ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ
ಕನ್ನಡಪ್ರಭ ವಾರ್ತೆ ಹುಮನಾಬಾದ್ ಮಾ.17
ಪಟ್ಟಣದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ದಿನಾಂಕ ಘೋಷಣೆಯಾಗಿದ್ದು, ಅಧ್ಯಕ್ಷ ಸ್ಥಾನ ತನ್ನದಾಗಿಸಲು ತೆರೆಮರೆಯಲ್ಲಿ ಬಿರುಸಿನ ಕಸರತ್ತುಗಳು ನಡೆದಿವೆ.
ಕಾಂಗ್ರೆಸ್ಗೆ ಸ್ಪಷ್ಟ ಬಹುಮತವಿರುವುದರಿಂದ ಯಾವುದೇ ಅಡತಡೆಗಳು ಇಲ್ಲದಿದ್ದರೂ, ಪೈಪೋಟಿ ಮಾತ್ರ ಬಿರುಸಿನಿಂದ ಕೂಡಿದೆ. ಅಧ್ಯಕ್ಷ ಸ್ಥಾನ ಬಿಸಿಎ ಸ್ಥಾನಕ್ಕೆ ಮೀಸಲಿದೆ.
ವಾರ್ಡ್ 23ರ ಅಫಸರ್ಮಿಯ್ಯಾ, 22ರ ವಿನಾಯಕ್ ಯಾದವ್ ಇವರ ಮಧ್ಯೆ ನೇರ ಸ್ಪರ್ಧೆ ಇದ್ದರೂ, ಕಲಿಮುದ್ದಿನ್ ನೂರ್ ಕೂಡಾ ತಾವೂ ಏನು ಕಮ್ಮಿ ಇಲ್ಲ ಎನ್ನುವ ಹಾಗೆ ಪೈಪೋಟಿ ನಡೆಸಿದ್ದಾರೆ.
ಈಗಾಗಲೇ ಸದಸ್ಯರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಮಾ. 20ರಂದು ಚುನಾವಣೆ ನಡೆಯಲಿದೆ. 23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ 13 ಕಾಂಗ್ರೆಸ್, 10 ಜೆಡಿಎಸ್ ಅಭ್ಯರ್ಥಿಗಳಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ.
ಅಭಿಪ್ರಾಯ: ಪಟ್ಟಣದ ಶಿವನಗರ ಬಸವನಗರ ಬಡಾವಣೆಯಿಂದ ಪುರಸಭೆಯಿಂದ ಸತತ ಮೂರನೇ ಬಾರಿಗೆ ಆಯ್ಕೆಯಾದ ವಿನಾಯಕ್ ಯಾದವ್ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ಎಲ್ಲರ ಕೈಗೆ ನಿಲುಕುವಂತಹ ಸದಸ್ಯರಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಸಾಕಷ್ಟು ವರ್ಷಗಳಿಂದ ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತಾ ಬಂದಿರುವ ಅಫಸರ್ಮಿಯ್ಯಾ, ಶಾಸಕರ ನಿಕಟವರ್ತಿಯಾಗಿದ್ದಾರೆ. ಅಲ್ಲದೆ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಪುರಸಭೆಯ ಕಾರ್ಯಕ್ರಮಗಳ ಕುರಿತು ಸಾಕಷ್ಟು ಅರಿವು ಹೊಂದಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಸೌಕರ್ಯ ಮರೀಚಿಕೆ: ಜೊತೆಗೆ ಕಲಿಮೊದ್ದಿನ್ ನೂರ್ ಕೂಡಾ ಅಧ್ಯಕ್ಷ ಸ್ಥಾನ ಪಡೆಯಲು ಹವಣಿಸುತ್ತಿದ್ದಾರೆ. ಪಕ್ಷಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಶಾಸಕರೇ ಅಂತಿಮ ತೀರ್ಮಾನ ಕೈಗೊಳ್ಳುವರು ಎನ್ನುವ ಮಾತು ಕೇಳಿ ಬರುತ್ತಿದೆ.
ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಸಾರ್ವಜನಿಕರ ಬೇಡಿಕೆಗಳು ಹೆಚ್ಚಾಗುತ್ತಿವೆ. ಹೊಸ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳು ಇನ್ನು ಮರೀಚಿಕೆಯಾಗಿ ಉಳಿದಿವೆ. ಇಂತಹ ಹಲವು ಸಮಸ್ಯೆಗಳನ್ನು ಇತ್ಯರ್ಥಗೊಳ್ಳುವ ಮನೋಭಾವನೆ ಹೊಂದಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಎದುರಿಸುವ ಅಭ್ಯರ್ಥಿಯು ಅಧ್ಯಕ್ಷ ಗದ್ದುಗೆ ಏರಬೇಕಾಗಿದೆ. ಏನೇ ಆದರೂ, ಪಕ್ಷದ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನ ಹಾಗೂ ಶಾಸಕರ ನಿರ್ಣಯವೇ ಅಂತಿಮವಾಗಿರುತ್ತದೆ.
ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಎದ್ದು ಕಾಣುತ್ತಿಲ್ಲ. ಈ ಮೂವರ ಪೈಕಿ ಅಧ್ಯಕ್ಷ ಸ್ಥಾನ ವಂಚಿತರಾದರೆ ಉಪಾಧ್ಯಕ್ಷ ಸ್ಥಾನ ನೀಡಬೇಕೆನ್ನುವುದು ಅವರ ಒತ್ತಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

