ಕಾಂಗ್ರೆಸ್, ಬಿಜೆಪಿಗೆ ತಕ್ಕ ಶಾಸ್ತಿ
ಕ.ಪ್ರ. ವಾರ್ತೆ ರಾಯಚೂರು ಮಾ.15
ಬಂಡವಾಳಶಾಹಿಗಳ ಪರ ನಿಲುವು ಹೊಂದಿರುವ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿರುವ ಸಿಪಿಎಂ ಪಕ್ಷವು, ರಾಜ್ಯದ ಒಟ್ಟು 5 ಕಡೆ ಎಡಪಕ್ಷಗಳು ಕಣಕ್ಕಿಳಿಯಲಿವೆ ಎಂದು ಹೇಳಿದೆ.
ನಗರದಲ್ಲಿ ಶನಿವಾರ ಸಿಪಿಎಂ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯ ಯು.ಬಸವರಾಜ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕಾಂಗ್ರೆಸ್ ಮತ್ತು ಬಿಜೆಪಿ ಬಂಡವಾಳಶಾಹಿಗಳ ಪರ ನಿಲುವು ಹೊಂದಿವೆ. ಜನಸಾಮಾನ್ಯರ ವಿರೋಧಿ ನೀತಿಗಳನ್ನೇ ಇದುವರೆಗೆ ಜಾರಿಗೆ ತಂದಿವೆ ಎಂದು ಟೀಕಿಸಿದರು.
ಭ್ರಾಷ್ಟಾಚಾರದಲ್ಲೂ ಪೈಪೋಟಿ!: ಎರಡೂ ಪಕ್ಷಗಳು ಭೂ ಮಾಫಿಯಾ, ಗಣಿ ಮಾಫಿಯಾಗಳಿಗೆ ಪೂರಕವಾಗಿ ನೀತಿ ರೂಪಿಸಿವೆಯೇ ವಿನಃ ಬಡವರು, ಕೂಲಿಕಾರ್ಮಿಕರಿಗೆ ನೆರವಾಗುವಂಥ ಯಾವುದೇ ನೀತಿಗಳನ್ನು ಜಾರಿಗೆ ತಂದಿಲ್ಲ. ಭ್ರಷ್ಟಾಚಾರದ ವಿಷಯದಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿಗಿಳಿದಿವೆ. ಅದರಿಂದಾಗಿ ದೇಶವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಕೈಗಾರಿಕೆಗಳ ಅಭಿವೃದ್ಧಿ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸುವ ಕಾರ್ಯ ಮಾಡಿವೆ. ಮುಂದೆಯೂ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳಿಗೆ ಮತದಾರರು ತಕ್ಕಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
5 ಕ್ಷೇತ್ರಗಳಲ್ಲಿ ಎಡಪಕ್ಷಗಳ ಪ್ರಚಾರ: ಲೋಕಸಭೆ ಚುನಾವಣೆಗೆ ಸಿಪಿಎಂ ಪಕ್ಷವು ಚಿಕ್ಕಬಳ್ಳಾಪುರ ಹಾಗೂ ಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲಿದ್ದು, ಇನ್ನುಳಿದಂತೆ ಫಾರ್ವರ್ಡ್ ಬ್ಲಾಕ್ ಒಂದು ಸ್ಥಾನದಲ್ಲಿ ಹಾಗೂ ಸಿಪಿಐ ಎರಡು ಸ್ಥಾನದಲ್ಲಿ ಸ್ಪರ್ಧಿಸಲಿವೆ. ಎಡಪಕ್ಷಗಳು ಈ ಐದೂ ಕ್ಷೇತ್ರಗಳಲ್ಲಿ ಒಗ್ಗೂಡಿ ಪ್ರಚಾರ ಕೈಗೊಳ್ಳಲಿದ್ದು, ಪರ್ಯಾಯ ರಾಜಕೀಯ ಶಕ್ತಿಯಾಗಿ ಮತದಾರರ ಸೆಳೆಯುವ ಕಾರ್ಯ ಮಾಡಲಾಗುತ್ತದೆ ಎಂದರು.
ಮಂಗಳೂರಿನಲ್ಲಿ ಯಾದವಶೆಟ್ಟಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಶ್ರೀರಾಮರೆಡ್ಡಿ ಸ್ಪರ್ಧೆಗಿಳಿಯಲಿದ್ದಾರೆಂದ ಅವರು, ಎಡಪಕ್ಷಗಳು ದೇಶದಲ್ಲಿ ಅತೀ ದೊಡ್ಡ ಪರ್ಯಾಯ ರಾಜಕೀಯ ಶಕ್ತಿಗಳಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.
ತೃತೀಯ ರಂಗದಲ್ಲಿ ಆಸಕ್ತಿ ತೋರಿಲ್ಲ: ಎಡಪಕ್ಷಗಳು ತೃತೀಯ ರಂಗ ರಚನೆ ಕಾರ್ಯದಲ್ಲಿ ಆಸಕ್ತಿ ತೋರಿಲ್ಲ. ಜೆಡಿಎಸ್, ಎಐಎಡಿಎಂಕೆ ಪಕ್ಷದೊಂದಿಗೆ ತೃತೀಯ ರಂಗ ರಚನೆಗೆ ಮುಂದಾಗಿಲ್ಲ ಎಂದ ಅವರು, ಸಿಪಿಎಂ ಮತದಾರರ ಜಾಗೃತಿ ಕಾರ್ಯ ಮಾಡಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಮಲ್ಲಯ್ಯ ಜಾಲಹಳ್ಳಿ, ಕೆ.ಜಿ.ವೀರೇಶ್, ಡಿ.ಎಸ್.ಶರಣಬಸವ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

