ಪರಿಸರ ನಾಶದಿಂದ ಪ್ರಕೃತಿ ವಿಕೋಪ: ಡಿಸಿ ನಾಗರಾಜು
ಕ.ಪ್ರ. ವಾರ್ತೆ ರಾಯಚೂರು ಮಾ.5
ಪರಿಸರ ನಾಶದಿಂದ ಪ್ರಕೃತಿ ವಿಕೋಪಕ್ಕೆ ದಾರಿಯಾಗುತ್ತಿದೆ. ಜೀವ ಸಂಕುಲ ರಕ್ಷಣೆ ಎಲ್ಲರ ಗುರಿಯಾಗಬೇಕು. ಮಾನವನ ದುರಾಸೆಗೆ ಪರಿಸರ ನಾಶವಾಗುತ್ತಿದ್ದು, ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಪ್ರಜ್ಞೆ ಬೆಳೆಸುವ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕರೆ ನೀಡಿದರು.
ನಗರದಲ್ಲಿ ಬುಧವಾರ ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಂಡೂರು ಪರಿಸರ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಭಾರತೀಯ ಜ್ಞಾನ- ವಿಜ್ಞಾನ ಸಮಿತಿ ವತಿಯಿಂದ ಏರ್ಪಡಿಸಿದ್ದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪರಿಸರದಲ್ಲಿನ ಏರುಪೇರು ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯೂ ಸಹ ಪರಿಸರದ ಅಸಮತೋಲನದಿಂದಾಗಿಯೇ ಸಂಭವಿಸಿದ್ದಾಗಿದೆ. ಈಚಿನ ವರ್ಷಗಳಲ್ಲಿ ಪರಿಸರ ವಿಷಯುಕ್ತಗೊಳ್ಳುತ್ತಿದ್ದು, ಅದರಿಂದಾಗಿ ಪ್ರಕೃತಿ ವಿಕೋಪ ಹೆಚ್ಚೆಚ್ಚು ಸಂಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆಯ ಪ್ರಜ್ಞೆ ಎಲ್ಲರ ಬೆಳೆಯಬೇಕಿದೆ. ಮಾನವನ ದುರಾಸೆಯಿಂದಾಗಿಯೇ ಪರಿಸರ ಹಾಳಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ನೀರು, ಆಹಾರಕ್ಕಾಗಿ ಪರದಾಡುವಂಥ ಸ್ಥಿತಿ ಎದುರಾಗುವ ದಿನಗಳು ದೂರವಿಲ್ಲ. ಈ ಬಗ್ಗೆ ಜಾಗೃತಗೊಂಡು ಪರಿಸರ ಸಂರಕ್ಷಣೆ ಕ್ರಮ ಕೈಗೊಳ್ಳುವತ್ತ ಎಲ್ಲರೂ ಮುಂದಾಗಬೇಕೆಂದು ಸಲಹೆ ನೀಡಿದರು.
ಮಕ್ಕಳಲ್ಲಿ ಅರಿವು: ಪರಿಸರ ಸಂರಕ್ಷಣೆ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಆ ಮೂಲಕ ಅವರಲ್ಲಿ ಪರಿಸರದತ್ತ ಕಾಳಜಿ ಬೆಳೆದು ಮುಂದೆ ಪರಿಸರ ರಕ್ಷಣೆಗೆ ಪೂರಕ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಭಾರತೀಯ ಜ್ಞಾನ- ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಹಫೀಜುಲ್ಲಾ ಮಾತನಾಡಿ, ಪರಿಸರ ಉಳಿಸಿ ಬೆಳೆಸುವ ಕಾರ್ಯದಲ್ಲಿ ಜಿಲ್ಲೆಯ 100ಕ್ಕೂ ಹೆಚ್ಚಿನ ಸಂಖ್ಯೆಯ ಶಾಲೆಗಳು ಆಸಕ್ತಿ ವಹಿಸಿ ಕಾರ್ಯನಿರ್ವಹಿಸಿವೆ. ಈ ಶಾಲೆಗಳು ಎ ಪ್ಲಸ್ ಶ್ರೇಣಿಯಲ್ಲಿವೆ. ಹಿಂದುಳಿದ ಹೈ.ಕ. ಭಾಗಕ್ಕೆ ಪ್ರತಿವರ್ಷ ರಾಜ್ಯ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ ಲಭಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸರ್ಕಾರದಿಂದ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪ್ರೋತ್ಸಾಹದ ಕೊರತೆಯಿದ್ದು, ಈ ಬಗ್ಗೆ ಸರ್ಕಾರ ಇನ್ನೂ ಹೆಚ್ಚಿನ ಗಮನ ಹರಿಸಿದಲ್ಲಿ ಉತ್ತಮ ಪರಿಸರ ನಿರ್ಮಾಣ ಕಷ್ಟವೇನಲ್ಲ ಎಂದ ಅವರು, ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಇನ್ನಷ್ಟು ಪ್ರಯತ್ನಗಳು ನಡೆಯಲಿ ಎಂದರು.
ಸಮಾರಂಭದಲ್ಲಿ ಡಿಡಿಪಿಐ ರಾಮಾಂಜನೇಯ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪ್ರೊ. ಸಿ.ಡಿ. ಪಾಟೀಲ್, ಬಿಇಒ ಮಲ್ಲಿಕಾರ್ಜುನ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಎಸ್. ದಿನೇಶ, ರಾಯಚೂರು ಪರಿಸರ ಅಧಿಕಾರಿ ಆರ್. ಪದ್ಮಾನಾಭನ್ ಇದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಶಾಲಾ ಮಕ್ಕಳು ಮತ್ತು ಬೋಧಕ ವರ್ಗದವರಿದ್ದರು.
ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಪರಿಸರ ಸಂರಕ್ಷಣೆ ಕ್ರಮ ಕೈಗೊಂಡು ಸಾಧನೆ ಮೆರೆದ ತಾಲೂಕಿನ ಪುಚ್ಚಲದಿನ್ನಿ, ಮಾನವಿ ತಾಲೂಕಿನ ಉಮಳಿಗುಡದಿನ್ನಿ, ದೇವಿ ಕ್ಯಾಂಪ್, ಲಿಂಗಸ್ಗೂರು ತಾಲೂಕಿನ ಡಬ್ಬೇರಮಡು, ಗೊಲಪಲ್ಲಿ ಬ್ರಿಡ್ಜ್, ಸಿಂಧನೂರು ತಾಲೂಕಿನ ಗಣೇಶ ಕ್ಯಾಂಪ್, ಮಾವಿನಮಡು, ಕೆ. ಹಂಚಿನಾಳ ಕ್ಯಾಂಪ್, ದೇವದುರ್ಗ ತಾಲೂಕಿನ ಸೂಲದಗುಡ್ಡ ವಲಯ, ಗಾಜಲದಿನ್ನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹಸಿರು ಶಾಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅದೇ ರೀತಿ ಮಾನವಿ ತಾಲೂಕಿನ ರಾಜಲಬಂಡಾ, ಮಿಡಗಲ್‌ದಿನ್ನಿ ಕ್ಯಾಂಪ್, ಮುಚ್ಚಳಗುಡ್ಡ ಕ್ಯಾಂಪ್, ಲಿಂಗಸ್ಗೂರು ತಾಲೂಕಿನ ಕೇಸರಹಟ್ಟಿ ತಾಂಡಾ-2, ಪಲಗಲದಿನ್ನಿ, ಮ್ಯಾದರಾಳ, ಸಿಂಧನೂರು ತಾಲೂಕಿನ ಮುಳ್ಳೂರು, ಸಾಸಲಮರಿ, ದೇವದುರ್ಗ ತಾಲೂಕಿನ ಗುಂಡೇರದೊಡ್ಡಿ, ಮಾನಸಯ್ಯನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕಿತ್ತಳೆ ಶಾಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

