ರಾಯಚೂರು

ಲೇಖನಿಯಿಂದ ಜನಜಾಗೃತಿ ಮೂಡಿಸಿದ ಲಂಕೇಶ್

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಮಾ.9
ವಿಡಂಬನೆ ರೀತಿ ಬರವಣಿಗೆಯ ಮೂಲಕ ಸಮಾಜದಲ್ಲಿನ ಮೌಢ್ಯ, ಜಾತಿ ವ್ಯವಸ್ಥೆ ವಿರುದ್ಧ ತಮ್ಮ ಲೇಖನಗಳ ಮೂಲಕ ಪಿ.ಲಂಕೇಶ್ ಅವರು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ನಗರದ ರಂಗಮಂದಿರದಲ್ಲಿ ಭಾನುವಾರ ಲಂಕೇಶ್ ಬಳಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಪಿ.ಲಂಕೇಶ್ ಅವರ 78ನೇ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೃಜನಶೀಲ ಬರಹಗಾರರು: ಲಂಕೇಶ್ ಅವರು ಸೃಜನಶೀಲ ಬರಹಗಾರರಾಗಿದ್ದು, ಸಮಾಜದಲ್ಲಿ ನೆಲೆಸಿದ್ದ ಮೌಢ್ಯ, ರಾಜಕೀಯ ಅವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ ನಡೆಸಿದ್ದರು. ತಮ್ಮ ಪತ್ರಿಕೆ ಮತ್ತು ಕೃತಿಗಳ ಮೂಲಕ ಜನಜಾಗೃತಿಯ ಕೆಲಸ ಮಾಡಿದ್ದರು ಎಂದು ಹೇಳಿದರು.
ಕನ್ನಡ ಸಾರಸ್ವತ ಲೋಕದ ಅನೇಕ ಸಾಹಿತಿಗಳಲ್ಲಿರುವಂತೆ ಲಂಕೇಶ್ ಅವರಲ್ಲಿಯೂ ಗಾಂಧಾರಿ ರೀತಿಯ ತಾಯ್ತನದ ಗುಣವಿತ್ತು. ಅದರಿಂದಾಗಿಯೇ ಅವರು ಅನೇಕ ಯುವ ಲೇಖಕರಿಗೆ ಅಪ್ಯಾಯಮಾನವಾಗಿದ್ದರು. ಲಂಕೇಶರು ಆಗಿನ ಕಾಲ ಘಟ್ಟದಲ್ಲಿ ಸರ್ಕಾರದ ನೀತಿ ಸಂಹಿತೆಯನ್ನು ರೂಪಿಸುವಂಥ ಲೇಖನಗಳನ್ನು ಬರೆದಿದ್ದು ಎಂದಿಗೂ ಮರೆಯಲಾಗದಂಥ ಸಂಗತಿ ಎಂದರು.
ಅಪರೂಪದ ಅನುವಾದಕರೂ ಹೌದು: ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯ ಲಂಕೇಶ್ ಅವರು ನಿರಂತರವಾಗಿ ಮಾಡುತ್ತಿದ್ದರು. ಅಪರೂಪದ ಅನುವಾದಕರಾಗಿದ್ದ ಅವರು, ಅನೇಕ ಅನ್ಯ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಓದುಗರಿಗೆ ಇತರೆ ಭಾಷೆಯ ಸಾಹಿತ್ಯವನ್ನು ತಿಳಿಯಪಡಿಸುವ ಕಾರ್ಯ ಮಾಡಿದ್ದರೆಂದರು.
ಹಂಪಿ ಕನ್ನಡ ವಿವಿಯ ಡಾ. ರಹಮತ್ ತರೀಕೆರೆ ಮಾತನಾಡಿ, ಅತ್ಯುತ್ತಮ ನಾಡು ಕಟ್ಟುವ ಕನಸು ಲಂಕೇಶರಿಗಿತ್ತು. ಈ ಕಾರಣಕ್ಕೆ ಅವರ ಜನ್ಮದಿನೋತ್ಸವವನ್ನು ನಾಡಿನ ಎಲ್ಲೆಡೆ ನಾಡು ಕಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ದಾರಿಯ ಬಗ್ಗೆ ಚಿಂತನೆ ನಡೆಸುವ ದಿನವಾಗಿ ಆಚರಿಸಬೇಕಿದೆ ಎಂದು ಹೇಳಿದರು.
ವೈಚಾರಿಕತೆ ಚಿಂತನೆ ಅಗತ್ಯ: ಕ್ರಿಯಾಶೀಲತೆ, ಜನರೊಂದಿಗೆ ಬೆರೆಯುವ ಪರಿ, ಸಾರ್ವಜನಿಕ ನೈತಿಕತೆಗಳು ಲಂಕೇಶ್‌ರಲ್ಲಿದ್ದ ಬಹುದೊಡ್ಡ ಗುಣಗಳು ಎಂದ ಅವರು, ಆರೋಗ್ಯಕರ ಚಿಂತನೆ, ವೈಚಾರಿಕತೆಯ ಆಧಾರದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಸಾಧ್ಯವೇ ವಿನಃ ಕೇವಲ ಐದು ವರ್ಷಕ್ಕೊಮ್ಮೆ ಮತದಾನ ಮಾಡುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳದು ಎಂಬ ಆಲೋಚನೆಯನ್ನು ಲಂಕೇಶ್ ಹೊಂದಿದ್ದರು ಎಂದು ಶ್ಲಾಘಿಸಿದರು. ಸಾಮಾಜಿಕ ತಳಹದಿಯ ಪ್ರಜಾಪ್ರಭುತ್ವ ಕಟ್ಟುವುದು ಎಲ್ಲರ ಕನಸಾಗಬೇಕು. ಆಗ ಮಾತ್ರ ಮೌಢ್ಯ, ಜಾತೀ ವ್ಯವಸ್ಥೆ ತೊರೆಯಲು ಸಾಧ್ಯ ಎಂದು ನಂಬಿದ್ದ ಲಂಕೇಶ್ ಅವರು ಸಾಂಸ್ಕೃತಿಕ ನಾಯಕರಾಗಿದ್ದಾರೆ. ತಮ್ಮ ಲೇಖನ, ಕೃತಿಗಳ ಮೂಲಕ ಕನ್ನಡ ಭಾಷೆಗೆ ಅಭಿವ್ಯಕ್ತಿಯ ಶಕ್ತಿಯನ್ನು ಅವರು ತುಂಬಿದ್ದರು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ಲೋಕಸಭೆ ಚುನಾವಣೆ ಜನತೆಯ ಮುಂದಿದ್ದು, ದೇಶವನ್ನು ಕೋಮುವಾದಿಗಳ ಕೈವಶವಾಗದಂತೆ ಎಚ್ಚರಿಕೆಯಿಂದ ಮತದಾನ ಮಾಡುವುದು ಮತದಾರರ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ಎಚ್ಚರಿಸಿದರು.
ಸಮಾರಂಭದಲ್ಲಿ ಪ್ರಮುಖರಾದ ಮಹಾಂತೇಶ್ ಮಸ್ಕಿ, ಸಿ.ದಾನಪ್ಪ ನಿಲೋಗಲ್, ಭೀಮನಗೌಡ ಇಟಗಿ, ಈ.ಆಂಜಿನಯ್ಯ, ತಾಯರಾಜ್ ಮರ್ಚಟ್ಹಾಳ್, ಡಾ. ಕೆ.ಶಿವರಾಜ್, ಎನ್.ನಾಗರಾಜ್, ಮಹೆಬೂಬ್ ಪಾಷಾ ಮೂಲಿಮನಿ, ಚೆನ್ನಬಸವಣ್ಣ ಸೇರಿದಂತೆ ಅನೇಕರಿದ್ದರು.
ಕೃತಿಗಳ ಬಿಡುಗಡೆ: ಪಿ.ಲಂಕೇಶ್ ಅವರು ರಚಿಸಿದ ಅನೇಕ ಕೃತಿಗಳನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.