ಬಿಜೆಪಿ ಸರ್ಕಾರದಿಂದ ಕೋಟಿ ಕೋಟಿ ಲೂಟಿ
ಕನ್ನಡಪ್ರಭ ವಾರ್ತೆ ದೇವದುರ್ಗ ಮಾ.14
ಕಳೆದ ಅವಧಿಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಜನರ ಕೋಟಿ ಕೋಟಿ ರುಪಾಯಿ ಕೊಳ್ಳೆ ಹೊಡೆದಿದ್ದೇ ಬಹುದೊಡ್ಡ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಲೇವಡಿ ಮಾಡಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತ ನಿರ್ಮಾಣ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಂತರ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಬಹುತೇಕ ಸಚಿವರು ಅಕ್ರಮದಲ್ಲಿ ಭಾಗಿಯಾಗಿ ಜೈಲು ಕಂಡಿದ್ದಾರೆ. ಇದಕ್ಕಿಂತ ಸಾಧನೆ ಬಿಜೆಪಿಗೇನಿದೆ ಎಂದು ಟೀಕಿಸಿದರು.
ವಿಶ್ವಾಸ ಕಳೆದುಕೊಂಡ ಬಿಜೆಪಿ: ಬಿಜೆಪಿ ತೊರೆದಿದ್ದ ಎಲ್ಲರೂ ಮತ್ತೆ ಈ ಚುನಾವಣೆಗೆ ಒಂದಾಗುತ್ತಿದ್ದಾರೆ. ಆದರೆ ಅವರೆಲ್ಲರೂ ಮತದಾರರ ನಂಬಿಕೆ ಕಳೆದುಕೊಂಡಿದ್ದಾರೆ. ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಯುಪಿಎ ಸರ್ಕಾರದ ಸಾಧನೆ ಹಾಗೂ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಕಳೆದ 9 ತಿಂಗಳ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ವಿವಿಧ ಕಾರ್ಯಕ್ರಮಗಳನ್ನು ಜನತೆ ಮೆಚ್ಚಿಕೊಂಡಿದ್ದು ಕಾಂಗ್ರೆಸ್ಗೆ ಬೆಂಬಲಿಸಲಿದ್ದಾರೆ ಎಂದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂದು ಪಾದಯಾತ್ರೆ ಕೈಗೊಂಡಿದ್ದು ಆಗ ನೀಡಿದ ಭರವಸೆಯಂತೆಯೇ ರಾಜ್ಯ ಸರ್ಕಾರ ಕೃಷ್ಣಾ ಯೋಜನೆಯ ನೀರಾವರಿ ಸೌಲಭ್ಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ. 11 ಸಾವಿರ ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿದರು.
ದೇವೇಗೌಡರು ಆತ್ಮಾವಲೋಕನ ಮಾಡಿಕೊಳ್ಳಲಿ: ಬಡವರ, ರೈತರ, ಕೃಷಿ ಕೂಲಿಕಾರರ ಪರವಾಗಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರ ಅಲೆಯಿದ್ದು ರಾಜ್ಯದ 28 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಹೈ.ಕ.ಕ್ಕೆ 371ನೇ ಕಲಂ ಅಡಿ ವಿಶೇಷ ಸ್ಥಾನಮಾನ ನೀಡಲು ಆಗಿನ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮನವಿ ಮಾಡಿದಾಗ ಬಿಜೆಪಿ ನಾಯಕರು ವಿರೋಧಿಸಿದ್ದರು ಎಂದ ಅವರು, ಕೇಂದ್ರದ ಯುಪಿಎ ಸರ್ಕಾರ ಈ ಸ್ಥಾನಮಾನ ನೀಡುವ ಕಾರ್ಯ ಮಾಡಿದೆ ಎಂದರು.
ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಬಿ.ವಿ. ನಾಯಕ ಯುವಕರಾಗಿದ್ದು, ರಾಹುಲ್ಗಾಂಧಿ ಅವರ ಕನಸಿನಂತೆ ಪಕ್ಷ ಯುವಕರಿಗೆ ಆದ್ಯತೆ ಪಕ್ಷ ನೀಡಿದೆ ಎಂದ ಅವರು, ಚುನಾವಣೆಯಲ್ಲಿ ಪಕ್ಷಕ್ಕೆ ಗೆಲವು ತಂದುಕೊಡುವಂತೆ ಮನವಿ ಮಾಡಿದರು. ಶಾಸಕರಾದ ವೆಂಕಟೇಶ ನಾಯಕ, ಹಂಪನಗೌಡ ಬಾದರ್ಲಿ, ಯಾದಗಿರಿಯ ಶಾಸಕ ಎ.ಬಿ. ಮಾಲಕರೆಡ್ಡಿ, ಮಾಜಿ ಶಾಸಕ ಎನ್.ಎಸ್. ಬೋಸರಾಜು ಹಾಗೂ ಪಕ್ಷದ ವೀಕ್ಷಕ ಭೂಪತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎ.ವಸಂತಕುಮಾರ, ಅಭ್ಯರ್ಥಿ ಬಿ.ವಿ. ನಾಯಕ ಮಾತನಾಡಿದರು. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕ ರಾಜಾ ರಾಯಪ್ಪ ನಾಯಕ, ಬಸವರಾಜ ಪಾಟೀಲ್ ಇಟಗಿ, ರಾಮಣ್ಣ ಇರಬಗೇರಾ, ಭೀಮನಗೌಡ ನಾಗಡದಿನ್ನಿ, ಬಸಯ್ಯ ಶಾಖೆ, ಎ. ರಾಜಶೇಖರ ನಾಯಕ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

