ರಾಯಚೂರು

ಹೈ-ಕ ಗೆ ಶೇ.8 ಮೀಸಲು ತಡೆಯಾಜ್ಞೆ ತೆರವಿಗೆ ಕ್ರಮ

Published On :

ವಿಧಾನ ಪರಿಷತ್: ಭಾರತೀಯ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಆಧಾರದಡಿ ಹೈದ್ರಾಬಾದ್-ಕರ್ನಾಟಕ ಜನತೆಗೆ ಶೇ.8ರಷ್ಟು ಮೀಸಲು ನೀಡುತ್ತಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ ಹಾಗೂ ಕರ್ನಾಟಕ ನ್ಯಾಯಮಂಡಳಿ(ಕೆಎಟಿ) ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಭಾನಾಯಕ ಎಸ್.ಆರ್. ಪಾಟೀಲ್ ತಿಳಿಸಿದ್ದಾರೆ.
ರಾಜ್ಯಮಟ್ಟದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಹೈ-ಕ ಭಾಗದ ಅಧಿಕಾರಿಗಳು ಜೇಷ್ಠತೆಯಲ್ಲಿ ಕಿರಿಯರಾಗಿದ್ದರೂ ಮುಂಬಡ್ತಿ ನೀಡಿರುವುದನ್ನು ಪ್ರಶ್ನಿಸಿ ಬಸವರಾಜು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧ ನ್ಯಾಯಾಲಯ 4 ವಾರಗಳ ಕಾಲ ತಡೆಯಾಜ್ಞೆ ನೀಡಿದೆ. ಸರ್ಕಾರದ ಗಮನಕ್ಕೆ ಬಂದಿದ್ದು, ಈ ಸಂಬಂಧ ಈಗಾಗಲೇ ಅಡ್ವೊಕೇಟ್ ಜನರಲ್, ಕಾನೂನು ತಜ್ಞರು, ಹಿರಿಯ ವಕೀಲರ ಜತೆ ಚರ್ಚೆ ನಡೆಸಲಾಗಿದೆ. ಈ ಮೂಲಕ ಜನರ ಆಶೋತ್ತರ ಈಡೇರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಅವರು, ಹೈ-ಕ ಭಾಗದ 371(ಜೆ) ಅನುಷ್ಠಾನಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಹೈ-ಕ ಭಾಗದ 6 ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಬೇಕು.
ತಡೆಯಾಜ್ಞೆ ಬಂದು 3 ವಾರ ಕಳೆದಿದ್ದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಈ ಭಾಗದ ಜನರ ಮೇಲೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂದು ಆರೋಪಿಸಿದಅವರು, ಶೇ.8ರಷ್ಟು ಮೀಸಲು ವಿಷಯ ಬಗೆಹರಿಸುವವರೆಗೂ ಯಾವುದೇ ನೇಮಕ, ಮುಂಬಡ್ತಿ ನೀಡಬಾರದು. ಈಗ ನೀಡಿರುವ ಮುಂಬಡ್ತಿ ತಡೆಹಿಡಿಯಬೇಕು ಎಂದು ಒತ್ತಾಯಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮೀಸಲು ಎಷ್ಟು?: ರಾಜ್ಯ ಸರ್ಕಾರದ ಗ್ರೂಪ್ 'ಎ' ವರ್ಗದ ಅಧಿಕಾರಿಗಳಿಗೆ ಶೇ.75, 'ಬಿ' ಗ್ರೂಪ್ ಅಧಿಕಾರಿಗಳಿಗೆ ಶೇ.75, 'ಸಿ' ಗ್ರೂಪ್‌ನವರಿಗೆ ಶೇ.80 ಹಾಗೂ 'ಡಿ' ಗ್ರೂಪ್ ನೌಕರರಿಗೆ ಶೇ.85 ರಷ್ಟು ಹೈ-ಕ ಭಾಗದಲ್ಲಿ ಮೀಸಲಾತಿ ನೀಡಲಾಗುತ್ತದೆ. ಆದರೆ ಸರ್ಕಾರಿ ಕಾರ್ಯದರ್ಶಿ ಮಟ್ಟದ ಹುದ್ದೆಗಳಲ್ಲಿ ಶೇ.8ರಷ್ಟು ಮೀಸಲಾತಿಯನ್ನು ಸರ್ಕಾರ ನಿಗದಿ ಮಾಡಲಿದೆ ಎಂದು ಎಸ್.ಆರ್. ಪಾಟೀಲ್ ಇದೇ ವೇಳೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.