ನಾರಿಯರ ಸಾಧನೆ, ವೇದನೆಗೆ ಧ್ವನಿಯಾಯ್ತು ರೇಡಿಯೋ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.14
ಅದೊಂದು ವಿಶಿಷ್ಟ ಸಮಾರಂಭ. ಇಲ್ಲಿನ ಬಾನುಲಿ ಕೇಂದ್ರದ ಸಂಗೀತ ಸ್ಟುಡಿಯೋದಲ್ಲಿ ಶುಕ್ರವಾರ ಬೆಳಗಿನ 10ರಿಂದ ಮ.12ರವರೆಗೆ ಸೇರಿದ್ದ ಪ್ರಮೀಳೆಯರೇನು ಅಂತಿಂಥವರಾಗಿರಲಿಲ್ಲ.
ಐಎಎಸ್ ಆಗ್ಲೇಬೇಕು ಅಂತ ಪಣತೊಟ್ಟು ಗುರಿ ತಲುಪಿದ ಪಲ್ಲವಿ ಆಕುರಾತಿ (ಜೆಸ್ಕಾಂ ಎಂಡಿ), ಸಂಕಷ್ಟಗಳನ್ನು ನುಂಗಿ ಬದುಕು ಕಟ್ಟಲೇಬೇಕೆಂದ ಹಾಸ್ಯಕಲಾವಿದೆ ಇಂದೂಮತಿ, ರಂಗಕಲಾವಿದೆ ರಾಜಮ್ಮ, ಸಮಾಜ ಸೇವಕಿ ನಂದಾರೆಡ್ಡಿ, ಬಡ ಕುಟುಂಬದಿಂದ ಬಂದು ಕ್ಯಾನ್ಸರ್ ತಜ್ಞೆಯಾಗಿರುವ ವಿಜಯಲಕ್ಷ್ಮೀ ದೇಶಮಾನೆ, ಧ್ವನಿಯನ್ನೇ ಸಾಧನೆಯ ಸರಕಾಗಿಸಿಕೊಂಡ ಉದ್ಘೋಷಕಿ ಪುಷ್ಟಕ್ಕ, ಹೆಂಗ್ಸರ ಬುದ್ಧಿ ಮೊಳಕಾಲ ಕೆಳಗೇನಿಲ್ಲ ಬಿಡ್ರಿ ಅಂದ ನಾಂದೇವಿ ಮಂಗೊಂಡಿ... ಹೀಗೆ ಅಲ್ಲಿ ಸೇರಿದ್ದ 9 ಜನ ಮಹಿಳೆಯರು ನವರತ್ನಗಳಂತೆ ಕಂಗೊಳಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನದಂಗವಾಗಿ ಗುಲ್ಬರ್ಗ ಆಕಾಶವಾಣಿ ಸ್ಟುಡಿಯೋದಲ್ಲಿ ಆಯೋಜಿಸಿದ್ದ ಅರಳಿದ ಕುಸುಮಗಳು ನೇರ ಪ್ರಸಾರ ಕಾರ್ಯಕ್ರಮದಲ್ಲಿ 2 ಗಂಟೆಗಳ ಕಾಲ 9 ಸಾಧಕಿಯರು ಶ್ರೋತೃಗಳ ಮುಂದೆ ತಮ್ಮ ಒಡಲಾಳದ ನೋವು- ನಲಿವು ಹಂಚಿಕೊಂಡರು. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಸಾಧಿಸುವ ಛಲ ಇರಬೇಕಷ್ಟೆ ಎಂದು ಸಾಧನೆ ಶಿಖರ ಹತ್ತಲು ಇರುವ ಸರಳ ಮೆಟ್ಟಿಲುಗಳ ಪರಿಚಯ ಮಾಡಿಕೊಟ್ಟರು.
ಗಂಡ, ಮನೆ, ಮಕ್ಕಳು, ನೆರೆಹೊರೆ ಎಂದು ಸಂಸಾರದಲ್ಲಿ ಸಕ್ರೀಯರಾಗಿದ್ದುಕೊಂಡೇ ಸಾಧನೆ ಶಿಖರ ಏರಬಹುದು. ಸರ್ಕಾರಿ ಶಾಲೆಯಲ್ಲಿ ಓದಿಯೂ ಐಎಎಸ್ ಪಾಸಾಗಬಹುದು ಎನ್ನಲ್ಲು ಅಲ್ಲಿದ್ದ ಸಾಧಕಿಯರೇ ಕನ್ನಡಿಯಾಗಿದ್ದರು.
ಸಾಧನೆ 'ಪಲ್ಲವಿ'ಸಿತು: ಆಂಧ್ರದ ಗುಂಟೂರು ಮೂಲದ ಪಲ್ಲವಿ ಆಕುರಾತಿ ಇಲ್ಲಿನ ಜೆಸ್ಕಾಂ ಎಂಡಿ. ತೆಲುಗು ಮಾಧ್ಯಮ ಸರ್ಕಾರಿ ಶಾಲೆಯಲ್ಲೇ ಓದಿದ ತಮ್ಮ ಅನುಭವ ಬಿಚ್ಚಿಟ್ಟ ಅವರು 6ನೇ ತರಗತಿಯಲ್ಲೇ ಐಎಎಸ್ ಆಗಬೇಕೆಂದು ಪಣತೊಟ್ಟು ಗುರಿ ತಲುಪುವವರೆಗೂ ವಿರಮಿಸಲಿಲ್ಲ. ದೂರ ಶಿಕ್ಷಣದಲ್ಲೇ ಪದವಿ ಪಡೆದೆ, ಐಎಎಸ್ ಮೊದಲ ಬಾರಿಗೆ 107ನೇ ರ್ಯಾಂಕ್ ಬಂತು. ಐಆರ್‌ಎಸ್ ಹುದ್ದೆ ಸಿಕ್ಕರೂ ಸಮಾಧಾನಿಯಾಗಲಿಲ್ಲ. ಮತ್ತೆ 3 ಬಾರಿ ಐಎಎಸ್ ಪರೀಕ್ಷೆ ಬರೆದೆ. ಕೊನೆ ಯತ್ನದಲ್ಲಿ 55ನೇ ರ್ಯಾಂಕ್ ಬಂತು, ಸತತ ಪರಿಶ್ರಮದಿಂದ ಸಾಧನೆ ಸಾಧ್ಯ ಎಂದರು ಪಲ್ಲವಿ.
ತೆಲುಗು ಮಾತೃಭಾಷೆಯಾದರೂ ಕನ್ನಡದವರೇ ಆಗಿರುವ ಪಲ್ಲವಿ ಈಗ ಕಾರಂತ, ಕುವೆಂಪು ಅವರ ಕಾದಂಬರಿಗಳನ್ನು ಓದುತ್ತಿದ್ದಾರೆ. ಬರುವ ದಿನಗಳಲ್ಲಿ ಕನ್ನಡ ಮೌಲಿಕ ಸಾಹಿತ್ಯ ಕೃತಿಗಳನ್ನು ತೆಲುಗು ಭಾಷೆಗೆ ತರ್ಜುಮೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಸಂಕಷ್ಟಗಳನ್ನೆಲ್ಲ ಮೆಟ್ಟಿ ನಿಂತ ಇಂದಕ್ಕ: ತಮ್ಮ ಬದುಕು, ದಢೂತಿ ದೇಹ, ಕುಳ್ಳ ಆಕಾರ, ಅವಿಭಕ್ತ ಸಂಸಾರದ ಹಲವು ಹಂತಗಳನ್ನೇ ನಗೆ ಉಕ್ಕಿಸಲು ಸಾಮಗ್ರಿಯಾಗಿಸಿಕೊಂಡ ಹಾಸ್ಯ ಕಲಾವಿದೆ ಇಂದೂಮತಿ ಸಾಲಿಮಠ ಬದುಕಲ್ಲಿ ತಂದೆ- ತಾಯಿಯಿಂದ ಕಲಿತ ಲೋಕಾನುಭವವೇ ತಮ್ಮನ್ನಿಂದು ಕನ್ನಡ ನಾಡಿನ ಹಾಸ್ಯ ಕಲಾವಿದೆಯಾಗಿಸಿದೆ ಎಂದರು. ಗಂಡನಿಂದ ಅಷ್ಟಾಗಿ ಸುಖ ದೊರಕಲಿಲ್ಲವಾದರೂ ತಾಯಿಯ ಲೋಕರೂಢಿ ಮಾತುಗಳೇ ಇಂದು ತಮಗೆ ದಾರಿದೀಪವಾಗಿವೆ ಎಂದರು.
ಗಟ್ಟಿ ಹೆಜ್ಜೆ ಇಟ್ರೆ ಹಿಂಬಾಲಿಸುವವರು ಹಲವರು..: ತೆಲುಗು ಮೂಲದ ನಂದಾರೆಡ್ಡಿ 30 ವರ್ಷಗಳ ಹಿಂದೆ ಮದುವೆಯಾಗಿ ಚಿಂಚೋಳಿಯ ಗರಗಪಳ್ಳಿ ಕುಗ್ರಾಮಕ್ಕೆ ಬಂದಾಗಿನಿಂದ ಈಚೆಗೆ ಜ್ಞಾನಸಂಗಮ ಪ್ರತಿಷ್ಠಾನ ಸ್ಥಾಪಿಸುವವರೆಗೂ ನಡೆದು ಬಂದ ದಾರಿಯನ್ನು ಹೇಳಿದಾಗ ಸೇರಿದ್ದವರು ದಂಗು. ಸಮಾಜ ಸೇವೆಗೆ ಹೆದರಬೇಕಿಲ್ಲ, ಗಟ್ಟಿಯಾಗಿ ಹೆಜ್ಜೆ ಇಟ್ಟಲ್ಲಿ ಹಿಂಬಾಲಿಸುವವರು ಹಲವರಾಗಿರುತ್ತಾರೆ. ನಾವಿಡುವ ಹೆಜ್ಜೆ ಸರಿಯಾಗಿರಬೇಕಷ್ಟೆ ಎಂದು ಜೀವನ ಅನುಭವ ಹಂಚಿಕೊಂಡರು.
ಹೆಂಗ್ಸರ ಬುದ್ಧಿ ಹೆಚ್ಚಾಗ್ಯದ್ರಿ..: ಆಳಂದದ ಗುಂಜ ಬಬಲಾದ್‌ನಲ್ಲಿ ಸಮುದಾಯದ ಮನವೊಲಿಸಿ 108 ಶೌಚಾಲಯ ನಿರ್ಮಾಣಕ್ಕೆ ಪ್ರೇರಣೆಯಾದವರು ನಂದಾದೇವಿ ಮಂಗೊಂಡಿ. ಚೆನ್ನಮ್ಮ ಮಹಿಳಾ ಸಂಘಟನೆಯೊಂದಿಗೆ ಊರಲ್ಲಿ ಬದಾಲಣೆಯ ಗಾಳಿ ಬೀಸುವಂತೆ ಮಾಡಿರುವ ನಂದಾದೇವಿ ಊರಲ್ಲಿ ಜಾಗೃತಿ ನಂದಾದೀಪ ಬೆಳಗುವಂತೆ ಮಾಡಿದವರು.
ನಿಸರ್ಗ ಸ್ನೇಹಿ ಬಯೋಗ್ಯಾಸ್ ಬಳಕೆಯಲ್ಲಿ ಅವರು ಎತ್ತಿದ ಕೈ. ಹಳ್ಳಿಯ ಜನರೆಲ್ಲರೂ ತಮ್ಮಂತೆಯೇ ಪರಿಸರ ಸ್ನೇಹಿ ಉಪಕರಣಗಳನ್ನು ಬಳಸುವಂತೆ ಮಾಡಿ ಗುಂಜ ಬಬಲಾದ ಗ್ರಾಮ ಜಿಲ್ಲೆಯ ಭೂಪಟದಲ್ಲಿ ಮಿಂಚುವಂತೆ ಮಾಡಿದವರು.
ಹೆಂಗಸರು ಅಂದ್ರ ಕೀಳಾಗಿ ಕಾಣಬಾರ್ದು. ಗಂಡಸರು ಅವರಿಗೂ ಅವಕಾಶ ಕೊಟ್ಟು ನೋಡಬೇಕು. ಆಗ ಬರೋಬ್ಬರಿ ಸಾಧನೆ ಮಾಡ್ತೀವಿ ಅಂತ ನಂದಾ ಹೇಳಿದ ಮಾತು ಸರ್ವರಿಗೂ ಹಿಡಿಸಿತು.
ಕಲಾವಿದರು ಅಂದ್ರೆ ಯಾಕ್ ಹೀಗೆ?: ರಂಗ ಕಲಾವಿದರಂದ್ರ ಜನ ಅದ್ಯಾಕೆ ಕೀಳಾಗಿ ಕಾಣ್ತಾರೋ ಅಂತ ಬೇಸರ ಹೊರಹಾಕಿದವರು ರಾಜಮ್ಮ ಹೆಗಡೆ. ಅನಕ್ಷರಸ್ಥೆಯಾದರೂ ರಂಗಕಲೆಯನ್ನೇ ಮೈಗೂಡಿಸಿಕೊಂಡು ಬಂದಿರುವ ರಾಜಮ್ಮ ರಂಗಕ್ಕೆ ಹಿಂದಿನಂತೆ ಪ್ರೋತ್ಸಾಹ ಈಗಿಲ್ಲ. ಮಕ್ಕಳನ್ನು ಈ ರಂಗದಲ್ಲೇ ಮುಂದುವರಿಸುವ ಆಸಕ್ತಿ ತಮಗಿಲ್ಲ ಎಂದರು.
ಟೀವಿ ಬಂದು ರಂಗಕಲೆಯನ್ನೇ ಕೊಂದು ಹಾಕಿದೆ. ಕಲಾವಿದರು ಕಷ್ಟದಲ್ಲಿದ್ದಾರೆ. ಸರ್ಕಾರ ಸಹಾಯ ಮಾಡಬೇಕೆಂದು ಹೇಳುತ್ತ ತಾವು ರಂಗದಲ್ಲೇ ಅದ್ಹೇಗೆ ಬದುಕಿನ ನಾಟಕ ಮುಂದುವರಿಸಿದ್ದೇನೆಂಬುದನ್ನು ಬಿಚ್ಚಿಟ್ಟರು. ಸಂಗೊಳ್ಳಿ ರಾಯಣ್ಣ, ಎಚ್ಚರ ತಂಗಿ ಎಚ್ಚರ ನಾಟಕಗಳ 2 ಸಂಭಾಷಣೆಗಳನ್ನು ಹೇಳಿ ಗಮನ ಸೆಳೆದರು.
ಪುಷ್ಪಕ್ಕಗೆ ಧ್ವನಿಯೇ ಆಧಾರ: ತಮ್ಮ ಧ್ವನಿಯಿಂದಲೇ ಸಾಧನೆ ಶಿಖರ ಹತ್ತಿದ ಗುಲ್ಬರ್ಗ ಬಾನುಲಿ ಕೇಂದ್ರದ ನಿವೃತ್ತ ಉದ್ಘೋಷಕಿ ಪುಷ್ಪಾ ಬೆಟಗೇರಿ, ತಮ್ಮ 39 ವರ್ಷಗಳ ಉದ್ಘೋಷಕಿ ವೃತ್ತಿಯ ಮಜಲುಗಳನ್ನು ವಿವರಿಸುತ್ತ ಸಾಧನೆಗೆ ಸಹೋದ್ಯೋಗಿಗಳು, ಪತಿ, ಮನೆಯವರು, ನೆರೆಯವರು ಅದ್ಹೇಗೆ ಬಲ ತುಂಬಿದರು, ಬೆಂಬಲವಾಗಿ ನಿಂತರು ಎಂಬುದನ್ನು ವಿವರಿಸುತ್ತ ಸಾಧನೆ ಎಂಬುದು ಒಂದೇ ದಿನದಲ್ಲಿ ಕೈಗೂಡುವಂತಹದ್ದಲ್ಲ, ಅದಕ್ಕೇ ಪರಿಶ್ರಮ ಅಗತ್ಯ ಎಂದರು.
ನೇರ ಪ್ರಸಾರದ ಈ ಕಾರ್ಯಕ್ರಮದಲ್ಲಿ ವಿಲಾಸವತಿ ಖೂಬಾ, ಡಾ. ವಿಜಯಲಕ್ಷ್ಮೀ ದೇಶಮಾನೆ, ರಾಯಚೂರಿನ ಲಕ್ಷ್ಮೀದೇವಿ ಶಾಸ್ತ್ರಿ, ಶಾಂತಿ ದೇಸಾಯಿ, ತಬಲಾ ವಾದಕಿ ರಾಜಶ್ರೀ ಸೇರಿದಂತೆ ಸಂಗೀತ ಕಲಾವಿದರಿದ್ದರು. ಕಾರ್ಯಕ್ರಮ ಮುಖ್ಯಸ್ಥೆ ಅಂಜನಾ ಯಾತನೂರ್ ಉಸ್ತುವಾರಿಯಲ್ಲಿನ ಈ ವಿಶಿಷ್ಟ ಕಾರ್ಯಕ್ರಮವನ್ನು ಸುನಂದಾ ಮೂರ್ತಿ ನಿರ್ಮಿಸಿ ಪ್ರಸ್ತುತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

