ರೈತರ ಸಮಸ್ಯೆ ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ ನಾಳೆ
ಲಿಂಗಸ್ಗೂರು: ಜಿಲ್ಲೆಯ ರೈತರ ಸಮಸ್ಯೆ ಪರಿಹಾರ ಹಾಗೂ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂ. 30ರಂದು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಗುವುದೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಹೇಳಿದರು. ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಟ್ನಾಳ್ ಕ್ರಾಸ್ ಬಳಿ ರೈತ ಸಂಘದಿಂದ ನಾಲ್ಕು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಸಂದರ್ಭದಲ್ಲಿ ಜೂ.26ರಂದು ಬೆಂಗಳೂರಿಗೆ ಮಾತುಕತೆಗೆ ಬರುವಂತೆ ಮುಖ್ಯಮಂತ್ರಿಗಳು ಹೇಳಿದ್ದರು. ಅಂದು ರಾಜಧಾನಿಗೆ ತೆರಳಿದಾಗ ಸಭೆ ನಡೆಸದೆ ಜೂ. 27ಕ್ಕೆ ಮುಂದೂಡಲಾಯಿತು. ಅಂದೂ ಮಾತುಕತೆಗೆ ಬಾರದೆ ರೈತರಿಗೆ ದಿಕ್ಕು ತಪ್ಪಿಸುವಲ್ಲಿ ತೊಡಗಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು. ಅಕಾಲಿಕ ಆಲಿಕಲ್ಲು ಮಳೆಯಿಂದ ರೈತರು ಹಾನಿಗೀಡಾಗಿದ್ದು, ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ತಾಲೂಕಿನಲ್ಲಿ 10 ಸಾವಿರ ಪಂಪ್ಸೆಟ್ಗಳಿದ್ದು, ಗ್ರಾಮೀಣ ಭಾಗದಲ್ಲಿ 6 ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆಯಾದರೂ ಅದರಲ್ಲೂ 3 ತಾಸು ಕಡಿತ ಮಾಡಲಾಗುತ್ತಿದೆ. ಬಗರ್ಹುಕುಂ ಸಾಗುವಳಿದಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವಲ್ಲಿ ತೊಡಗಿದ್ದಾರೆ. ತುಂಗಭದ್ರಾ ಜಲಾಶಯದ ಹೂಳು ತೆಗೆಯುವುದು ಹಾಗೂ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ಮತ್ತು ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜೂ. 30ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಅವರು ತಿಳಿಸಿದರು. ಈ ವೇಳೆ ರೈತ ಸಂಘದ ತಾಲೂಕ ಅಧ್ಯಕ್ಷ ಸಿದ್ದೇಶ ಗೌಡೂರು, ಅಮರಯ್ಯ ಸ್ವಾಮಿ ಹುಲಿಗುಡ್ಡ ಇದ್ದರು.
ಖಾಸಗಿ ಬಸ್ ಬೆಂಕಿಗಾಹುತಿ
ಸಿಂಧನೂರು: ಸಿಂಧನೂರಿನಿಂದ ಸಿರಗುಪ್ಪಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿರುವ ಘಟನೆ ಶನಿವಾರ ಬೆಳಗಿನ ಜಾವ ಸುಮಾರು 4 ಗಂಟೆ ಸಮಯದಲ್ಲಿ ನಡೆದಿದೆ. ಗುಲ್ಬರ್ಗದ ರಿಯಾಜ್ ಪಟೇಲ್ ಎನ್ನುವವರಿಗೆ ಸೇರಿದ ಖಾಸಗಿ ಬಸ್ ಗುಲ್ಬರ್ಗದಿಂದ ಬೆಂಗಳೂರಿಗೆ ದುರಸ್ತಿಗೆಂದು ತೆರಳುತ್ತಿದ್ದಾಗ ಸಿಂಧನೂರು ದಾಟಿದ ಬಳಿಕ ಬರುವ ವೆಂಕಟೇಶ್ವರ ಕ್ಯಾಂಪ್ ಹತ್ತಿರ ಬ್ಯಾಟರಿ ಸುಟ್ಟು ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮೌಲಾಲಿ ಅಪಾಯದಿಂದ ತಪ್ಪಿಸಿಕೊಂಡಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಎಸ್.ಎಂ. ಪಾಟೀಲ ತನಿಖೆ ಕೈಗೊಂಡಿದ್ದಾರೆ.
ರಂಗಾಸಕ್ತರ ಸಭೆ ಇಂದು
ಸಿಂಧನೂರು: ನಗರದ ನಟರಾಜ ಕಾಲೋನಿಯಲ್ಲಿರುವ ರಾಜೇಂದ್ರಕುಮಾರ ಪ್ರೌಢಶಾಲೆಯಲ್ಲಿ ರಂಗಾಸಕ್ತರ ಸಭೆಯನ್ನು ಜೂ.29ರಂದು ಬೆ.11 ಗಂಟೆಗೆ ಸಭೆ ಕರೆಯಲಾಗಿದೆ ಎಂದು ಕಸಾಪ ಜಿಲ್ಲಾ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ತಿಳಿಸಿದ್ದಾರೆ. 2011ರಿಂದ ಪ್ರಾರಂಭಗೊಂಡ ರಂಗಮಂದಿರ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈ ಕುರಿತು ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ವಿಚಾರಿಸಿದಾಗ ಇಂದು ನಾಳೆ ಎಂದು ಕಾಲಕಳೆಯುತ್ತಿದ್ದಾರೆ. ಹೀಗಾಗಿ ಇದಕ್ಕೆ ಹೋರಾಟ ಹೊರತಾಗಿ ಅನ್ಯ ಮಾರ್ಗವಿಲ್ಲ. ಆದ್ದರಿಂದ ಸಭೆಗೆ ರಂಗಾಸಕ್ತರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ವಿನಂತಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

