ರಾಯಚೂರು

ಅಕ್ರಮ ಆರೋಪ; ಹಲ್ಲೆಕೋರರ ಬಂಧನಕ್ಕೆ ಒತ್ತಾಯ

Published On :

ರಾಯಚೂರು: ಮಾನವಿ ತಾಲೂಕಿನ ಗಣದಿನ್ನಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ಕರ್ನಾಟಕ ಯುವಜನ ರಂಗ ಸಂಘಟನೆಯ ಮುಖಂಡರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕೆ ಸಂಘಟನೆ ಜಿಲ್ಲಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ. ಈ ಕುರಿತು ಇತ್ತೀಚೆಗೆ ಜಿಲ್ಲಾ ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಕಾರ್ಯಕರ್ತರು, ಮಾನವಿ ತಾಲೂಕಿನ ಗಣದಿನ್ನಿ ಗ್ರಾಪಂ ವ್ಯಾಪ್ತಿಯ ಹೊಕ್ರಾಣಿ ಗ್ರಾಮದಲ್ಲಿ ನೀರು ಪೂರೈಕೆ ಕಾಮಗಾರಿಯಲ್ಲಿ ನಡೆದಿದ್ದ ಅಕ್ರಮದ ಕುರಿತು ದೂರು ಸಲ್ಲಿಸಿದ ಕೆವೈಎಫ್ ಸಂಘಟನೆಯ ತಾಲೂಕು ಅಧ್ಯಕ್ಷ ನಾಗೇಂದ್ರ ಅವರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದರು. ಇನ್ನೂ ಮೂವರಿಗೆ ಗಾಯಗಳಾಗಿದ್ದು, ಘಟನೆಗೆ ಅಕ್ರಮದಲ್ಲಿ ಶಾಮೀಲಾಗಿರುವವರೇ ಕಾರಣ ಎಂದು ಆರೋಪಿಸಿರುವ ಸಂಘಟನೆಯು, ಗಣದಿನ್ನಿ ಗ್ರಾಪಂ ವ್ಯಾಪ್ತಿಯಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿದ್ದನ್ನು ವಿರೋಧಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ದೂರಿದರು. ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

ಆಲಿಕಲ್ಲು ಮಳೆಗೆ ಬತ್ತ ಹಾನಿ; ಶಾಸಕ ಬಾದರ್ಲಿ ಭೇಟಿ
ಸಿಂಧನೂರು: ತಾಲೂಕಿನ ಸಾಲಗುಂದಾದಲ್ಲಿ ಸುರಿದ ಆಲಿಕಲ್ಲು ಮಳೆಗೆ ಬತ್ತದ ಬೆಳೆ ಹಾನಿಗೀಡಾಗಿದ್ದು, ಶಾಸಕ ಹಂಪನಗೌಡ ಬಾದರ್ಲಿ ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಬೂದಿವಾಳ, ಬೂದಿಹಾಳ ಕ್ಯಾಂಪ್, ಸೋಮಲಾಪುರ, ಸಾಲಗುಂದಾ ಸೇರಿ ಅನೇಕ ಗ್ರಾಮಗಳಲ್ಲಿ ಸುಮಾರು 2500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಬತ್ತ ಹಾನಿಯಾಗಿದೆ. ಮಾನವೀಯ ದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಾನಿ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. ಈ ವೇಳೆ ಜಿಪಂ ಸದಸ್ಯ ಚಂದೂಸಾಬ್ ಮುಳ್ಳೂರು, ಮುಖಂಡರಾದ ಮಲ್ಲನಗೌಡ ಕನ್ನಾರಿ, ವೀರರಾಜು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಚನ್ನಬಸವ ಉಪ್ಪಳ ದ್ದರು. ಅಕಾಲಿಕ ಮಳೆಯಿಂದ ಹಾನಿಗೀಡಾದ ಬೂದಿವಾಳ ಕ್ಯಾಂಪ್ ಹಾಗೂ ಇತರೆ ಗ್ರಾಮಗಳ ಹೊಲಗಳಿಗೆ ಮಾಜಿ ಶಾಸಕ ವೆಂಕಟರಾವ ನಾಡಗೌಡ ಈಚೆಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು.

ಅಕ್ರಮ ಪೈಪ್‌ಲೈನ್ ತೆರವಿನ ಭರವಸೆ
ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ 55ನೇ ವಿತರಣಾ ಕಾಲುವೆ ಮೇಲ್ಭಾಗದಲ್ಲಿ ಅಕ್ರಮವಾಗಿ ಪೈಪ್ ಅಳವಡಿಸಿ ನೀರು ಪಡೆಯುವುದನ್ನು ತಡೆಯಲು ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಹಾಗೂ ಪೈಪ್ ತೆರವಿಗೆ ನಡೆಸಿದ್ದ ರೈತರ ಹೋರಾಟ ಅಧಿಕಾರಿಗಳ ಭರವಸೆ ಹಿನ್ನೆಲೆ ಅಂತ್ಯಗೊಂಡಿದೆ. ಕರ್ನಾಟಕ ರಾಜ್ಯ ರೈತ ಸಂಘ(ಕೋಡಿಹಳ್ಳಿ ಬಣ) ಮತ್ತು ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಈ ನಿಟ್ಟಿನಲ್ಲಿ ನಡೆಸಿದ್ದ ಹೋರಾಟದ ಹಿನ್ನೆಲೆ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಹನುಮಂತಪ್ಪ, ತಹಸೀಲ್ದಾರ್ ವೆಂಕನಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರಿಗೆ ಏಪ್ರಿಲ್‌ನಲ್ಲಿ ಪೈಪ್‌ಗಳ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆ ಹೋರಾಟ ಅಂತ್ಯಗೊಂಡಿತು. ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯ ಸಂದರ್ಭದಲ್ಲಿ ಅಮೀನ ಪಾಷಾ ದಿದ್ದಗಿ, ಹನುಮನಗೌಡ ಬೆಳಗುರ್ಕಿ, ಎಚ್.ಎನ್. ಬಡಿಗೇರ, ರಮೇಶಪ್ಪ ದಿದ್ದಗಿ, ಭೀಮಯ್ಯ ಜಾಲವಾಡಗಿ, ರಂಗನಾಥ ಬುದ್ದಿನ್ನಿ, ಶರಣೇಗೌಡ ತಡಕಲ್, ಗಂಗಾಧರ ಬುದ್ದಿನ್ನಿ, ರಮೇಶ ಪಾಟೀಲ್ ಬೇರ್ಗಿ ಮತ್ತಿತರರಿದ್ದರು.

ಸಿಂಧನೂರು; ಪದವಿಪೂರ್ವ ಕಾಲೇಜಿನಲ್ಲಿ ಸ್ನೇಹಕೂಟ
ಸಿಂಧನೂರು: ನಗರದ ಶಂಕರ್ ಟ್ರಸ್ಟ್ ಪದವಿ ಹಾಗೂ ಪಪೂ ಕಾಲೇಜಿನಲ್ಲಿ 2013-14ನೇ ಸಾಲಿನ ಸ್ನೇಹಕೂಟ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಗಂಗಾವತಿಯ ವಿದ್ಯಾಮಂದಿರ ಇಂಗ್ಲಿಷ್ ಅಕಾಡೆಮಿ ನಿರ್ದೇಶಕ ಧನರಾಜ್ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಅಜಯ್‌ಕುಮಾರ್ ಪಾಟೀಲ್ ಮಾತನಾಡಿ, ಶಾಲಾ ಕಾಲೇಜು ಹಂತದಲ್ಲಿ ಸಮಯದ ಮಹತ್ವವನ್ನು ರೂಢಿಸಿಕೊಂಡಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಕೀಳರಿಮೆ ಮನೋಭಾವನೆ ತೊರೆದು ಪ್ರತಿಯೊಬ್ಬರು ಅಂಕಗಳಿಗಾಗಿ ವಿದ್ಯೆ ಪಡೆಯದೇ ಜ್ಞಾನಕ್ಕಾಗಿ ಹಾತೊರೆಯಬೇಕೆಂದು ಸಲಹೆ ನೀಡಿದರು. ಉಪನ್ಯಾಸಕಿ ಶಾಂತಾ ಪಾಟೀಲ್, ಪತ್ರಕರ್ತ ಅಶೋಕ ಬೆನ್ನೂರು, ಶರಣಬಸವರಾಜ್ ಪಾಟೀಲ್ ಮಾತನಾಡಿದರು.

ಸ್ಮಶಾನ ಜಾಗ ಒತ್ತುವರಿ; ಕೊಂಡಮ್ಮ ಆರೋಪ
ರಾಯಚೂರು: ನಗರದ ಆಶಾಪುರ ರಸ್ತೆಯ ಕೊಳಂಕಿ ಪ್ರದೇಶದ ಬಳಿ ಜಿಪಂನ ಮಾಜಿ ಸದಸ್ಯ ಬಷೀರುದ್ದೀನ್ ಅವರು ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡು ಜನತೆಗೆ ಅನಾನುಕೂಲ ಕಲ್ಪಿಸಿದ್ದಾರೆಂದು ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮಿತಿಯ ಸದಸ್ಯೆ ಕೊಂಡಮ್ಮ ಅಯ್ಯಪ್ಪ ಆರೋಪಿಸಿದ್ದಾರೆ. ಈ ಕುರಿತು ಪ್ರತ್ರಿಕಾ ಹೇಳಿಕೆ ನೀಡಿರುವ ಅವರು, ಆಶಾಪುರ ರಸ್ತೆಯ ಸರ್ವೇ ನಂ.1428ರಲ್ಲಿ ಸುಮಾರು 150 ವರ್ಷಗಳಿಂದ ವಾರ್ಡ್ ಸಂಖ್ಯೆ 1, 2, 3 ಮತ್ತು 4ರ ನಿವಾಸಿಗಳು ಶವಸಂಸ್ಕಾರ ಮಾಡುತ್ತಿದ್ದಾರೆ. ಆದರೂ ಕಳೆದ 2-3 ವರ್ಷಗಳಿಂದ ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಅವರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಭೂಮಿ ಖರೀದಿಸಿ ಸ್ಮಶಾನದ ಜಾಗ ಒತ್ತುವರಿ ಮಾಡಿಕೊಂಡು ಅನಾನುಕೂಲ ಕಲ್ಪಿಸಿದ್ದಾರೆಂದು ಆರೋಪಿಸಿದ್ದಾರೆ. ಕೂಡಲೇ ಬಡವರಿಗೆ ಸೇರಿದ ಸ್ಮಶಾನ ಜಾಗ ಒತ್ತುವರಿ ಕೈಬಿಟ್ಟು ಜನತೆಗೆ ಅನುಕೂಲ ಕಲ್ಪಿಸುವಂತೆ ಅವರು ಆಗ್ರಹಿಸಿದ್ದಾರೆ.

ನಾಳೆ ಭಾರತ ನಿರ್ಮಾಣ ಪಾದಯಾತ್ರೆ
ಮಸ್ಕಿ: ಸಮೀಪದ ಬಳಗಾನೂರು ಗ್ರಾಮದಿಂದ ಮಸ್ಕಿಯ ತೇರ್ ಬಜಾರ್‌ವರೆಗೆ ಮಾ.10ರಂದು ಕಾಂಗ್ರೆಸ್ ಪಕ್ಷದಿಂದ ಭಾರತ ನಿರ್ಮಾಣ ಅಭಿಯಾನದ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನೆಪ್ಪ ಗುಂಡಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ಆಯೋಜಿಸಿದ್ದು, ಪಕ್ಷದ ಸಂಘಟನೆಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಸೇರಿ ಜಿಪಂ, ತಾಪಂ ಸದಸ್ಯರು ಮತ್ತು ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. ಪಕ್ಷದ ಅಭಿಯಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.

ಕೊಳೆಗೇರಿಗಳ ತುರ್ತು ಸಮೀಕ್ಷೆಗೆ ಒಪ್ಪಿಗೆ
ರಾಯಚೂರು: ನಗರ ವಂಚಿತರ ಮತ್ತು ಕೊಳೆಗೇರಿ ನಿವಾಸಿಗಳ ಸಮೀಕ್ಷೆಗೆ ಸಂಬಂಧಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ ಎಂದು ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ತಿಳಿಸಿದೆ. ಈ ಕುರಿತು ಇತ್ತೀಚೆಗೆ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಕಾಸಸೌಧದಲ್ಲಿ ಕರೆದಿದ್ದ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಸಭೆಯಲ್ಲಿ 1973ರಲ್ಲಿ ರಾಜ್ಯದಲ್ಲಿದ್ದ ಕೊಳಚೆ ಪ್ರದೇಶದಲ್ಲಿನ ನಿವಾಸಿಗಳ ಅಂಕಿ- ಸಂಖ್ಯೆಗೆ ಅನುಗುಣವಾಗಿ ಇಂದು ವಿವಿಧ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅದರಿಂದಾಗಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಲಾಯಿತು. ಈ ಹಿನ್ನೆಲೆಯಲ್ಲಿ ನಗರ ಬಡಜನರ ಮತ್ತು ಕೊಳೆಗೇರಿಗಳ ತುರ್ತು ಸಮೀಕ್ಷೆ ನಡೆಸುವ ಮೂಲಕ ಅದಕ್ಕನುಗುಣವಾಗಿ ಯೋಜನೆಗಳ ರೂಪಿಸುವುದು ಮತ್ತು ಜಾರಿಗೆ ತರುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಂಘಟನೆಯ ಪ್ರಮುಖರಿಗೆ ಭರವಸೆ ನೀಡಿದೆ ಎಂದು ಸಂಘಟನೆ ತಿಳಿಸಿದೆ. ಕೊಳೆಗೇರಿ ನಿವಾಸಿಗಳ ಸಮಸ್ಯೆಗಳ ಬಗ್ಗೆ ಸಂಘಟನೆಯಿಂದ ಸಚಿವರ ಗಮನಕ್ಕೆ ತರಲಾಯಿತು ಹಾಗೆಯೇ ಸಮಸ್ಯೆಗಳ ಪರಿಹಾರಕ್ಕೂ ಒತ್ತಾಯಿಸಲಾಯಿತು.

ಹೈ.ಕ. ಪ್ರಮಾಣ ಪತ್ರ ನೀಡಿಕೆವಂಚನೆ: ಆರೋಪ
ರಾಯಚೂರು: ಹೈದರಾಬಾದ್ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿರುವ 371ನೇ ಕಲಂ (ಜೆ) ಅಡಿ ದೊರೆತ ವಿಶೇಷ ಸ್ಥಾನಮಾನದ ಸೌಲಭ್ಯ ಪಡೆಯಲು ಅಗತ್ಯವಿರುವ ಪ್ರಮಾಣ ಪತ್ರ ವಿತರಣೆ ಪ್ರಕ್ರಿಯೆಯನ್ನು ದಂಧೆಯಾಗಿಸಿಕೊಂಡಿರುವ ಕೆಲವರು ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದಾರೆಂದು ಜನಸಂಗ್ರಾಮ ಪರಿಷತ್ ಜಿಲ್ಲಾ ಸಂಚಾಲಕ ಡಾ. ರಜಾಕ್ ಉಸ್ತಾದ್ ಆರೋಪಿಸಿದರು. ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಮಾಣ ಪತ್ರ ನೀಡಿಕೆ ಪ್ರಕ್ರಿಯೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ಹಣ ಮಾಡಿಕೊಳ್ಳುವ ಕಾರ್ಯ ನಡೆದಿದೆ. ಝೆರಾಕ್ಸ್ ಅಂಗಡಿಗಳು ವಿವಿಧ ಪ್ರತಿಗಳನ್ನು ನೀಡಲು ಹಣ ಕೀಳುತ್ತಿವೆ ಎಂದು ಆರೋಪಿಸಿದರು. ಝರಾಕ್ಸ್ ಅಂಗಡಿಗಳವರು ಪ್ರಮಾಣ ಪತ್ರ ಪಡೆಯಲು ತೆರಳುವವರಿಗೆ ತಮ್ಮದೇ ಆದ ರೀತಿಯ ಅರ್ಜಿ ನಮೂನೆ ತಯಾರಿಸಿದ್ದು, ಅನಗತ್ಯ ದಾಖಲೆ ಎಂಬ ರೀತಿಯ ಬಿಂಬಿಸುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ. ಪ್ರಮಾಣಪತ್ರ ಪಡೆಯಲು ನಗರಸಭೆ ತೆರಿಗೆ ಪಾವತಿ, ವಿದ್ಯುತ್ ಬಿಲ್ ಸೇರಿ ಅನೇಕ ದಾಖಲೆಗಳು ಅವಶ್ಯಕ ಎಂದು ಅರ್ಜಿ ನಮೂನೆಗಳಲ್ಲಿ ನಮೂದಿಸಿ ಈ ಮೂಲಕ ಜನರ ದಾರಿ ತಪ್ಪಿಸುತ್ತಿವೆ ಎಂದು ದೂರಿದರು.

ಬಸವ ಧರ್ಮ ಪ್ರವಚನ
ಮುದಗಲ್: ಮಹಿಳಾ ಆಂದೋಲನಕ್ಕೆ ಕ್ರಾಂತಿಯ ಕಳೆಯನ್ನು 12ನೇ ಶತಮಾನದಲ್ಲಿ ಊದಿದವರು ಬಸವಣ್ಣ ಎಂದು ಖ್ಯಾತ ಪ್ರವಚನಕಾರ ಡಾ. ಈಶ್ವರ ಮಂಟೂರು ಹೇಳಿದರು. ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ ಬಸವ ಧರ್ಮ ಪ್ರವಚನದಲ್ಲಿ ಮಾತನಾಡಿ, ಮಹಿಳೆಯ ಹಕ್ಕು, ಮತದಾನದ ಹಕ್ಕು, ಸಾಮಾಜಿಕ ನ್ಯಾಯ, ಶಿಕ್ಷಣ ಹಕ್ಕುಗಳಿಗೆ ಬಸವಣ್ಣನವರು ಅನುಭವ ಮಂಟಪ ಕಟ್ಟಿಕೊಂಡು ಹೋರಾಡಿದರು ಎಂದರು. ಅಂದು ಮಹಿಳಾ ಆಂದೋಲನಕ್ಕೆ ನಾಂದಿ ಹಾಡಿದ್ದಕ್ಕಾಗಿಯೇ 33 ಮಹಿಳಾ ಶರಣಿಯರು ವಚನ ಬರೆದರು, ಸಮಾಜದಲ್ಲಿ ಬೆಳೆದು ಮಹಾ ಶರಣೆಯರಾದರು. ವೀರ ರಾಣಿ ಕಿತ್ತೂರು ಚೆನ್ನಮ್ಮ, ಮದರ್ ತೆರೆಸಾ, ಇಂದಿರಾಗಾಂಧಿ, ಕಿರಣ್ ಬೇಡಿಯಂತ ಅನೇಕ ಮಹಿಳೆಯರು ಸಾಧನೆ ಮಾಡಿದಂತ ರಾಷ್ಟ್ರ ನಮ್ಮದು ಎಂದು ಹೇಳಿದರು. ಇಳಕಲ್ ಡಾ. ವಿಜಯಮಹಾಂತ ಸ್ವಾಮಿಗಳು ವಿಧವೆಯರಿಗೆ ಉಡಿ ತುಂಬಿದರು. ವಿಕಲಾಂಗರಿಗೆ ಪ್ರೋತ್ಸಾಹ ಧನ ನೀಡಿದರು. ಅನಾಥರಿಗೆ ಸಹಾಯ ಹಸ್ತ ನೀಡಿದರು. ಜಾತಿ, ಮತ, ಭೇದ ಮರೆತು ಲಿಂಗದೀಕ್ಷೆ ಮಾಡಿದರು.

ಉಪ ನಿಬಂಧಕರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ
ರಾಯಚೂರು: ನಗರದ ಜವಾಹರ ನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ವಿಚಾರಣೆ ವರದಿಯಾಧರಿಸಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದಂತೆ ಕ್ರಮ ಕೈಗೊಂಡು ಸಂಘವನ್ನು ರದ್ದುಪಡಿಸುವಲ್ಲಿ ಹಾಗೂ ಸಂಘದ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ವಿಫಲವಾಗಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ಸಂಘದ ಸದಸ್ಯ ಜಿ. ರಘುನಾಥ್ ಒತ್ತಾಯಿಸಿದ್ದಾರೆ. ಈ ಕುರಿತು ಅವರು ಸಹಕಾರ ಸಚಿವ ಮಹದೇವಪ್ರಸಾದ್ ಹಾಗೂ ಸಹಕಾರ ಇಲಾಖೆಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿ, ಜವಾಹರ ನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ನಡೆದ ತನಿಖೆ ಮತ್ತು ವಿಚಾರಣಾ ವರದಿಯಾಧರಿಸಿ ಸಹಕಾರ ಸಂಘಗಳ ಉಪ ನಿಬಂಧಕರು ಕರ್ತವ್ಯ ಲೋಪ ಎಸಗಿದ್ದಾರೆಂದು ಆರೋಪಿಸಿದ್ದಾರೆ. ಸಹಕಾರ ಇಲಾಖೆಯ ಬೆಂಗಳೂರಿನ ಮುಖ್ಯ ಕಚೇರಿಯ ನಿಬಂಧಕರು ಸಂಘ ರದ್ದುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಿದ್ದರೂ ನೆಪವೊಡ್ಡುತ್ತಾ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಂಘದ ಸದಸ್ಯ ಜಿ. ರಘುನಾಥ್ ಒತ್ತಾಯಿಸಿದ್ದಾರೆ.

ಎನ್‌ಎಸ್‌ಎಸ್ ಘಟಕದಿಂದ ಶ್ರಮದಾನ

ಸಿಂಧನೂರು: ತಾಲೂಕಿನ ಸಾಸಲಮರಿ ಗ್ರಾಮದಲ್ಲಿ ಸರ್ಕಾರಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಶಿಬಿರಾರ್ಥಿಗಳು ಗ್ರಾಮದಲ್ಲಿ ದಾರಿ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.  ಶಿಬಿರಾರ್ಥಿಗಳ ಶ್ರಮದಾನವನ್ನು ಕಂಡ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಮನೆ ಮನೆಗೆ ತೆರಳಿದ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ಎನ್‌ಎಸ್‌ಎಸ್ ಶಿಬಿರಾಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಮೂಡಿಸಿದರು.

ಪಪಂ ನೂತನ ಮುಖ್ಯಾಧಿಕಾರಿ ಅಧಿಕಾರ ಸ್ವೀಕಾರ
ಮುದಗಲ್: ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಮಹಾಂತೇಶ ಬೀಳಗಿಯವರು ನೂತನ ಮುಖ್ಯಾಧಿಕಾರಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಮೊದಲಿದ್ದ ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮಿಯವರಿಗೆ ಗದಗ ಜಿಲ್ಲೆ ನೆರೆಗಲ್‌ಗೆ ವರ್ಗವಾಗಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಮಹಾಂತೇಶ ಬೀಳಿಗಿಯವರನ್ನು ಸರ್ಕಾರ ನೇಮಿಸಿ ಅದೇಶ ಹೊರಡಿಸಿದ್ದರಿಂದ ಅಧಿಕಾರ ಸ್ವೀಕಾರ ಮಾಡಿದರು. ಪ್ರಭಾರ ವಹಿಸಿದ್ದ ಲಿಂಗಸುಗೂರ ಮುಖ್ಯಾಧಿಕಾರಿ ಈರಣ್ಣ ಬಿರಾದರವರು ಅಧಿಕಾರ ಹಸ್ತಾಂತರ ಮಾಡಿದರು. ಪ.ಪಂ. ಅಧ್ಯಕ್ಷ ರಜ್ಜಬಲಿ ಟಿಂಗ್ರಿ, ಸದಸ್ಯರಾದ ಈರಣ್ಣ ವಡ್ಡರ, ಮಹ್ಮದ್ ಸಾದಿಕ ಅಲಿ, ಬಂದೇ ನವಾಜ, ಅಬ್ದು ಲ್ ರೌಫ್, ಖಾಜಾಪಾಷಾ ಗಾಡಿವಾನ್, ಶಿವರಾಜ ತಳವಾರ, ಮಾಜಿ ಅಧ್ಯಕ್ಷ ಅಮೀರಬೇಗ್ ಉಸ್ತಾದ್, ಮುಖಂಡರಾದ ರಾಮಣ್ಣ ಹಿರೇಮನಿ, ಮಹಾಂತೇಶ ಪಾಟೀಲ್, ಚಂದ್ರಶೇಖರ ವಕೀಲ್, ನಾಗನಗೌಡ ಅಕ್ಕಿ ಇದ್ದರು.

ತರಕಾರಿ ಮಾರಾಟಗಾರರ ಸಂಘ ವಿಸರ್ಜನೆ



ರಾಯಚೂರು: ನಗರದ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಕೆಲವರು ಸಂಘ ವಿರೋಧಿ ಕಾರ್ಯದಲ್ಲಿ ತೊಡಗಿದ್ದು,ಈ ಹಿನ್ನೆಲೆಯಲ್ಲಿ ಬೇಸತ್ತು  ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಜತೆಗೆ ಸಂಘವನ್ನು ವಿಸರ್ಜಿಸಿದ್ದಾಗಿ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್.ಮಹಾವೀರ್ ತಿಳಿಸಿದರು. ಅವರು ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘವನ್ನು ಪುನಾರಚಿಸುವ ನಿಟ್ಟಿನಲ್ಲಿ ಅನುಕೂಲ ಕಲ್ಪಿಸಲು ಹಾಲಿ ಸಂಘವನ್ನು ವಿಸರ್ಜಿಸಲಾಗಿದೆ. ಮಾರುಕಟ್ಟೆಯಲ್ಲಿ ಬಾಡಿಗೆ ಹೆಚ್ಚಳ ಮಾಡಿದ ಸಂದರ್ಭದಲ್ಲಿ ತಮ್ಮ ನೇತೃತ್ವದಲ್ಲಿ ಹೋರಾಟ ಮಾಡಿ ಬಾಡಿಗೆ ದರ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಸಂಘದ ಬಗ್ಗೆ  ಮಾಜಿ ಕಾರ್ಯದರ್ಶಿ ಮಹ್ಮದ್ ಇಕ್ಬಾಲ್ ಸದಸ್ಯರನ್ನು ದಾರಿ ತಪ್ಪಿಸುವಂತಹ ಕಾರ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಕಾರಿಗಳಾದ ಪ್ರಭು ನಾಯಕ, ಎಂ. ಆಂಜಿನೇಯ, ಮಹ್ಮದ್ ಶಾಲಂ, ಮಹ್ಮದ್ ಆತೀಕ್, ಆಜಂಖಾನ್, ರಮೇಶ ನಾಯಕ, ಎಸ್.ಕೆ. ಖಾನ್ ಸಾಬ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.