ರಾಯಚೂರು

ಗಮನ ಸೆಳೆದ ಆಂಧ್ರದ ದೈತ್ಯದೇಹಿ ಎತ್ತುಗಳು

Published On :

ಜಗನ್ನಾಥ ಆರ್. ದೇಸಾಯಿ
ರಾಯಚೂರು:
ಆಂಧ್ರದ ರಾಜಕೀಯ ಹೊಡೆದಾಟ, ಬಡಿದಾಟಕ್ಕೆ ಹೆಸರುವಾಸಿ. ಜಿದ್ದಾಜಿದ್ದಿಗೂ ಫುಲ್ ಫೇಮಸ್. ಅಂತೆಯೇ ಅಲ್ಲಿನ ರಾಜಕೀಯ ನಾಯಕರು ಪರಸ್ಪರರ ಮಧ್ಯದ ವೈಷಮ್ಯ ಸಾಧಿಸಲು ಗಜಗಾತ್ರದ ಎತ್ತುಗಳನ್ನೂ ವಿವಿಧ ಸ್ಪರ್ಧೆಗಳಲ್ಲಿ ಬಳಕೆ ಮಾಡುವುದು ರೂಢಿ. ಆಂಧ್ರದಲ್ಲಿ ರಾಜಕೀಯ ಪೈಪೋಟಿಗೆ ಬಳಕೆಯಾಗುವ ಅವೇ ಗಜಗಾತ್ರದ ಎತ್ತುಗಳು ನಗರದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಸರಾಗವಾಗಿ ಭಾರದ ಕಲ್ಲು ಎಳೆದು ನೋಡುಗರ ಗಮನ ಸೆಳೆಯುತ್ತಿವೆ.
ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಮುನ್ನೂರು ಕಾಪು ಸಮಾಜದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಭಾರೀ ಗಾತ್ರದ ಎತ್ತುಗಳನ್ನು ನೋಡುವುದೇ ಚೆಂದ. ಬುಸುಗುಡುತ್ತಾ ಟನ್‌ಗಟ್ಟಲೇ ಭಾರದ ಕಲ್ಲು ಎಳೆಯುವ ಇಂಥ ಎತ್ತುಗಳ ಶಕ್ತಿ ಅಗಾಧ. ಹಾಗಾಗಿ ಕರ್ನಾಟಕದ ರೈತರ ಪಾಲಿಗೆ ಇವುಗಳು ಆಕರ್ಷಣೆಯ ಕೇಂದ್ರವಾಗಿವೆ.
ರಾಜಕೀಯ: ಆಂಧ್ರದ ಒಂಗೋಲು ತಳಿಯ ಈ ಎತ್ತುಗಳ ಗಾತ್ರ ನಮ್ಮಲ್ಲಿನ ಸಾಮಾನ್ಯ ಎತ್ತುಗಳಿಗಿಂತ ಬಹುದೊಡ್ಡದು. ಮಾಂಸ ಪರ್ವತ ದಂತೆಯೇ ಕಾಣುವ ಎತ್ತುಗಳನ್ನು ಆಂಧ್ರದಲ್ಲಿ ಒಂದೂರಿನ ರಾಜಕೀಯ ನಾಯಕರು ಮತ್ತೊಂದೂರಿನ ರಾಜಕೀಯ ನಾಯಕರ ವಿರುದ್ಧ ವಿವಿಧ ಸ್ಪರ್ಧೆಗಳಲ್ಲಿ ಸೇಡು ತೀರಿಸಿಕೊಳ್ಳಲು ಬಳಕೆ ಮಾಡಿಕೊಳ್ಳಲಾಗುತ್ತದೆ.
ಭಾರದ ಕಲ್ಲು ಎಳೆಯುವ ಸ್ಪರ್ಧೆಯು ಆಂಧ್ರದಲ್ಲಿ ಜನಜನಿತ ಸ್ಪರ್ಧೆ. ಅಂಥ ಸ್ಪರ್ಧೆಗಳಲ್ಲಿ ರಾಜಕೀಯ ನಾಯಕರು ಭಾರೀ ವೆಚ್ಚದಲ್ಲಿ ಸಾಕಿ ಬೆಳೆಸಿದ ಇಂತ ಎತ್ತುಗಳನ್ನು ಬಳಸಿ ರಾಜಕೀಯ ಶತ್ರುವಿಗೆ ಸೋಲುಣಿಸುವುದು ಅಲ್ಲಿ ರೂಢಿ. ಅಂತೆಯೇ ತಮ್ಮ ಮಕ್ಕಳಂತೆಯೇ ಇಂಥ ಎತ್ತುಗಳನ್ನು ಪೋಷಿಸಲಾಗುತ್ತದೆ.
ಪಾಲನೆ ಪೋಷಣೆ: ಒಂಗೋಲು ತಳಿಯ ಎತ್ತುಗಳ ಬೆಲೆ ದುಬಾರಿ. ಒಂದು ಎತ್ತಿನ ಬೆಲೆ ಸುಮಾರು ರು. 3 ರಿಂದ 3.50ಲಕ್ಷ ಎಂದು ಹೇಳುತ್ತಾರೆ ಎತ್ತು ಸಾಕಿದವರು. ಇಂಥ ಎತ್ತುಗಳಿಗೆ ದಿನವೂ ಪ್ರತಿ ಬಾರಿ ಒಂದೂವರೆ ಕೆಜಿಯಷ್ಟು ಹುರಳಿ ಕಾಳು, ತೊಗರಿ ಕಾಳು, ಖರ್ಜೂರ ಹಣ್ಣು, ಕ್ಯಾರೆಟ್, ಹೂಕೋಸು ತಿನ್ನಿಸಲಾಗುತ್ತದೆ(ಇವುಗಳು ನೆಲದ ಮೇಲೆ ಸುರಿದರೆ ತಿನ್ನುವುದಿಲ್ಲ, ತಿನ್ನಿಸಲೇಬೇಕು). ಜತೆಗೆ ಹಾಲು, ಕ್ಯಾಲ್ಸಿಯಂ ಟಾನಿಕ್ ಕುಡಿಸಲಾಗುತ್ತದೆ ಎಂದು ಎತ್ತುಗಳನ್ನು ನೋಡಿಕೊಳ್ಳುವ ರೈತ ವೆಂಕಟೇಶ ರೆಡ್ಡಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಸ್ಪರ್ಧೆಗೆ ಮಾತ್ರ ಬಳಕೆ: ಆಂಧ್ರದಲ್ಲಿ ಇಂಥ ಎತ್ತುಗಳನ್ನು ಹೊಲದಲ್ಲಿ ಕೃಷಿ ಕಾರ್ಯಗಳಿಗೆ ಬಳಕೆ ಮಾಡುವುದಿಲ್ಲ. ಇದು ಹೊಲದಲ್ಲಿ ದುಡಿಯುವುದೂ ಇಲ್ಲ. ಹಾಗಾಗಿ ಏನಿದ್ದರೂ ರಾಜಕೀಯ ಜಿದ್ದು ಸಾಧಿಸಲು ಶತ್ರುವಿನ ಎತ್ತುಗಳ ಎದುರು ಭರ್ಜರಿ ಪ್ರದರ್ಶನ ನೀಡಲೋಸುಗವೇ ಬಳಕೆ ಮಾಡಲಾಗುತ್ತದೆ. ಸ್ಪರ್ಧೆಯಿಲ್ಲದ ದಿನಗಳಲ್ಲಿ ಇಂಥ ಎತ್ತುಗಳಿಗೆ ತಿನ್ನುವುದೊಂದೇ ಕೆಲಸ.
ಜಿದ್ದಾಜಿದ್ದಿ: ಆಂಧ್ರದಲ್ಲಿ ನಡೆಯುವ ಎತ್ತುಗಳ ಓಟ, ಭಾರದ ಕಲ್ಲು ಎಳೆಯುವ ಸ್ಪರ್ಧೆಗಳಲ್ಲಿ ಲಕ್ಷಾಂತರ ರು. ಹೂಡಲಾಗುತ್ತದೆ. ಹಾಗಾಗಿ ಎತ್ತುಗಳ ಮಾಲಿಕರಿಗೆ ಪ್ರತಿ ವರ್ಷವೂ ಲಕ್ಷ ಲಕ್ಷ ರು. ಆದಾಯ ದೊರೆಯುತ್ತದೆ. ಪರಿಣಾಮ ಅವುಗಳನ್ನು ಅವರು ಒಂದೆಡೆ ರಾಜಕೀಯ ಪ್ರತಿಷ್ಠೆ, ಜಿದ್ದಾಜಿದ್ದಿಗಾಗಿಯೇ ಸಾಕಿ ಸಲುಹುತ್ತಾರೆ.
ಗಜಗಾತ್ರದ ಇಂಥ ಒಂದು ಎತ್ತು ನೋಡಿಕೊಳ್ಳಲು ಕನಿಷ್ಟ ಎಂದರೂ ಐದರಿಂದ 8 ಜನ ಕೆಲಸಗಾರರು ಬೇಕಾಗುತ್ತದೆ. ಎಲ್ಲಿಯೇ ಸ್ಪರ್ಧೆಗೆ ತೆರಳಿದರೂ ಅಷ್ಟೇ ಸಂಖ್ಯೆಯ ಜನ ಆ ಎತ್ತುಗಳನ್ನು ಸ್ಪರ್ಧೆಯ ಸ್ಥಳಕ್ಕೆ ಲಾರಿಯಲ್ಲಿ ಕೊಂಡೊಯ್ಯುತ್ತಾರೆ. ಲಾರಿಯಲ್ಲಿ ಮರಳಿ ಕರೆತರುತ್ತಾರೆ. ಸ್ಪರ್ಧೆ ದಿನ ಬಿಟ್ಟು ಉಳಿದ ಸಮಯದಲ್ಲಿ ಈ ಎತ್ತುಗಳಿಗೆ ರಾಜವೈಭೋಗದ ಆರೈಕೆ ನೀಡಲಾಗುತ್ತದೆ.
ಇಂಥ ಎತ್ತುಗಳು ಸಾಂಸ್ಕೃತಿಕ ಹಬ್ಬದಲ್ಲಿ ಜನಾಕರ್ಷಣೆ ಕೇಂದ್ರಗಳಾಗಿವೆ. ಸ್ಥಳೀಯ ರೈತರು ಎತ್ತುಗಳ ಪಾಲನೆ ಕುರಿತು ಆಂಧ್ರದ ರೈತರಿಂದ ಮಾಹಿತಿ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.