ನೀರಿನ ಅಭಾವ; ಅಕ್ಕಿ ದರ ಮತ್ತಷ್ಟು ಏರಿಕೆ?
ವಿಶೇಷ ವರದಿ
ಕ.ಪ್ರ. ವಾರ್ತೆ ರಾಯಚೂರು ಮಾ.2
ತುಂಗಭದ್ರಾ ಎಡದಂಡೆಯಿಂದ ಮಾನವಿ, ರಾಯಚೂರು ತಾಲೂಕುಗಳ ರೈತರಿಗೆ ದೊರೆಯದ ನೀರು. ಮೊದಲ ಹಂಗಾಮಿನ ಕೊನೆಗೆ ನೀರಿಲ್ಲದೇ ಪರದಾಟ. ಅದರಿಂದಾಗಿ ಎರಡನೇ ಹಂಗಾಮಿಗೆ ಬತ್ತ ನಾಟಿಗೆ ಹಿಂದೇಟು ಹಾಕಿದ ರೈತರು. ಪರಿಣಾಮ ಮಾರುಕಟ್ಟೆಯಲ್ಲಿ ಹೆಚ್ಚಾಗಲಿದೆ ಅಕ್ಕಿಯ ದರ.
ತುಂಗಭದ್ರಾ ಎಡದಂಡೆ ಕಾಲುವೆಯಡಿ ಜಿಲ್ಲೆಯ ರೈತರು ನೀರಿಲ್ಲದ್ದರಿಂದ ಕೈಗೊಂಡ ನಿರ್ಧಾರವೀಗ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಏರಿಕೆಗೆ ದಾರಿಯಾಗುವ ಎಲ್ಲ ಸಾಧ್ಯತೆಯಿದೆ. ಕಳೆದ ವರ್ಷದ ಮುಂಗಾರು ಹಂಗಾಮಿ ನಂತರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ದರ ಗಣನೀಯವಾಗಿ ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ನೀರಿನ ಅಭಾವ: ತುಂಗಭದ್ರಾ ಎಡದಂಡೆ ಕಾಲುವೆಯ ವ್ಯಾಪ್ತಿಯ ಮಾನವಿ, ರಾಯಚೂರು ತಾಲೂಕುಗಳಲ್ಲಿ ಕಳೆದ ವರ್ಷಾಂತ್ಯದಿಂದ ರೈತರು ನೀರಿಲ್ಲದೇ ಪರದಾಡುವಂತಾಗಿದೆ. ಕಾಲುವೆಯಿಂದ ಮೊದಲ ಹಂಗಾಮಿಗೇ ಸಮರ್ಪಕ ನೀರು ದೊರೆಯದ್ದರಿಂದ ಹೋರಾಟ ನಡೆಸಿದ್ದಾಗಿದೆ. ಆದರೂ ನೀರು ಮಾತ್ರ ಕಾಲುವೆಯಲ್ಲಿ ಹರಿಯಲಿಲ್ಲ.
ರೈತರು ಬೆಳೆದಿದ್ದ ಹತ್ತಿ, ಮೆಣಸಿನಕಾಯಿ, ಬತ್ತಕ್ಕೆ ಕಾಲುವೆಯಿಂದ ನೀರು ದೊರೆಯದೇ ರೈತರು ನಷ್ಟದ ಭೀತಿಗೆ ಸಿಲುಕಿದ್ದು ಹಳೆಯ ವಿಚಾರ. ಹಾಗಾಗಿ ರೈತರು ಎರಡನೇ ಹಂಗಾಮಿಗೆ ಕೊಳವೆಬಾವಿ ಸೌಲಭ್ಯವಿರುವವರು ಹೊರತುಪಡಿಸಿ ಇನ್ನುಳಿದ ರೈತರು ಬತ್ತ ಬೆಳೆಯುವ ಧೈರ್ಯವನ್ನೂ ಮಾಡಿಲ್ಲ. ಅಷ್ಟೇ ಅಲ್ಲ ಕಳೆದ ಕೆಲ ವರ್ಷಗಳಿಂದ ರೈತರನ್ನು ಕಾಡುತ್ತಿರುವ ನೀರಿನ ಅಭಾವ ಬತ್ತ ಬೆಳೆಯದಂತೆ ಮಾಡಿದೆ.
ಬತ್ತದ ಉತ್ಪಾದನೆಯಲ್ಲಿ ಕುಸಿತ: ಕಾಲುವೆಯ ಮೇಲ್ಭಾಗದ ರೈತರು ನೀರಾವರಿ ಇಲಾಖೆಯ ಆದೇಶದ ಹೊರತಾಗಿಯೂ ಬೇಸಿಗೆಯಲ್ಲಿ ಬತ್ತ ಬೆಳೆಯುವುದು ಮುಂದುವರಿಸಿದ್ದಾರೆ. ಕಾಲುವೆಯಿಂದ ನೀರು ಪಡೆಯಲು ಕಾಲುವೆಗೆ ಮೋಟಾರ್ ಅಳವಡಿಸುವ ಅಕ್ರಮ ದಾರಿ ತುಳಿದಿದ್ದಾರೆ. ಈಗಾಗಲೇ ಅನೇಕರ ವಿರುದ್ಧ ಈ ಕಾರಣಕ್ಕೆ ಪೊಲೀಸರಲ್ಲಿ ದೂರುಗಳೂ ದಾಖಲಾಗಿವೆ.
ಜಿಲ್ಲೆಯ ಮಾನವಿ ಮತ್ತು ರಾಯಚೂರು ತಾಲೂಕುಗಳ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಸುಮಾರು 1 ಲಕ್ಷ ಎಕರೆ ಪ್ರದೇಶದಲ್ಲಿ ಬತ್ತ ಬೆಳೆಯಲಾಗುತ್ತದೆ. ನೀರಿನ ಅಭಾವದಿಂದ ಅನೇಕ ರೈತರು ಬತ್ತ ಬೆಳೆದಿಲ್ಲ. ಕೆಲ ರೈತರು ಬತ್ತ ನಾಟಿ ಮಾಡಿದ್ದರೂ ನೀರಿನ ಅಭಾವದಿಂದ ಇಳುವರಿ ಕುಸಿತದ ಭೀತಿ ಎದುರಿಸುತ್ತಿದ್ದಾರೆ. ಪರಿಣಾಮ ಬತ್ತದ ಉತ್ಪಾದನೆಯಲ್ಲಿ ಕುಸಿತವಾಗಲಿದೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಕಾಲುವೆಯಲ್ಲಿನ ನೀರಿನ ಕೊರತೆಯಿಂದ ರೈತರು ಬತ್ತ ಬೆಳೆಯುವುದು ಬಿಟ್ಟಿದ್ದಾರೆ. ಕೆಲವೇ ಕೆಲ ರೈತರು ನಾಟಿ ಮಾಡಿದ್ದು ಇಳುವರಿ ಕುಸಿತದ ಭೀತಿಯೂ ಇದೆ ಎಂದಿದ್ದಾರೆ.
ಅನುಮಾನ: ಅಕ್ಕಿ ಗಿರಣಿಗಳಿಗೆ ಬತ್ತ ನಿರೀಕ್ಷೆಯ ಪ್ರಮಾಣದಲ್ಲಿ ಲಭ್ಯವಾಗುವುದು ಅನುಮಾನ. ಹಾಗಾಗಿ ಅಕ್ಕಿ ಉತ್ಪಾದನೆ ಕುಸಿತ ಕಾಣಲಿದೆ. ಇದು ಅಕ್ಕಿ ದರ ಏರಿಕೆ ಕಾರಣವಾಗಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿ ದರ 5 ಸಾವಿರ ಪ್ರತಿ ಕ್ವಿಂಟಾಲ್ಗೆ ದಾಟಿದೆ. ಈ ದರ ದಿನಗಳೆದಂತೆ ಮತ್ತಷ್ಟು ಏರಿಕೆಯಾಗಲಿದೆ ಎಂಬುದು ವರ್ತಕರ ಅಭಿಪ್ರಾಯ.
ಆತಂಕ: ಮಧ್ಯೆ ಅಕ್ಕಿ ಗಿರಣಿಗಳ ಮಾಲೀಕರು ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ತಮಗೆ ಬತ್ತದ ಅಲಭ್ಯತೆಯ ಬಗ್ಗೆ ಆತಂಕಗೊಂಡಿದ್ದಾರೆ. ಕೋಟ್ಯಂತರ ರು. ಬಂಡವಾಳ ಹೂಡಿ ಗಿರಣಿಗಳನ್ನು ಸ್ಥಾಪಿಸಿದ್ದು, ಅಕ್ಕಿ ಉತ್ಪಾದನೆಗೆ ಬತ್ತ ದೊರೆಯದೇ ಹೋಗುವ ಆಂತಕವಿದೆ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಅಕ್ಕಿ ಗಿರಣಿಗಳಿಗೆ ಬತ್ತದ ದೊರೆಯುವಿಕೆ ಕೊರತೆಯಾದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಮತ್ತಷ್ಟು ಏರಿಕೆಯಾಗುವುದರಲ್ಲಿ ಸಂಶಯವಿಲ್ಲ. ಕಳೆದ ಹಂಗಾಮಿನ ಅಂತ್ಯಕ್ಕೆ 4 ಸಾವಿರ ಪ್ರತಿ ಕ್ವಿಂಟಾಲ್ ಆಸುಪಾಸಿನಲ್ಲಿದ್ದ ದರವು ಈಗಲೇ 5 ಸಾವಿರವರೆಗೆ ತಲುಪಿದೆ. ಈ ದರ ಏರಿಕೆ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

