ರಾಯಚೂರು ಜಿಲ್ಲಾಡಳಿತಕ್ಕೆ ಚುನಾವಣೆ ಮಣ ಭಾರ
ಜಗನ್ನಾಥ ಆರ್. ದೇಸಾಯಿ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.17
ಚುನಾವಣೆ ಬಂತೆಂದರೆ ಸಾಕು ರಾಜಕೀಯ ನಾಯಕರಂತೆ ಜಿಲ್ಲಾಡಳಿತದ ಸಿಬ್ಬಂದಿ ಫುಲ್ ಬ್ಯುಸಿಯಾಗುತ್ತಾರೆ. ಜತೆಗೆ ಎಲ್ಲ ಇಲಾಖೆ ಸಿಬ್ಬಂದಿಗೂ ಚುನಾವಣೆಯದ್ದೇ ಆದ್ಯ ಕರ್ತವ್ಯ. ಸಮಯದ ಪರಿವೆಯೇ ಇಲ್ಲದೇ ದುಡಿದರೂ ಒಂದಿಲ್ಲೊಂದು ಎಡವಟ್ಟಾಗುವುದು ಸಹಜ. ಆದರೂ ಚುನಾವಣೆಯ ಭಾರ ಹೊರಬೇಕಾದವರು ವಿವಿಧ ಕಾರಣಗಳಿಗೆ ರಜೆ ಮೇಲೆ ತೆರಳಿರುವುದು ಜಿಲ್ಲಾಧಿಕಾರಿ ಮೇಲೆಯೇ ಭಾರ ಹೆಚ್ಚಿಸಿದೆ.
ಈಗಾಗಲೇ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಸಿಬ್ಬಂದಿಯ ಕೊರತೆಯಿದೆ. ಕೆಲ ಅವಶ್ಯ ಸೇವೆಗಳನ್ನು ನೀಡುವ ಇಲಾಖೆಗಳನ್ನು ಹೊರತುಪಡಿಸಿ ಇನ್ನುಳಿದ ಇಲಾಖೆಗಳವರನ್ನೇ ಚುನಾವಣೆಯ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಅವರಲ್ಲಿಯೇ ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಚುನಾವಣೆ ಸೇವೆ ಸಲ್ಲಿಸುವುದು ಆಗದೇ ರಿಯಾಯಿತಿ ಪಡೆಯುವುದೂ ನಡೆಯುತ್ತದೆ. ಅಂಥ ಸಂದರ್ಭದಲ್ಲಿ ಸಿಬ್ಬಂದಿ ಕೊರತೆ ಸಮಸ್ಯೆ ಕಾಡುತ್ತದೆ.
ಮೇಲಧಿಕಾರಿಗಳು ರಜೆ: ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಕಳೆದ ತಿಂಗಳಾಂತ್ಯದಿಂದಲೇ ಲೋಕಸಭೆ ಚುನಾವಣೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಿದ್ಧತೆಗೆ ತೊಡಗಿಸುವ ಕಾರ್ಯ ಮಾಡಿದ್ದಾರೆ. ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿನ ಅಧಿಕಾರಿಗಳು ಹಾಗೂ ತಾಲೂಕು ಕೇಂದ್ರಗಳಲ್ಲಿರುವ ವಿವಿಧ ಇಲಾಖೆಗಳ ಪ್ರಮುಖರು ಯಾವುದೇ ಕಾರಣಕ್ಕೆ ರಜೆ ಮೇಲೆ ತೆರಳುವಂತಿಲ್ಲ ಎಂಬ ಸ್ಪಷ್ಟ ಸೂಚನೆಯನ್ನೂ ನೀಡಿದ್ದಾರೆ.
ಹಾಗೆಯೇ ಅಧಿಕಾರಿಗಳಿಗೆ ಚುನಾವಣೆಯ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಟ್ಟಿದ್ದಾರೆ. ಅದರಂತೆ ಕೆಲ ಅಧಿಕಾರಿಗಳು ಕಾರ್ಯ ನಿರ್ವಹಿಸಲಾರಂಭಿಸಿದ್ದಾರೆ. ಆದರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಜೋತ್ಸ್ನಾ ಅವರು ಅವರ ತಾಯಿಯ ಅನಾರೋಗ್ಯದ ಹಿನ್ನೆಲೆ ರಜೆ ಪಡೆದು ತೆರಳಿದ್ದಾರೆ. ಮತದಾರರ ಜಾಗೃತಿ ಕಮಿಟಿಯ ಅಧ್ಯಕ್ಷರಾಗಿದ್ದ ಅವರು ಅನಿವಾರ್ಯವಾಗಿ ತೆರಳಿದ್ದಾರೆ.
ರಜೆ ಮೇಲೆ ಅಧಿಕಾರಿಗಳು: ಆದರೆ ಜಿಲ್ಲಾಡಳಿತದ ಮತ್ತೊಬ್ಬ ಅಧಿಕಾರಿ ಅಪರ ಜಿಲ್ಲಾಧಿಕಾರಿಯಾಗಿದ್ದ ಎಂ.ತಿಮ್ಮಪ್ಪ ಅವರು ನಗರಸಭೆಯಲ್ಲಿ ಪೌರಾಯುಕ್ತರಾಗಿದ್ದ ವೇಳೆ ನಡೆದ ತಡೆರಹಿತ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಯಲ್ಲಿನ ಅಕ್ರಮ ಆರೋಪದ ಹಿನ್ನೆಲೆ ರಜೆ ಮೇಲೆ ತೆರಳಿದ್ದಾರೆ. ರಾಯಚೂರು ನಗರಸಭೆಯ ಪೌರಾಯುಕ್ತ ಬಸಪ್ಪ ಅವರೂ ಅನಾರೋಗ್ಯದ ಕಾರಣ ಹೇಳಿ ದೀರ್ಘ ರಜೆ ಮೇಲೆ ತೆರಳಿದ್ದಾರೆ.
ನಗರಸಭೆಯಲ್ಲಿನ ಅಕ್ರಮಗಳ ಬಗ್ಗೆ ವಿವಿಧ ಸಂಘಟನೆಗಳು ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪಟ್ಟುಹಿಡಿದಿರುವುದರಿಂದ ಅದರಿಂದ ಪಾರಾಗಲು ಪೌರಾಯುಕ್ತ ಎಂ.ಬಸಪ್ಪ ಅವರು ರಜೆ ಮೇಲೆ ತೆರಳಿದ್ದಾರೆಂಬ ಆರೋಪಗಳೂ ಕೇಳಿಬಂದಿವೆ.
ಲಭ್ಯ ಸಿಬ್ಬಂದಿ ಮೇಲೆ ಹೆಚ್ಚುವರಿ ಹೊರೆ: ಜಿಲ್ಲಾ ಕೇಂದ್ರದಲ್ಲಿಯೇ ಇಬ್ಬರು ಹಿರಿಯ ಅಧಿಕಾರಿಗಳು ರಜೆ ಮೇಲೆ ತೆರಳಿರುವುದು ಜಿಲ್ಲಾಡಳಿತಕ್ಕೆ ಚುನಾವಣೆಯ ಕಾರ್ಯದಲ್ಲಿ ಸಂಕಷ್ಟ ತಂದಿದೆ. ಹಾಗಾಗಿ ಸದ್ಯ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹಾಗೂ ಪ್ರಭಾರಿ ಅಪರ ಜಿಲ್ಲಾಧಿಕಾರಿ ಉಮೇಶ್, ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಹಾಗೂ ಲಭ್ಯವಿರುವ ಸಿಬ್ಬಂದಿ ಮೇಲೆಯೇ ಹೆಚ್ಚುವರಿ ಹೊರೆ ಬಿದ್ದಿದೆ.
ಲಭ್ಯವಿರುವ ಸಿಬ್ಬಂದಿಯಿಂದಲೇ ಚುನಾವಣೆ ಕಾರ್ಯಗಳನ್ನು ಪೂರೈಸುವಂಥ ಅನಿವಾರ್ಯತೆಗೆ ಜಿಲ್ಲಾಡಳಿತ ಸಿಲುಕಿದ್ದು, ಚುನಾವಣೆ ಕಾರ್ಯವು ಜಿಲ್ಲಾಡಳಿತದ ಪಾಲಿಗೆ ಮಣಭಾರ ಎನಿಸತಡೊಗಿರುವುದಂತೂ ಸತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

