ಸಂಭ್ರಮದ ಹೋಳಿ ಆಚರಣೆಗೆ ನಗರ ಸಜ್ಜು
ರಾಯಚೂರು: ನಗರ ಸೇರಿದಂತೆ ಜಿಲ್ಲಾದ್ಯಂತ ಬಣ್ಣದ ಹಬ್ಬ ಹೋಳಿ ಆಚರಣೆಗೆ ಭರದ ಸಿದ್ಧತೆಗಳು ಆರಂಭಗೊಂಡಿದ್ದು, ಭಾನುವಾರ ರಾತ್ರಿ ಕಾಮದಹನದ ನಂತರ ಸೋಮವಾರ ಬೆಳಗ್ಗೆ ಹೋಳಿ ಆಚರಣೆ ನಡೆಯಲಿದೆ. ಚುನಾವಣೆ ಸಮಯ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಜಾರಿಯಲ್ಲಿರುವುದರಿಂದ ವಿದ್ಯಾರ್ಥಿಗಳು ಆತಂಕದಲ್ಲಿಯೇ ಹೋಳಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ನಗರದ ಅನೇಕ ಅಂಗಡಿಗಳಲ್ಲಿ ವಿವಿಧ ಬಣ್ಣಗಳ ಮಾರಾಟ ಭರದಿಂದ ಸಾಗಿದ್ದು, ಸೋಮವಾರ ಮಾರಾಟ ತೀವ್ರತೆ ಪಡೆಯಲಿದೆ. ನಗರದ ಕೆಲ ಭಾಗಗಳಲ್ಲಿ ಕಾಮದಹನದ ದಿನವಾದ ಭಾನುವಾರವೇ ರಜಾ ದಿನ ಕಳೆದುಕೊಳ್ಳಲು ಇಷ್ಟವಿಲ್ಲದೇ ಅನೇಕರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದ್ದು ಅಲ್ಲಲ್ಲಿ ಕಂಡುಬಂದಿತು. ಅದರಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಬೇಕಾದವರು ಭಾನುವಾರವೇ ಬೈಕ್ನಲ್ಲಿ ನಗರದೆಲ್ಲೆಡೆ ಸಂಚರಿಸಿ ಬಣ್ಣ ಹಚ್ಚಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಪ್ರಕಟಣೆ: ನಗರದಲ್ಲಿ ಮಾ.17 ರಂದು ಹೋಳಿ ಆಚರಣೆಯ ಹಿನ್ನೆಲೆಯಲ್ಲಿ ನಾಗರಿಕರಿಗೆ ನೀರಿನ ಅನುಕೂಲ ಕಲ್ಪಿಸಲು ನಗರಸಭೆಯೂ ಸಿದ್ಧವಾಗಿದ್ದು, ಅಂದು ಮಧ್ಯಾಹ್ನ 12ರ ನಂತರವೇ ನೀರೊದಗಿಸುವುದಾಗಿ ತಿಳಿಸಿದೆ. ಒಟ್ಟಾರೆಯಾಗಿ ನಗರ ಸೇರಿದಂತೆ ಜಿಲ್ಲಾದ್ಯಂತ ಸೋಮವಾರ ರಂಗುರಂಗಿನ ಹೋಳಿ ಸಂಭ್ರಮಾಚರಣೆ ನಡೆಯಲಿದೆ.
ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಲಹೆ
ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪ್ನ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಲಿಂಗಾಧರ ಗುರುಸ್ವಾಮಿ ಮಾತನಾಡಿ, ಸರ್ಕಾರ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಉಚಿತ ಸೈಕಲ್, ಪಠ್ಯಪುಸ್ತಕ, ಕ್ಷೀರಭಾಗ್ಯ, ಬಿಸಿಯೂಟ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಅದರ ಜೊತೆಗೆ ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಬಿಸಿಯೂಟ ನೀಡಬೇಕು. ಅಡುಗೆದಾರರು ಬೇಜವಾಬ್ದಾರಿ ವಹಿಸದೇ ಯಾವುದೇ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು. ಶಾಲೆಯ ಮುಖ್ಯ ಶಿಕ್ಷಕ ಚಂದ್ರಮೌಳೇಶ್ವರ ಸ್ವಾಮಿ ಮಾತನಾಡಿ, ಮಕ್ಕಳು ಹೆಚ್ಚಿನ ರಜೆ ತೆಗೆದುಕೊಳ್ಳದೇ ಶಾಲೆಗೆ ನಿಯಮಿತವಾಗಿ ಹಾಜರಾಗುವ ಮೂಲಕ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ಶಾಲೆಗೆ ಹೋದರೂ, ಅಲ್ಲಿನ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಭವಿಷ್ಯತ್ತಿನ ಉನ್ನತ ಗುರಿ ಸಾಧಿಸುವಂತೆ ಕರೆ ನೀಡಿದರು. ಸಹ ಶಿಕ್ಷಕಿಯರಾದ ರಾಜೇಶ್ವರಿ, ಕೌಶರ್ ಸ್ಸುಲ್ತಾನ್, ಜ್ಯೋತಿ ಲಕ್ಷ್ಮಿ, ರುಖಿಯಾ ಭಾನು, ಮಾನಮ್ಮ ಮಾತನಾಡಿದರು. ಶಿಕ್ಷಕರಾದ ಪಿ. ವೆಂಕಟರಮಣ, ಪ್ರಕಾಶ ಹೂಗಾರ ಉಪಸ್ಥಿತರಿದ್ದರು. ಶಿಕ್ಷಕರಾದ ಮಲ್ಲಯ್ಯ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಡಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಗಂಗಮ್ಮ, ಅನುಸೂಯ ಅವರಿಗೆ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಅರಗಿನಮರಕ್ಯಾಂಪ್ ಶಾಲಾ ವಾರ್ಷಿಕೋತ್ಸವ
ಸಿಂಧನೂರು: ತಾಲೂಕಿನ ಅರಗಿನಮರಕ್ಯಾಂಪ್ನಲ್ಲಿ ಜ್ಞಾನಜ್ಯೋತಿ ಪಬ್ಲಿಕ್ ಶಾಲೆಯಲ್ಲಿ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಪಿ.ವೈ. ದಂಡಿನ್ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ಭವಿಷ್ಯ ರೂಪಿಸುವಂತೆ ಕರೆ ನೀಡಿದರು. ಸಂಸ್ಥೆ ಗೌರವಾಧ್ಯಕ್ಷ ಡಿ.ಎಚ್. ಕಂಬಳಿ ಸಮಾರಂಭ ಉದ್ಘಾಟಿಸಿ, ಪಾಲಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆಗ ಮಾತ್ರ ಅವರು ಮತ್ತಷ್ಟು ಸ್ಫೂರ್ತಿಗೊಂಡು ಓದಿನಲ್ಲಿ ಆಸಕ್ತಿ ಹೊಂದುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನೂತನ ಕಟ್ಟಡವನ್ನು ಬಿಎಸ್ಆರ್ ಮುಖಂಡ ಕೆ. ಕರಿಯಪ್ಪ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಸಪ್ಪ ಹ್ಯಾಟಿ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಭಾಗವಹಿಸಿದ್ದರು. ಸಾನ್ನಿಧ್ಯವನ್ನು ಅಂಕಲಿಮಠದ ಬಸವರಾಜ ಸ್ವಾಮಿ ವಹಿಸಿದ್ದರು. ಭೀರಪ್ಪ ಪೂಜಾರಿ, ಲಕ್ಷ್ಮಯ್ಯ ಕುರಿ, ಸುರೇಶ, ರಾಮಲಿಂಗಾ ರೆಡ್ಡಿ, ಪಂಪಾಪತಿ ನರೇಗಡದ, ಚಿನ್ನಸಾಬ, ರಾಮ ನಾಯಕ, ಪರಸಪ್ಪ ಬಿಂಗಿ, ನಿಂಗಪ್ಪ, ಅಂಬಣ್ಣ, ಕರಿಯಪ್ಪ ಎಂ, ಹನುಮಪ್ಪ ಕೆ., ದುರುಗಪ್ಪ ಬಿಂಗಿ, ನಿಂಗಮ್ಮ ಶಿಕ್ಷಕಿ, ಯು. ಶ್ರೀನಿವಾಸ, ಬಸಮ್ಮ ಇನ್ನಿತರರು ಉಪಸ್ಥಿತರಿದ್ದರು. ಕೌಸರ್ ಸ್ವಾಗತಿಸಿದರು. ಲಕ್ಷ್ಮೀ ವಂದಿಸಿದರು. ತಿಮ್ಮಣ್ಣ ನಿರೂಪಿಸಿದರು.
ರಕ್ತದಾನ ಮತ್ತು ತಪಾಸಣೆ ಶಿಬಿರ: ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಶಾಲಾ ಆವರಣದಲ್ಲಿ ಕಸ್ತೂರಿ ಕನ್ನಡಿಗರ ಜನಪರ ವೇದಿಕೆ, ಶ್ರೀಶಕ್ತಿ ರಕ್ತ ಭಂಡಾರ ಹಾಗೂ ಶಾಲೆಯ ಸಂಯುಕ್ತಾಶ್ರಯದಲ್ಲಿ ಉಚಿತ ರಕ್ತದಾನ ಹಾಗೂ ರಕ್ತ ಗುಂಪು ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 204 ಜನರ ರಕ್ತ ತಪಾಸಣೆ ನಡೆಸಿ ಗುಂಪು ತಿಳಿಸಲಾಯಿತು. 11 ಜನರು ರಕ್ತದಾನ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ಸಮಾರಂಭದ ಕೊನೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ ಮನಸೆಳೆದವು. ಜನಪದ, ಸಿನಿಮಾ ಹಾಡಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದಂತೆ, ನೆರೆದ ಪಾಲಕರು ಕರತಾಡನ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

