ರಾಯಚೂರು

ಲೋಕ ಅದಾಲತ್; ಕೋರ್ಟ್ ಮೇಲಿನ ಹೊರೆ ಕ್ಷೀಣಿಸಿದೆ

Published On :

ರಾಯಚೂರು: ಬೃಹತ್ ಲೋಕ ಅದಾಲತ್ ಆಯೋಜನೆಯಿಂದ ವ್ಯಾಜ್ಯ ಪೂರ್ವ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡು ನ್ಯಾಯಾಲಯಗಳ ಮೇಲೆ ಪ್ರಕರಣಗಳ ಹೊರೆ ತಗ್ಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ತಿಳಿಸಿದರು.
ನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮತ್ತಿತರೆ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದರು. ನ್ಯಾಯಾಂಗ ಇಲಾಖೆಯು ಸಮಾಜದಲ್ಲಿನ ಎಲ್ಲರಿಗೂ ಸಮಾನವಾಗಿ ನ್ಯಾಯ ಹಂಚಿಕೆಯಾಗುವಂತೆ ಕಾಳಜಿ ವಹಿಸುತ್ತದೆ. ಈ ನಿಟ್ಟಿನಲ್ಲಿ ಸಾಲಗಾರರೊಂದಿಗೆ ರಾಜಿ ಸಂಧಾನ ಮೂಲಕ ಸಮಸ್ಯೆ ಪರಿಹರಿಸಲಾಗುತ್ತದೆ. ಲೋಕ ಅದಾಲತ್ ಮೂಲಕ ಭಾರಿ ಪ್ರಮಾಣದಲ್ಲಿ ವ್ಯಾಜ್ಯಗಳು ಪರಿಹಾರ ಕಾಣುತ್ತಿವೆ ಎಂದು ಹೇಳಿದರು.
ನಿರ್ಣಯಗಳು ಸೂಕ್ತ: ಸಾರ್ವಜನಿಕರೂ ಸಹ ಲೋಕ ಅದಾಲತ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವ್ಯಾಜ್ಯ ಪೂರ್ವ ಪರಿಹಾರ ಕಂಡು ಕೊಳ್ಳಬೇಕು. ಲೋಕ ಅದಾಲತ್‌ನಲ್ಲಿ ಕೈಗೊಳ್ಳುವ ನಿರ್ಣಯಗಳು ಹೆಚ್ಚು ಸೂಕ್ತವಾಗಿರುತ್ತವೆ. ಅನುಕೂಲಕರವೂ ಹೌದು ಎಂದ ಅವರು, ಅದಾಲತ್‌ಗಳ ಆಯೋಜನೆ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸದ್ಯ ಆಯೋಜಿಸಿರುವ ಲೋಕ ಅದಾಲತ್‌ನಲ್ಲಿ ಒಟ್ಟು 8 ಪೀಠಗಳನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿಯೊಂದು ಪೀಠದಲ್ಲಿ ಒಬ್ಬರು ನ್ಯಾಯಾಧೀಶರು, ಒಬ್ಬ ವಕೀಲರು ಇರಲಿದ್ದು, ಸಾಲಗಾರರು ಮತ್ತು ಬ್ಯಾಂಕಿನ ಅಧಿಕಾರಿಗಳ ಮಧ್ಯೆ ಸಂಧಾನಕ್ಕೆ ಶ್ರಮಿಸಲಿದ್ದಾರೆಂದರು. ಇತ್ತೀಚಿನ ದಿನಗಳಲ್ಲಿ ಕೇವಲ ಸಿವಿಲ್ ಕೇಸುಗಳಲ್ಲದೇ ಕ್ರಿಮಿನಲ್ ಪ್ರಕರಣಗಳನ್ನೂ ಲೋಕ ಅದಾಲತ್‌ಗಳಲ್ಲಿ ರಾಜಿ ಸಂಧಾನಕ್ಕೆ ಪರಿಗಣಿಸಲಾಗುತ್ತಿದೆ. ಪತಿ ಪತ್ನಿಯರ ಮಧ್ಯದ ಭಿನ್ನಾಭಿಪ್ರಾಯಗಳಿಂದ ದಾಖಲಾಗುವ ಪ್ರಕರಣಗಳಿಗೂ ಮುನ್ನ ನ್ಯಾಯಾಲಯವೇ ಸಂಧಾನಕ್ಕೆ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.  ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಎಂ.ಜಿ. ಭಟ್ ಮಾತನಾಡಿದರು. ನ್ಯಾಯಮೂರ್ತಿ ಪಚ್ಚಾಪುರ, ಅಶೋಕ ನಿಜಗಣ್ಣವರ್, ಪಿ.ಜಿ.ಎಂ. ಪಾಟೀಲ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.