ರಾಯಚೂರು

ಪ್ರತ್ಯೇಕ ಸಚಿವಾಲಯಕ್ಕಾಗಿ ವಿಕಲಚೇತನರ ಪ್ರತಿಭಟನೆ

Published On :

ರಾಯಚೂರು: ರಾಜ್ಯದಲ್ಲಿ ವಿಕಲಚೇತನರಿಗೆ ಪ್ರತ್ಯೇಕ ಸಚಿವಾಲಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೇರಿ ಎದುರು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಹೋರಾಟಗಾರರು, ರಾಜ್ಯದಲ್ಲಿ ವಿಕಲಚೇತನರಿಗೆ ಮೀಸಲಾದ ಹಕ್ಕುಗಳ ಸಮರ್ಪಕ ಜಾರಿಯಾಗುತ್ತಿಲ್ಲ. 1995ರ ಕಾಯಿದೆಯಡಿ ವಿಕಲಚೇತನರ ಹಕ್ಕುಗಳ ಪಾಲನೆಯಾಗುತ್ತಿಲ್ಲ. ಕಾಯಿದೆ ಜಾರಿಯಾಗಿ 17 ವರ್ಷಗಳೇ ಕಳೆದರೂ ಅದರ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ದೂರಿದರು.
ಕಾಯಿದೆ ಪಾಲನೆ ನಿಟ್ಟಿನಲ್ಲಿ ಅನೇಕ ಸಂದರ್ಭದಲ್ಲಿ ಒಕ್ಕೂಟದಿಂದ ಸಭೆಗಳಲ್ಲಿ ಒತ್ತಾಯಿಸಿದರೂ ಅಧಿಕಾರಿಗಳು ಅದರ ಜಾರಿಗೆ ಮುಂದಾಗುತ್ತಿಲ್ಲ. ಇದೇ ವಿಷಯದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಅವರೂ ನಿರ್ಲಕ್ಷ್ಯ ತಾಳಿದ್ದಾರೆಂದು ದೂರಿದರು.
ಕಾರಣ ಕೂಡಲೇ ರಾಜ್ಯದಲ್ಲಿ ವಿಕಲಚೇತನರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಜಿಲ್ಲೆಯಲ್ಲಿ ವಿಕಲಚೇತನರ ಕಲ್ಯಾಣಾಧಿಕಾರಿಗಳ ಹುದ್ದೆ ಖಾಲಿಯಿದ್ದು, ಶೀಘ್ರ ಭರ್ತಿ ಮಾಡಬೇಕು. ಹೈ.ಕ. ಅಭಿವೃದ್ಧಿ ಸಮಿತಿಯಲ್ಲಿ ಜಿಲ್ಲೆಗೊಬ್ಬ ವಿಕಲಚೇತನ ಪ್ರತಿನಿಧಿಯನ್ನು ಸೇರ್ಪಡೆಗೊಳಿಸಬೇಕು. ರಾಜ್ಯಾದ್ಯಂತ ಸಂಚರಿಸಲು ವಿಕಲಚೇತನರಿಗೆ ಉಚಿತ ಬಸ್‌ಪಾಸ್ ನೀಡಬೇಕು. ಭಾಗ್ಯಲಕ್ಷ್ಮೀ ಯೋಜನೆಯಂತೆ ವಿಕಲಭಾಗ್ಯ ಯೋಜನೆ ಜಾರಿಗೆ ತಂದು ವಿಕಲಚೇತನರ ಸಮಗ್ರ ಪ್ರಗತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅನುಷ್ಠಾನಕ್ಕೆ ಸಮಿತಿ ರಚಿಸಿ: ಬಜೆಟ್‌ನಲ್ಲಿ ವಿಕಲಚೇತನರಿಗೆ ಪ್ರತ್ಯೇಕ ಅನುದಾನ ಒದಗಿಸಬೇಕು. ಕಲ್ಯಾಣ ಇಲಾಖೆ ಸ್ಥಾಪಿಸಬೇಕು. ಶೇ.3ರ ಅನುದಾನದ ಸಮರ್ಪಕ ಬಳಕೆಗೆ ಕ್ರಿಯಾ ಯೋಜನೆ ರೂಪಿಸಬೇಕು. ಅನುಷ್ಠಾನಕ್ಕೆ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ವಿಕಲಚೇತನರಿಗೆ ಶಿಬಿರ ನಡೆಸಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮೂಲಕ ಗರಿಷ್ಠ ಮಾಸಾಶನ ಜಾರಿಗೆ ತರಬೇಕು. ಶಾಸಕರು, ಸಂಸದರ ಅನುದಾನದಲ್ಲಿ ಶೇ.3ರ ಅನುದಾನದ ಮೀಸಲನ್ನು ಶೇ.5ಕ್ಕೇರಿಸಬೇಕು ಎಂದು ಒತ್ತಾಯಿಸಿದರು.
ಶಿವುಗೇನಿ ಅತ್ತನೂರು, ವೀರೇಶ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಅನೇಕ ವಿಕಲಚೇತನರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.