ರಘುನಾಥನಹಳ್ಳಿ ಪುನರ್ವಸತಿ ಗ್ರಾಮ ಸೌಲಭ್ಯಕ್ಕೆ ಒತ್ತಾಯ
ರಾಯಚೂರು: ತಾಲೂಕಿನ ರಘುನಾಥನಹಳ್ಳಿ ಪುನರ್ವಸತಿ ಗ್ರಾಮದಲ್ಲಿ ಅಪೂರ್ಣಗೊಂಡಿರುವ ಸೌಲಭ್ಯ ಒದಗಿಸುವ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಸೋಮವಾರ ಜಿಪಂ ಸಿಇಒಗೆ ಮನವಿ ಸಲ್ಲಿಸಿ, 2009-10ನೇ ಸಾಲಿನಲ್ಲಿ ಸುರಿದಿದ್ದ ಧಾರಾಕಾರ ಮಳೆಗೆ ರಘುನಾಥನಹಳ್ಳಿಯಲ್ಲಿನ ಮನೆಗಳು ಹಾನಿಗೀಡಾಗಿದ್ದವು. ಆ ಹಿನ್ನೆಲೆಯಲ್ಲಿ ಸರ್ಕಾರದಿಂದ ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದ ಸ್ಥಳಾಂತರ ನಿಟ್ಟಿನಲ್ಲಿ 370 ಮನೆಗಳನ್ನು ನಿರ್ಮಿಸಿದ್ದು, ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪುನರ್ವಸತಿ ಆಸರೆ ಕಾಲೋನಿಯಲ್ಲಿ ವಾಸವಾಗಿರುವವರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು 25 ಲಕ್ಷ ಒದಗಿಸಿದ್ದು, ಜಿಪಂನಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಜಿಪಂ.ನ ಅಧಿಕಾರಿಗಳು ಅರ್ಧಮರ್ಧ ಕಾಮಗಾರಿ ಕೈಗೊಂಡು ಆಸರೆ ಕಾಲೋನಿ ನಿವಾಸಿಗಳಿಗೆ ಕುಡಿಯುವ ನೀರೊದಗಿಸದೇ ಕೈಬಿಟ್ಟಿದ್ದಾರೆಂದು ಆರೋಪಿಸಿದರು.
ಕುಡಿಯುವ ನೀರಿನ ಕಾಮಗಾರಿಗೆ ಒದಗಿಸಿದ್ದ 25 ಲಕ್ಷ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಆಸರೆ ಕಾಲೋನಿ ನಿವಾಸಿಗಳು ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಈ ಕುರಿತು ತಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಕೂಡಲೇ ಪುನರ್ವಸತಿ ಗ್ರಾಮಕ್ಕೆ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾಡಳಿತ ಹಾಗೊಂದು ವೇಳೆ ಗ್ರಾಮಸ್ಥರ ಬೇಡಿಕೆಗೆ ಮಣಿದು ಕ್ರಮ ಕೈಗೊಂಡು ಕುಡಿಯುವ ನೀರೊದಗಿಸದಿದ್ದಲ್ಲಿ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಪರಪ್ಪ ನಾಗೋಲಿ, ರೈತ ಮುಖಂಡ ಎಸ್. ರಾಮಣ್ಣ, ಅಯ್ಯಾಳಪ್ಪ, ಗ್ರಾಮಸ್ಥರಾದ ಖಾಜಾ ಪಾಷಾ, ಬಷೀರ್ ಅಹ್ಮದ್, ಅಬ್ದುಲ್ ರಹಿಮಾನ್, ಮಹೆಬೂಬ್, ತಿಪ್ಪಣ್ಣಗೌಡ, ಮಲ್ಲಯ್ಯ, ಬೂದಿಬಸವ ಸೇರಿ ಅನೇಕರಿದ್ದರು.
ರಾಂಪುರೆಗೆ ಗೌರವ ಡಾಕ್ಟರೇಟ್; ಸನ್ಮಾನ
ರಾಯಚೂರು: ಇಲ್ಲಿಗೆ ಸಮೀಪದ ಯರಮರಸ್ನ ಎಸ್ಎಲ್ಎನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹೈ-ಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಶರದ್ ಮಹಾದೇವಪ್ಪ ರಾಂಪುರೆ ಅವರಿಗೆ ಇತ್ತೀಚೆಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ಗುಲ್ಬರ್ಗ ವಿವಿಯಿಂದ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಡಾ. ಶರದ್ ರಾಂಪುರೆ ಅವರಿಗೆ ಡಾಕ್ಟರೇಟ್ ನೀಡಿದ ಹಿನ್ನೆಲೆಯಲ್ಲಿ ಎಸ್ಎಲ್ಎನ್ ಕಾಲೇಜಿನಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯ ಹಾಗೂ ಕಾಲೇಜಿನ ಸಂಚಾಲಕ ಗಂಗಾಧರ ಎಲಿ ವಹಿಸಿದ್ದರು. ಸದಸ್ಯ ಸಂಜು ಪಾಟೀಲ್, ಪ್ರಾಚಾರ್ಯ ಡಾ. ಎಸ್.ಬಿ. ಚಟ್ಟಿ, ಶಿಕ್ಷಕ ಬಳಗದ ಅಧ್ಯಕ್ಷ ಡಾ. ಎಸ್.ಜಿ. ಮಲಶೆಟ್ಟಿ ಇದ್ದರು.
ಶಿಕ್ಷಣ ಸಂಸ್ಥೆಯ ಮಾಜಿ ಜಂಟಿ ಕಾರ್ಯದರ್ಶಿ ಗಿರಿಜಾಶಂಕರ್ ಅವರು ಡಾ. ಶರದ್ ರಾಂಪುರೆ ಅವರನ್ನು ಸನ್ಮಾನಿಸಿದರು. ಮಲ್ಲಿಕಾರ್ಜುನ ಧೋತರಬಂಡಿ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಜಯಕುಮಾರ್ ಉಪ್ಪಿನ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

