಒಳ ಜಾತಿ: ವೀರಶೈವರ ಪಂಚಪೀಠಗಳು ಒಗ್ಗೂಡಿವೆ. ಆದರೆ ಸರ್ಕಾರಗಳು ಜಾತಿ ಆಧಾರದಲ್ಲಿ ಮೀಸಲು ಕಲ್ಪಿಸಲು ಮುಂದಾಗುತ್ತಿದ್ದು, ಅದರಿಂದ ಒಳಜಾತಿಗಳು ಹುಟ್ಟಿಕೊಂಡು ಮೀಸಲು ಪಡೆಯುವ ಕಾರ್ಯಕ್ಕೆ ತೊಡಗುತ್ತಿವೆ. ಜಾತಿಗಿಂತ ಆರ್ಥಿಕ, ಜೀವನ ಮಟ್ಟದ ಆಧಾರದ ಮೇಲೆ ಮೀಸಲು ಕಲ್ಪಿಸುವುದು ಹೆಚ್ಚು ಸೂಕ್ತ ಎಂದು ಹೇಳಿದರು. ಈ ಸಂದರ್ಭ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಜಿಲ್ಲಾ ವೀರಶೈವ ಸಮಾಜದ ಮುಖಂಡರು ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

