ಶರಣರಿಂದ ಸಾಮಾಜಿಕ ಸಮಾನತೆಗೆ ಪ್ರಯತ್ನ
ದೇವದುರ್ಗ: ಶರಣರು ಸಾಹಿತ್ಯದ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದ್ದರು ಎಂದು ಉಪನ್ಯಾಸಕ ಗೋವಿಂದರಾಜ ಬಾರಿಕೇರಿ ತಿಳಿಸಿದರು.
ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಲಿಂ. ಶಾಂತಮ್ಮ ಜಿ.ಕಲ್ಯಾಣ, ಲಿಂ. ಶೆಟ್ಟಿ ಅಮರಮ್ಮ ಸೊಲಬಣ್ಣ ಜಾಲಹಳ್ಳಿ, ಲಿಂ. ವೀರಣ್ಣ ಬಳೆ ನ್ಯಾಯವಾದಿಗಳು ಸ್ಮಾರಕ ಶರಣ ಸಾಹಿತ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಶರಣ ಸಾಹಿತ್ಯದಲ್ಲಿ ಕಾಯಕಕ್ಕೆ ಹೆಚ್ಚಿನ ಗೌರವವನ್ನು ನೀಡಲಾಗುತ್ತಿತ್ತು. ಪುರುಷ ಮತ್ತು ಮಹಿಳೆಯರ ಮಧ್ಯೆ ಭೇದ- ಭಾವವಿರಕೂಡದು ಎಂಬ ಚಿಂತನೆಯೊಂದಿಗೆ ಸಮಾಜದಲ್ಲಿ ಸಮಾನತೆಯ ಜಾರಿಯಾಗಬೇಕೆಂದು ಶರಣರು ಆಗಿನ ಕಾಲದಲ್ಲಿ ಪ್ರತಿಪಾದಿಸಿದ್ದರು ಎಂದರು.
ವೇದಾಗಮನ ತಿರಸ್ಕರಿಸಿದ್ದ ಶರಣರು: ವಚನ ಸಾಹಿತ್ಯವು ಜೀವನದ ಕ್ರಮವನ್ನು ತಿಳಿಸುವಂತದ್ದಾಗಿದೆ. ವಚನ ಸಾಹಿತ್ಯದಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ, ಪ್ರೀತಿಸುವ ಸಂಸ್ಕೃತಿಯನ್ನು ಕಾಣಬಹುದಾಗಿದೆ. 12ನೇ ಶತಮಾದಲ್ಲಿ ವೇದಾಗಮಗಳು ಜನಸಾಮಾನ್ಯರನ್ನು ವಂಚಿಸಿದವು ಎಂದು ಶರಣರು ತಿರಸ್ಕರಿಸಿದ್ದರು. ಆದರೆ 21ನೇ ಶತಮಾನದಲ್ಲಿರುವ ನಮಗೆ ಅವುಗಳ ಹೆಸರನ್ನು ಉಚ್ಚರಿಸಲಾಗುತ್ತಿಲ್ಲ. ವಿರೋಧಿಸುವುದು ದೂರದ ಮಾತಾಗಿದೆ ಎಂದು ಹೇಳಿದರು.
ನಾಡಿನಲ್ಲಿ ದೇವರ ಹೆಸರಿನಲ್ಲಿ ಶೋಷಣೆಯಾಗುತ್ತಿದೆ. ಶರಣರು ಬಹುದೇವೋಪಾಸನೆಯನ್ನು ತಿರಸ್ಕರಿಸಿ, ಏಕದೇವೋಪಾಸನೆಗೆ ಹೆಚ್ಚು ಒತ್ತುಕೊಟ್ಟಿದ್ದರು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಕೂಡಾ ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ, ದೇವದಾಸಿ ಪದ್ಧತಿ ಜೀವಂತವಾಗಿರಿಸಿವುದು ಸಮಾಜದ ಮೌಢ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಶರಣರ ಹಾದಿಯಲ್ಲಿ ನಡೆಯಿರಿ: ಶರಣರು ನುಡಿದಂತೆ ನಡೆದ ರೀತಿಯಲ್ಲಿ ಇಂದಿನ ದಿನಮಾನದಲ್ಲಿ ಎಲ್ಲರೂ ತಮ್ಮ ಬದುಕನ್ನು ಕಟ್ಟಿಕೊಂಡರೆ ಸಮಾಜದಲ್ಲಿ ಸಮಾನತೆ, ಶಾಂತಿ-ಸೌಹಾರ್ದತೆ ಕಾಣಬಹುದಾಗಿದೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ವಹಿಸಿದ್ದರು. ಗುಲ್ಬರ್ಗದ ಹಾಸ್ಯ ಕಲಾವಿದ ಗುಂಡಪ್ಪ ಡಿಗ್ಗಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ದತ್ತಿ ದಾನಿಗಳಾದ ಶೆಟ್ಟಿ ವೀರಭದ್ರಪ್ಪ ಸಾಹು, ಜಿ.ಪಂಪಣ್ಣ, ನಾಗರತ್ನ ಎಲ್.ಇಂಡೆ, ಕಸಾಪ ಅಧ್ಯಕ್ಷ ನರಸಿಂಗರಾವ್ ಸರಕೀಲ್, ಮುಖ್ಯ ಅತಿಥಿಗಳಾಗಿ ಮುಖ್ಯಗುರುಗಳಾದ ಬಾಲಪ್ಪ ಮಾತ್ಪಳ್ಳಿ, ಉಪನ್ಯಾಸಕರಾದ ಮುನಿಯಪ್ಪ ನಾಗೋಲಿ, ನಿವೃತ್ತ ಶಿಕ್ಷಕಿ ಗಂಗಮ್ಮ, ಬಾಲಕೃಷ್ಣ ದೋಟಿಹಾಳ, ಪುರಸಭೆ ಸದಸ್ಯ ವೆಂಕಟೇಶ ಮಕ್ತಲ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

