ಇಂದಿನಿಂದ ಪಂಚಮ ವೇದಾಂತ ಸಮ್ಮೇಳನ
ರಾಯಚೂರು: ತಾಲೂಕಿನ ಮಟಮಾರಿ ಗ್ರಾಮದ ಶಿವಾನಂದ ಮಠದಲ್ಲಿ ಮಾ.17 ರಿಂದ ಮೂರು ದಿನಗಳ ವಾರ್ಷಿಕೋತ್ಸವ, ಪಂಚಮ ವೇದಾಂತ ಸಮ್ಮೇಳನ ಹಾಗೂ ಕೈವಲ್ಯ ಕಲ್ಪವಲ್ಲರಿ (ಭಾವ ಕುಸುಮಾವಳಿ) ಗ್ರಂಥ ಬಿಡುಗಡೆ ಮತ್ತು ಮಹಾತ್ಮರ ತುಲಾಭಾರ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ಜ್ಞಾನಾನಂದ ಶ್ರೀಗಳು ಹೇಳಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.17 ರಿಂದ ನಿತ್ಯ ಬೆಳಗ್ಗೆ 4ಕ್ಕೆ ಜಪಯಜ್ಞ 5ಕ್ಕೆ ಕಾಶಿ ಶಿವಲಿಂಗಕ್ಕೆ ಅಭಿಷೇಕ, 6ಕ್ಕೆ ಯೋಗಾಸನ ತರಬೇತಿ, ಸಂಜೆ 6 ರಿಂದ 7ರವರೆಗೆ ಸಂಗೀತ ಕಾರ್ಯಕ್ರಮ ಸಂಜೆ 7ರಿಂದ ಸರ್ವ ಮಹಾತ್ಮರಿಂದ ಆಧ್ಯಾತ್ಮಾಮೃತಧಾರೆ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ವಿವಿಧ ಗೋಷ್ಠಿಗಳು: ಮಾ.17 ರಂದು ಬೆಳಗ್ಗೆ 7.30ಕ್ಕೆ ಭಕ್ತಿಯಿಂದಲೇ ಮುಕ್ತಿ ಎಂಬ ಸರ್ವಜ್ಞರ ವಚನ ಕುರಿತು ಚಿಂತನಾಗೋಷ್ಠಿ ನಡೆಯಲಿದ್ದು, ಬಿಚ್ಚಾಲಿ-ಮಟಮಾರಿ-ಗಬ್ಬೂರು ಮಠದ ವೀರಭದ್ರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಜಮಖಂಡಿಯ ಸಹಜಾನಂದ ಅವಧೂತರು ಸಾನ್ನಿಧ್ಯ ವಹಿಸಲಿದ್ದು, ನೇತೃತ್ವವನ್ನು ಶಾಂತಾಶ್ರಮದ ನಿಜಾನಂದ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಗದಗಿನ ಅಕ್ಕಮಹಾದೇವಿ ತಾಯಿ ವಹಿಸಲಿದ್ದಾರೆಂದರು.
ಅದೇ ದಿನ ಸಂಜೆ 6ಕ್ಕೆ ನಿಮ್ಮ ಚರಣಕಮಲದೊಳಗಾನು ತುಂಬಿ ಎಂಬ ಬಸವಣ್ಣನ ರಚನೆ ಕುರಿತು ಗೋಷ್ಠಿ ಆಯೋಜಿಸಲಾಗಿದೆ. ಗೋಷ್ಠಿಯಲ್ಲಿ ಗುಡೇಬಲ್ಲೂರಿನ ಶಿವಾನಂದ ಮಹಾರಾಜರು, ಗಾರಲದಿನ್ನಿ ಮೌನೇಶ್ ಮಹಾರಾಜರು, ಅರಳೆಬಂಡೆ ಮಠದ ಮರಿಸ್ವಾಮಿ, ಗುರುನಾಥ್ ಮಹಾರಾಜ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ವಿಚಾರ ಮಂಡನೆ: ಮಾ.18 ರಂದು ಬೆಳಗ್ಗೆ 7.30ಕ್ಕೆ ನಡೆಯುವ ಗೋಷ್ಠಿಯಲ್ಲಿ ಮಾಡಲಿಲ್ಲವೇ ತಪವ ಮಾಡಲಿಲ್ಲವೇ ಎಂಬ ಕೈವಲ್ಯ ಪದ್ಧತಿಯ ಕುರಿತು ವಿಚಾರ ಮಂಡನೆ ಕಾರ್ಯಕ್ರಮ ನಡೆಯಲಿದ್ದು, ಗೋಕಾಕ್ನ ಸಹಜಾನಂದ ಸ್ವಾಮೀಜಿ, ಬಾಗಲಕೋಟೆಯ ದಯಾನಂದ ಸರಸ್ವತಿ ಶ್ರೀ, ಭೀಮಾನಂದಶ್ರೀ, ಚಿನ್ಮಯಾನಂದಶ್ರೀ ಪಾಲ್ಗೊಳ್ಳಲಿದ್ದಾರೆಂದರು.
ಅದೇ ದಿನ ಸಂಜೆ 6ಕ್ಕೆ ಧನ್ಯೋ ಗೃಹಸ್ಥಾಶ್ರಮಿ ಎಂಬ ಸುಭಾಷಿತ ಕುರಿತ ಗೋಷ್ಠಿಯಲ್ಲಿ ಅರಳೆಬಂಡೆ ಮಠಶ್ರೀ, ಹನುಮಂತಪ್ಪ ಶ್ರೀ, ನಾರಾಯಣ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಶ್ರೀಗಳ ಉಪಸ್ಥಿತಿ: ಮಾ.19ರಂದು ಬೆಳಗ್ಗೆ 7.30ಕ್ಕೆ ಕೊಟ್ಟಿದ್ದು ಕೆಟ್ಟಿತೆನಬೇಡ ಎಂಬ ಸರ್ವಜ್ಞರ ವಚನ ಹಾಗೂ ಪರತರಮುಕುತಿದೋರುವ ಶಾಸ್ತ್ರವನ್ನು ಎಂಬ ಕೈವಲ್ಯಪದ್ಧತಿಯ ಗೋಷ್ಠಿಯಲ್ಲಿ ಬಿಜಾಪುರದ ಅಭಿನವ ಶಿವಪುತ್ರ ಶ್ರೀ, ಬಾಗಲಕೋಟೆಯ ದಯಾನಂದಶ್ರೀ, ಸಹಜಾನಂದಶ್ರೀ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಭಾಗವಹಿಸಲಿದ್ದಾರೆಂದರು.
ನಂತರ ನಡೆಯುವ ಕಾರ್ಯಕ್ರಮದಲ್ಲಿ ಶಾಂತಾಶ್ರಮ ಹುಬ್ಬಳ್ಳಿಯ ಅಭಿನವ ಶಿವಪುತ್ರಶ್ರೀ ಅವರು ಸರ್ಪಭೂಷಣ ಶಿವಯೋಗಿಗಳು ರಚಿಸಿದ ಕೈವಲ್ಯ ಕಲ್ಪವಲ್ಲರಿ ಎಂಬ ಗ್ರಂಥಕ್ಕೆ ರಚಿಸಿದ ಭಾವ ಕುಸುಮಾವಳಿ ಎಂಬ ಟೀಕಾ ತಾತ್ಪರ್ಯ ಗ್ರಂಥ ಬಿಡುಗಡೆ ಹಾಗೂ ತುಲಾಭಾರ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಶ್ರೀಮಠದ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಮೌನೇಶ್ ಮಹಾರಾಜರು, ನಾಗೇಂದ್ರಪ್ಪ ಮಟಮಾರಿ, ಮಲ್ಲಿಕಾರ್ಜುನ ಏಗನೂರು, ಮಾರುತಿ ಬಡಿಗೇರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

