ರಸ್ತೆ ಬದಿ ಮುಳ್ಳು ಕಂಟಿ ತೆರವಿಗೆ ಆಗ್ರಹ
ಮುದಗಲ್: ಸಮೀಪದ ಕನ್ನಾಳ ಗ್ರಾಮ ದಿಂದ ಹಡಗಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಮುಳ್ಳು ಕಂಟಿಗಳನ್ನು ತೆರವುಗೊಳಿಸುವಂತೆ ಹಡಗಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಸ್ತೆಗೆ ಮೆಟಲಿಂಗ್, ಸೇತುವೆ, ದುರಸ್ಥಿ ಸೇರಿದಂತೆ 3-4 ಬಾರಿ ಕಾಮಗಾರಿ ಮಾಡಿಸಿ ಸುಮಾರು ರು. 1 ಕೋಟಿಗೂ ಅಧಿಕ ಹಣ ಖರ್ಚು ಮಾಡಿದ್ದರೂ, ರಸ್ತೆಯಲ್ಲಿ ನೆಮ್ಮದಿಯಿಂದ ಸಂಚರಿಸುವಂತಿಲ್ಲ.
ಅಲಲ್ಲಿ ತಗ್ಗುಗಳು ನಿರ್ಮಾಣವಾದರೇ ರಸ್ತೆ ಅಕ್ಕಪಕ್ಕದಲ್ಲಿ ಬಳ್ಳಾರಿ ಜಾಲಿ ಗಿಡಗಳು ಬೆಳೆದು ರಸ್ತೆ ಸಂಚಾರಕ್ಕೆ ಸಂಚುಕಾರ ಒಡ್ಡಿದೆ. ಈ ಬಗ್ಗೆ ಗ್ರಾಪಂ ಹಾಗೂ ಪಂಚಾಯತ ರಾಜ್ ಇಂಜನಿಯರಿಂಗ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮುಳ್ಳು ಕಂಟಿಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಚುನಾವಣಾ ವೇಳೆ ಮಾತ್ರ ಜನಪ್ರತಿನಿಧಿಗಳಿಗೆ ಚುನಾವಣಾ ನಂತರ ಗ್ರಾಮಗಳ ಅಭಿವೃದ್ಧಿ ನೆನೆಪಿರೋದಿಲ್ಲವೆಂದು ಗ್ರಾಮಸ್ಥರು ರಾಜಕೀಯ ಮುಖಂಡರ ಮೇಲೆ ಕಿಡಿ ಕಾರಿದ್ದಾರೆ. ಸಂಚಾರಕ್ಕೆ ಉತ್ತಮ ರಸ್ತೆ ಇಲ್ಲದೇ ಇರುವುದರಿಂದ ಗ್ರಾಮಸ್ಥರು ಪರಿತಪಿಸುವಂತಾಗಿದೆ.
ಬಿಸಿಯೂಟಕ್ಕೆ ಕೊಳೆತ ಕಾಯಿಪಲ್ಲೆಗಳೇ ಆಹಾರ
ಸಿಂಧನೂರು: ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ಯೋಜನೆ ರಾಜ್ಯ ಸರ್ಕಾರದ ಮಹತ್ವದ ಹಲವು ಯೋಜನೆಗಳಲ್ಲಿ ಒಂದು. ಶಾಲಾ ಮಕ್ಕಳ ದಾಖಲಾತಿ ಹೆಚ್ಚಳದ ಉದ್ದೇಶದಿಂದ ಜಾರಿಗೆ ಬಂದಿರುವ ಈ ಯೋಜನೆ ವಿದ್ಯಾರ್ಥಿಗಳ ಪಾಲಿಗೆ ವರವಾಗಿರುವಂತೆ ಶಾಪವೂ ಆಗಿರುವ ಉದಾಹರಣೆಗಳಿಗೆ ಕೊರತೆಯಿಲ್ಲ.
ನಗರದ ಉಪ್ಪರವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟಕ್ಕೆ ಬಳಸುವ ಪದಾರ್ಥಗಳು ಮಾತ್ರ ಹಳಸಲಾಗಿರುವವು ಎನ್ನುವುದು ಗಮನಾರ್ಹ. ಇಲ್ಲಿ ಸುಮಾರು 200 ಹೆಚ್ಚು ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಕೊಳೆತ ಕಾಯಿಪಲ್ಲೆ ಬಳಸಲಾಗುತ್ತಿದೆ. ಉಪ್ಪಾರವಾಡಿ ಶಾಲೆಯಲ್ಲಿ ಅಡುಗೆಗೆಂದು ತಂದಿದ್ದ ಕಾಯಿಪಲ್ಲೆಗಳನ್ನು ನಗರಸಭೆ ಸದಸ್ಯ ಶರಣಯ್ಯಸ್ವಾಮಿ ಹೊಕ್ರಾಣಿ ಕಂಡು ಕೆಂಡಮಂಡಲರಾದರು. ಅಡುಗೆ ಮಾಡುವವರು, ಶಿಕ್ಷಕರನ್ನು ಕರೆಸಿ, ಇಂತಹ ಕಾಯಿಪಲ್ಲೆಗಳನ್ನು ಬಳಸಿದಾಗ, ಶಾಲಾ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಯಾರು ಹೊಣೆ? ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡಿದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.
ಇದು ಕೇವಲ ಉಪ್ಪಾರವಾಡಿ ಶಾಲೆಯ ಕಥೆ ಎಂದು ಭಾವಿಸುವಂತಿಲ್ಲ. ಇತ್ತೀಚಿಗೆ ಗುಂಡಾ ಗ್ರಾಮದ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿದ 22 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ಮನದಿಂದ ಮಾಸುವ ಮುನ್ನವೇ ಮತ್ತೆ ಆಂತಹ ಪ್ರಕರಣಗಳು ಮರಕಳಿಸಿದರೂ ಅಚ್ಚರಿಪಡಬೇಕಾಗಿಲ್ಲ.
ಅತ್ಯಾಚಾರ ಪ್ರಕರಣ: ಉಗ್ರ ಶಿಕ್ಷೆ ವಿಧಿಸಲು ಒತ್ತಾಯ
ರಾಯಚೂರು: ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ಈಚೆಗೆ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡಿಸಿದೆ. ಸಂಘಟನೆಯ ಅಧ್ಯಕ್ಷೆ ಚೇತನಾ ಬನಾರೆ, ಸಮಾಜದಲ್ಲಿ ಹೆಚ್ಚುತ್ತಿರುವ ಅನೈತಿಕ ಸಾಮಾಜಿಕ ನೀತಿ, ನಿಯಮಗಳ ವಿರುದ್ಧ ಲಜ್ಜೆಗೆಟ್ಟ ಪ್ರಕರಣ ಇದಾಗಿದ್ದು, ಅತ್ಯಾಚಾರವೆಸಗಿದ ವ್ಯಕ್ತಿಗೆ ಜಾಮೀನು ಸಿಗದಂತೆ ಜಾಗ್ರತೆ ವಹಿಸಿ ಅತ್ಯುಗ್ರ ಶಿಕ್ಷೆಯಾಗುವಂತೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಸಮಾಜದಲ್ಲಿ ಹರಡುತ್ತಿರುವ ಅಶ್ಲೀಲತೆಯ ವ್ಯಾಪಕ ಪ್ರಚಾರದಿಂದ ನೀತಿ ಮೌಲ್ಯಗಳು ಕುಸಿಯುತ್ತಿವೆ. ಯುವಜನರಲ್ಲಿ ಮೃಗೀಯತೃಷೆ ಹೆಚ್ಚಳವಾಗುತ್ತಿದ್ದು, ಅತ್ಯಾಚಾರದ ಪ್ರಕರಣಕ್ಕೆ ದಾರಿಯಾಗುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಶ್ಲೀಲತೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಯುವಜನತೆಯಲ್ಲಿ ಮೌಲ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಸಮಾಜದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನದಲ್ಲಿ ಮಹತ್ತರ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ಒತ್ತು ನೀಡಬೇಕು. ಈ ದಿಶೆಯಲ್ಲಿ ಜನತೆ ಸರ್ಕಾರವನ್ನು ಆಗ್ರಹಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ರೈತ ಸಂಪರ್ಕ ಕೇಂದ್ರಕ್ಕೆ ತಾ.ಪಂ. ಅಧ್ಯಕ್ಷರ ಭೇಟಿ
ಮುದಗಲ್: ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಲಿಂಗಸುಗೂರ ತಾ.ಪಂ. ಹಂಗಾಮಿ ಅಧ್ಯಕ್ಷ ರುದ್ರಗೌಡ ಭೇಟಿ ನೀಡಿ ಪರಿಶೀಲಿಸಿದರು.
ಮುಂಗಾರು ಹಂಗಾಮು ಆರಂಭಗೊಂಡಿದ್ದು, ರೈತರಿಗೆ ಬೀಜ, ಗೊಬ್ಬರ ಸಂಗ್ರಹ ಕುರಿತು ಕೇಂದ್ರದ ಅಧಿಕಾರಿಗಳಿಗೆ ಅಧ್ಯಕ್ಷರು ಪ್ರಶ್ನಿಸಿದಾಗ ಇಲಾಖೆಯಿಂದ ಸರಬರಾಜಾಗಿರುವ ಬೀಜ, ಗೊಬ್ಬರ, ಕ್ರಿಮಿ, ಕೀಟನಾಶಕದ ಕುರಿತು ಕೇಂದ್ರದ ಸಹಾಯಕ ಅಧಿಕಾರಿ ರಾಮಚಂದ್ರ ನಾಯ್ಕ ಮಾಹಿತಿ ನೀಡಿದರು. ಮುಂಗಾರು ಹಂಗಾಮಿಗೆ ಒಟ್ಟು 18326 ಹೆಕ್ಟರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ 98 ಹೆಕ್ಟರ್ ಸಜ್ಜೆ, 46 ಹೆಕ್ಟರ್ ಸೂರ್ಯಕಾಂತಿ, 56 ಹೆಕ್ಟರ್ ಹತ್ತಿ ಬಿತ್ತನೆ ಮಾಡಲಾಗಿದೆ ಎಂದು ಅವರು ವಿವರಿಸಿದರು. ಕೇಂದ್ರದಲ್ಲಿ 5228 ಕೆ.ಜಿ ಸಜ್ಜೆ ಬೀಜ, 1160 ಕೆ.ಜಿ ಸೂರ್ಯಕಾಂತಿ, 400 ಕೆ.ಜಿ ತೊಗರಿ, ಸಾವಿರ ಕೆ.ಜಿ. ಬತ್ತ, 160 ಕೆ.ಜಿ ಹೆಸರು ಬೀಜ ಹಾಗೂ ಕೀಟ, ಕ್ರಿಮಿನಾಶಕ ಔಷಧಗಳು ಸಂಗ್ರಹ ಇದೆ. ಸರ್ಕಾರ ಪ್ರತಿ ಕೆಜಿ ಸೂರ್ಯ ಕಾಂತಿ 80 ರು. ಸಜ್ಜಿಗೆ 20 ರು. ರಿಯಾಯತಿ ನೀಡಿದ್ದು, ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ವಿತರಣೆಮಾಡಲಾಗುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

