ರಾಯಚೂರು

ಕಸ ವಿಲೇವಾರಿ ಲಭ್ಯ ಸೌಲಭ್ಯದ ಕಾಳಜಿ ಏಕಿಲ್ಲ?

Published On :

-ಮೊಯಿನುದ್ದೀನ್ ಕಾಟಮಳ್ಳಿ
ದೇವದುರ್ಗ: ಪುರಸಭೆಗೆ ಕಸದ ವಿಲೇವಾರಿ ಆಸಕ್ತಿಯಿಲ್ಲ. ಸಿಬ್ಬಂದಿಯ ನಿರಂತರ ಕೊರತೆ. ರಾಜಕೀಯದ ಒತ್ತಡಕ್ಕೆ ಪದೇ ಪದೇ ವರ್ಗಾವಣೆಗೊಳ್ಳುವ ಪುರಸಭೆ ಮುಖ್ಯಾಧಿಕಾರಿಗಳು. ಅನೇಕ ತಿಂಗಳು ಖಾಲಿ ಬೀಳುವ ಪ್ರಮುಖ ಹುದ್ದೆಗಳು. ಪರಿಣಾಮ ತ್ಯಾಜ್ಯದ ವಿಲೇವಾರಿ ಮರೀಚಿಕೆ.
- ದೇವದುರ್ಗ ಪಟ್ಟದಲ್ಲಿನ ಸದ್ಯದ ಸ್ಥಿತಿಯಿದು.
ರಾಯಚೂರು ನಗರಸಭೆಯಂತೆಯೇ ಇಲ್ಲಿನ ಪುರಸಭೆ ಯಾವಾಗಲೂ ಚಟುವಟಿಕೆಯ ತಾಣ. ಆದರೆ ಅದು ರಾಜಕೀಯಕ್ಕೆ ಸೀಮಿತ. ಪಟ್ಟಣದ ಜನತೆ ಸ್ವಚ್ಛತೆ ಬಯಸಿದರೂ ಪುರಸಭೆಯದ್ದು ನಿರಂತರ ನಿರ್ಲಕ್ಷ್ಯದ ಸ್ವಭಾವ. ಹಾಗಾಗಿ ಸ್ವಚ್ಛತೆಗೆ ಪ್ರಾಮುಖ್ಯತೆಯಿಲ್ಲ. ಜನರಲ್ಲಿನ ಜಾಗೃತಿಯ ಕೊರತೆಯೂ ಪುರಸಭೆಯ ನಿರ್ಲಕ್ಷ್ಯಕ್ಕೆ ದಾರಿ ಮಾಡಿದೆ.
ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡುಗಳಿದ್ದು, ಸಮೀಪದ ಗ್ರಾಮೀಣ ಪ್ರದೇಶದ ಕೆಲ ದೊಡ್ಡಿಗಳೂ ಪುರಸಭೆ ವ್ಯಾಪ್ತಿಯಲ್ಲಿವೆ. ಆದರೆ ಪಟ್ಟಣ ಸೇರಿದಂತೆ ದೊಡ್ಡಿಗಳಿಂದ ಕಸದ ವಿಲೇವಾರಿಗೆ ಪುರಸಭೆ ಅಧಿಕಾರಿಗಳ ಆಸಕ್ತಿ ಅಷ್ಟಕ್ಕಷ್ಟೇ. ಜನತೆಗೆ ಅನಾರೋಗ್ಯಕರ ಪರಿಸರದಲ್ಲಿಯೇ ವಾಸವಾಗಿರುವಂತೆ ಮಾಡಿದೆ.

ಸಿಕ್ಕಲ್ಲಿ ಕಸ ವಿಲೇವಾರಿ
ಪಟ್ಟಣದ ಹೊರವಲಯದಲ್ಲಿ ಪುರಸಭೆಯಿಂದ 5 ಎಕರೆ ಭೂಮಿ ಖರೀದಿಸಿದ್ದು ದಿನವೂ ಸಂಗ್ರಹಿಸುವ ತ್ಯಾಜ್ಯ ಅಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ಪುರಸಭೆ ಹೇಳಿದೆ. ಆದರೆ ವಾಸ್ತವದಲ್ಲಿ ಪುರಸಭೆ ಸಿಬ್ಬಂದಿ ಆ ಸ್ಥಳದಲ್ಲಿ ಕಸವನ್ನು ವಿಲೇವಾರಿ ಮಾಡದೇ ಪಟ್ಟಣದ ಸುತ್ತಲಿನ ರಸ್ತೆಯ ಬದಿಯ ಗುಂಡಿಗಳಲ್ಲಿ ಕಸ ತಂದು ಸುರಿಯುತ್ತಿರುವುದು ಕಂಡುಬಂದಿದೆ.

ಕಸ ತೊಟ್ಟಿಗಳಿಲ್ಲ
ಪಟ್ಟಣದ ಜನರು ಮನೆಯಿಂದ ಕಸ ತಂದು ಹೊರಗೆ ಸುರಿಯಲು ತೊಟ್ಟಿಗಳ ಕೊರತೆಯಿದೆ. ಹಾಗಾಗಿ ಅನಿವಾರ್ಯವಾಗಿ ರಸ್ತೆ ಪಕ್ಕ ಇಲ್ಲವೇ ಚರಂಡಿಯಲ್ಲಿಯೂ ಸುರಿಯುತ್ತಾರೆ. ಅಲ್ಲಿಗೆ ಅಲ್ಪ ಮಳೆಯಾದರೂ ಗಲ್ಲಿಗಳಲ್ಲಿನ ಚರಂಡಿ ನೀರು ರಸ್ತೆಗೆ ನುಗ್ಗಿ ಸಂಚಾರ ತೊಂದರೆದಾಯಕವಾಗುತ್ತದೆ. ಕಸ ಹಾಕಲುಸೂಕ್ತ ಸ್ಥಳಗಳನ್ನು ಗುರುತಿಸದಿರುವುದು ಹಾಗೂ ಜನ ಜಾಗೃತಿಯ ಕೊರತೆಯಿಂದಾಗಿ ಕಸ ಚರಂಡಿಗಳನ್ನು ಸೇರುವಂತೆ ಮಾಡಿದೆ. ಪರಿಣಾಮ ಚರಂಡಿಗಳೂ ಸ್ವಚ್ಛತೆ ಕಾಣದೇ ಕಲುಷಿತ ಪರಿಸರ ಬಹುತೇಕ ಕಡೆ ಸಾಮಾನ್ಯ ಸಂಗತಿಯಾಗಿದೆ.

ಸಿಬ್ಬಂದಿಯಿಲ್ಲ, ವೇತನವೂ ಬಾಕಿ
ಪಟ್ಟಣದಲ್ಲಿ ದಿನವೂ ಉತ್ಪಾದನೆಯಾಗುವ ಕಸದ ವಿಲೇವಾರಿಗೆ ಪುರಸಭೆಯಲ್ಲಿ ಅಗತ್ಯ ಸಿಬ್ಬಂದಿಯಿಲ್ಲ. ಸದ್ಯ 60 ನೌಕರರಿದ್ದು, 23 ವಾರ್ಡುಗಳಲ್ಲಿ ಸ್ವಚ್ಛತೆ ಕೈಗೊಳ್ಳಲು ಪ್ರಯಾಸಪಡುತ್ತಿದ್ದಾರೆ. ಕಸ ಸಂಗ್ರಹ ಮತ್ತು ತೆರವಿಗೆ ಬಳಸಲು ಮೂರೇ ಟ್ರ್ಯಾಕ್ಟರ್‌ಗಳಿದ್ದು, ಅವುಗಳಿಂದಲೇ ಪಟ್ಟಣದ ಎಲ್ಲೆಡೆ ಕಸ ತೆರವು ಕಾರ್ಯ ನಡೆಯುತ್ತಿದೆ. ಪುರಸಭೆಗೆ ಆದಾಯದ ಕೊರತೆ ಇರುವುದರಿಂದ ವಾಹನಗಳಿಗೆ ಇಂಧನ ತುಂಬಿಸುವುದು ಕಷ್ಟವಾಗಿದೆ. ಹಾಗಾಗಿ ಆಗೊಮ್ಮೆ ಈಗೊಮ್ಮೆ ಕಸದ ವಿಲೇವಾರಿ ನಡೆಯುತ್ತಿದೆ. ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇವಲ 60 ಜನ ಸಿಬ್ಬಂದಿಗೂ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ ಎಂಬ ಆರೋಪವಿದೆ.

ಖಾಲಿ ಹುದ್ದೆಗಳ ಸಾಲು
ಪುರಸಭೆಯಲ್ಲಿ ಹಿರಿಯ ನೈರ್ಮಲ್ಯ ನಿರೀಕ್ಷಕರ ಹುದ್ದೆ ಹಾಗೂ ಎರಡು ಸಹಾಯಕ ನೈರ್ಮಲ್ಯ ನಿರೀಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಈ ಮೂರೂ ಖಾಲಿಯಿವೆ. ಅಲ್ಲದೇ ಇರುವ ಒಂದು ಪರಿಸರ ಅಭಿಯಂತರರ ಹುದ್ದೆ ಕೂಡಾ ಖಾಲಿಯಿದೆ.

ಬಳಕೆಯಿಲ್ಲ
ಸರ್ಕಾರವು ಪುರಸಭೆ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಕಸ ಸಂಗ್ರಹಣೆಗೆ ಅನುಕೂಲವಾಗುವಂತೆ ತಳ್ಳುಬಂಡಿ, ಕಸ ಸಂಗ್ರಹಣೆ ಡಬ್ಬಿ ಒದಗಿಸಿದ್ದು ಅವುಗಳ ಬಳಕೆ ಮಾತ್ರ ತೀರಾ ಕಡಿಮೆ. ಪುರಸಭೆಯಲ್ಲಿ ಸಿಬ್ಬಂದಿಯ ಕೊರತೆಯೂ ಇದಕ್ಕೆ ಕಾರಣವೆನ್ನಬಹುದು. ಪುರಸಭೆಗೆ ಪಟ್ಟಣದಲ್ಲಿ ಕಸವನ್ನು ಸಂಗ್ರಹಿಸಲು 50 ತಳ್ಳು ಗಾಡಿಗಳು ಹಾಗೂ 2 ಸಾವಿರ ಪ್ಲಾಸ್ಟಿಕ್ ಡಬ್ಬಿ ನೀಡಲಾಗಿದೆ. ಆದರೆ ತಳ್ಳು ಗಾಡಿ ಮತ್ತು ಡಬ್ಬಿಗಳ ಬಳಕೆಯಾಗಿದ್ದು ಜನತೆ ಕಂಡಿಲ್ಲ. ಪುರಸಭೆಯ ಮೂಲೆ ಸೇರಿವೆ ಎಂಬುದು ವ್ಯಾಪಕ ಆರೋಪ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.