ಆಮ್ ಆದ್ಮಿ ಪಾರ್ಟಿಯಿಂದ ದೀಡ್ ನಮಸ್ಕಾರ: 24ರಂದು ನಾಮಪತ್ರ ಸಲ್ಲಿಕೆ
ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಏ.17 ರಂದು ನಡೆಯಲಿರುವ ಚುನಾವಣೆಗೆ ಆಮ್ ಆದ್ಮಾ ಪಾರ್ಟಿಯ ಅಭ್ಯರ್ಥಿ ಭೀಮರಾಯ ಅವರು ಮಾ.24 ರಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮತದಾರರಿಗೆ ದೀಡ್ ನಮಸ್ಕಾರ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜನ ಸಂಗ್ರಾಮ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಆಪ್ ಜಿಲ್ಲಾ ಸಮಿತಿ ಹಾಗೂ ಪರಿಷತ್ ವತಿಯಿಂದ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿ ಭೀಮರಾಯ ಅವರು ಅತ್ಯಂತ ಸರಳ, ಸಜ್ಜನಿಕೆ ರೈತರಾಗಿದ್ದಾರೆ. ಭೀಮರಾಯ ಅವರು ಆಪ್ನಿಂದ ಸ್ಪರ್ಧಿಸಲು ಅರ್ಹರಾಗಿದ್ದಾರೆಂದು ಹೇಳಿದರು.
ಹೊಸಬರಿಗೆ ಆದ್ಯತೆ: ಇಂದಿನ ದಿನಮಾನದಲ್ಲಿ ಅನುದಾನ ದೋಚುವ ರಾಜಕೀಯ ಪಕ್ಷಗಳ ನಾಯಕರ ಬಗ್ಗೆ ಮತದಾರರು ಬೇಸರಗೊಂಡಿದ್ದಾರೆ. ಕ್ಷೇತ್ರದ ಮತದಾರರು ಹೊಸಬರಿಗೆ ಆದ್ಯತೆ ನೀಡುವುದರ ಕಡೆ ಚಿಂತನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಭೀಮರಾಯ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ವಿವರಿಸಿದರು. ಮಾ.24ರಂದು ಆಪ್ ಪಾರ್ಟಿ ಅಭ್ಯರ್ಥಿ ಭೀಮರಾಯ ತಮ್ಮ ನಾಮಪತ್ರ ಸಲ್ಲಿಸಲಿದ್ದು, ಮತದಾರ ಪ್ರಭುಗಳಿಗೆ ದೀಡ್ ನಮಸ್ಕಾರ ಹಾಕಿ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ನಗರದ ತೀನ್ ಖಂದೀಲ್ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ದೀಡ್ ನಮಸ್ಕಾರ ಕಾರ್ಯಕ್ರಮ ನಡೆಯಲಿದೆ. ಆಪ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
1 ಲಕ್ಷ ಸಂಗ್ರಹಿಸುವ ಗುರಿ: ಕಾರ್ಯಕರ್ತರು ಅಭ್ಯರ್ಥಿಯ ಗುರುತು ಪೊರಕೆಯನ್ನು ಕೈಯಲ್ಲಿ ಹಿಡಿದು ಕಸಗುಡಿಸುತ್ತಾ ಭ್ರಷ್ಟಾಚಾರರು, ಜಾತಿ ಮತ್ತು ದ್ವೇಷ ರಾಜಕೀಯ ಮಾಡುವವರನ್ನು ತೊಲಗಿಸಿ ಎಂದು ಘೋಷಣೆ ಕೂಗುತ್ತಾ ಜನರ ಮುಂದೆ ಹೋಗಲಿದ್ದಾರೆಂದ ಅವರು, ಆಮ್ ಆದ್ಮಿ ಪಾರ್ಟಿಯಿಂದ ಚುನಾವಣೆ ಪ್ರಚಾರಕ್ಕಾಗಿ ಸುಮಾರು ಒಂದು-ಒಂದೂವರೆ ಲಕ್ಷ ಸಂಗ್ರಹಿಸುವ ಗುರಿಯಿದೆ ಎಂದರು.
ಈಗಾಗಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ರಾಜಕೀಯ ಬಲ, ಹಣ ಮತ್ತು ಬೆಂಬಲಿಗರ ಶಕ್ತಿ ಹೊಂದಿವೆ. ಜನಸಾಮಾನ್ಯರ ಪರವಾಗಿ ಆಪ್ನಿಂದ ಭೀಮರಾಯ ಸ್ಪರ್ಧಿಸಿದ್ದು, ರಾಜಕೀಯ ಧುರೀಣರ ಕೈಗೆ ಆಡಳಿತ ನೀಡಿದ ಮತದಾರರು ಈ ಬಾರಿ ಆಪ್ ಅಭ್ಯರ್ಥಿಗೆ ಬೆಂಬಲಿಸಿ ಸೇವೆ ಸಲ್ಲಿಸಲು ಅವಕಾಶ ಒದಗಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಪಟ್ಟಿ ಪ್ರಕಟ: ರಾಜ್ಯದಲ್ಲಿಯೇ ಅತೀ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿದವರ ಹೆಸರುಗಳನ್ನು ಜನ ಸಂಗ್ರಾಮ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಶೀಘ್ರ ಪ್ರಕಟಿಸಲಿದೆ. ಭ್ರಷ್ಟಾಚಾರ ವಿರುದ್ಧ ಕಾನೂನು ಹೋರಾಟ ನಡೆಸಿರುವ ಎಸ್.ಆರ್. ಹಿರೇಮಠ್ ರಾಜ್ಯದಲ್ಲಿರುವ ಭ್ರಷ್ಟರ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು. ಅತೀ ಭ್ರಷ್ಟರ ಪಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ ಐದನೇ ಸ್ಥಾನದಲ್ಲಿದ್ದಾರೆ. ದಾಖಲೆಗಳ ಸಹಿತ ಪಟ್ಟಿ ಬಹಿರಂಗಪಡಿಸುವುದಾಗಿ ಎಚ್ಚರಿಸಿದರು. ಆಪ್ ಅಭ್ಯರ್ಥಿ ಭೀಮರಾಯ, ವೈಜನಾಥ ಹಿರೇಮಠ, ವಿ.ಎ. ಮಾಲಿಪಾಟೀಲ್, ಸಿರಾಜ್, ಆನಂದ್ ಇದ್ದರು.
ಬಿಜೆಪಿ ಸದಸ್ಯತ್ವಕ್ಕೆ ಮಾರೆಪ್ಪ ರಾಜಿನಾಮೆ
ರಾಯಚೂರು: ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಟಿ. ಮಾರೆಪ್ಪ ಅವರು ಪಕ್ಷ ಹಾಗೂ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ. ಈ ಕುರಿತು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಪತ್ರ ಸಲ್ಲಿಸಿರುವ ಅವರು, ಪಕ್ಷದಲ್ಲಿ ಅನಗತ್ಯವಾಗಿ ತಮ್ಮ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ಉಚ್ಛಾಟಿಸಿರುವುದಾಗಿ ರೈತ ಮೋರ್ಚಾದ ಅಧ್ಯಕ್ಷ ಶರಣಪ್ಪಗೌಡರ ಖೊಟ್ಟಿ ಸಹಿ ಮಾಡಿ ಪತ್ರಿಕಾ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿದರು. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ತಮ್ಮ ವಿರುದ್ಧವೇ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಹೊರಿಸಿದ್ದು ವಾಸ್ತವವಾಗಿ ಸತ್ಯನಾಥ ಕಾಲನಿಯ ಉದ್ಯಾನವನಕ್ಕೆ ಮೀಸಲಿರಿಸಿದ ಜಾಗದಲ್ಲಿ ಅಕ್ರಮವಾಗಿ ಬಿಜೆಪಿ ಮುಖಂಡ ತ್ರಿವಿಕ್ರಮ್ ಜೋಷಿ ಮಳಿಗೆ ನಿರ್ಮಿಸಿದ್ದಾರೆ. ಈ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆ ರಾಜಿನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

