ರಾಯಚೂರು

ನಾಯಕರ ನಗರ ಕೇಂದ್ರಿತ ಪ್ರಚಾರ ಚುರುಕು

Published On :

-ವಿಶೇಷ ವರದಿ
ಕ.ಪ್ರ. ವಾರ್ತೆ ರಾಯಚೂರು ಮಾ.21
ರಾಯಚೂರು ಲೋಕಸಭೆ ಕ್ಷೇತ್ರ(ಎಸ್ಟಿ ಮೀಸಲು) ಚುನಾವಣೆಯ ಕಣ ರಂಗೇರತೊಡಗಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೂ ಮುಂಚೆಯೇ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಅದರಲ್ಲೂ ನಗರ ಪ್ರದೇಶ ಕೇಂದ್ರಿತ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ವಿಶೇಷ.
ಲೋಕಸಭೆ ಕ್ಷೇತ್ರಕ್ಕೆ ಏ.17ರಂದು ನಡೆಯಲಿರುವ ಚುನಾವಣೆಗೆ ಮಾ.19ರಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳ ಹೆಸರು ಸಾಕಷ್ಟು ಮೊದಲೇ ಅಂತಿಮಗೊಳಿಸಿದ್ದರೂ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಕೆಗೆ ಆತುರ ತೋರುತ್ತಿಲ್ಲ. ಬದಲಿಗೆ ಪ್ರಚಾರಕ್ಕೆ ಆದ್ಯತೆ ನೀಡುತ್ತಿರುವುದು ಕಂಡುಬಂದಿದೆ.
ಯಾವ ಪಕ್ಷದಿಂದ ಯಾರ್ಯಾರು ಕಣಕ್ಕೆ?: ಈಗಾಗಲೇ ಕಾಂಗ್ರೆಸ್‌ನಿಂದ ಭಗವಂತರಾಯ ನಾಯಕ(ಬಿ.ವಿ.ನಾಯಕ), ಬಿಜೆಪಿಯಿಂದ ಮಾಜಿ ಸಚಿವ ಶಿವನಗೌಡ ನಾಯಕ ಹಾಗೂ ಜೆಡಿಎಸ್‌ನಿಂದ ಮತ್ತೊಬ್ಬ ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಅವರ ಹೆಸರು ಘೋಷಣೆಯಾಗಿವೆ.
ಈ ಮೂವರು ಅಭ್ಯರ್ಥಿಗಳ ಪೈಕಿ ಜೆಡಿಎಸ್‌ನ ರಾಜಾ ಅಮರೇಶ್ವರ ನಾಯಕ ಇನ್ನಷ್ಟೇ ಪ್ರಚಾರಕ್ಕೆ ಧುಮುಕಬೇಕಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಈಗಿನಿಂದಲೇ ಮನೆಮನೆಗೆ ತೆರಳಿ ಪ್ರಚಾರ ಕೈಗೊಳ್ಳುವ ಕಾರ್ಯದಲ್ಲಿದ್ದಾರೆ. ನಾಮಪತ್ರ ಸಲ್ಲಿಸಲು ಸಾಕಷ್ಟು ಕಾಲವಕಾಶವಿರುವುದು ಅಭ್ಯರ್ಥಿಗಳಿಗೆ ಅನುಕೂಲವನ್ನೂ ಕಲ್ಪಿಸಿದೆ.
ಮತದಾರರಿಗೆ ಮನವರಿಕೆ: ಈ ಮಧ್ಯೆ ನಗರದಲ್ಲಿ ಮತದಾರರ ಸೆಳೆಯಲು ಇಬ್ಬರೂ ಅಭ್ಯರ್ಥಿಗಳು ವಿವಿಧೆಡೆ ಸಭೆ ನಡೆಸಿದ್ದಾರೆ. ನಗರ ಪ್ರದೇಶದಲ್ಲಿನ ಮತದಾರರು ಮತದಾನ ಮಾಡುವುದು ಕಡಿಮೆ ಎಂಬುದು ಈಗಾಗಲೇ ಸಾಬೀತಾಗಿದೆ. ಅಷ್ಟೇ ಅಲ್ಲ ಮತದಾರರಲ್ಲಿ ಬಹುತೇಕರು ವಿದ್ಯಾವಂತರಾಗಿರುವುದರಿಂದ ಅವರಿಗೆ ತಮ್ಮ ಧ್ಯೇಯೋದ್ದೇಶಗಳು, ಪ್ರಣಾಳಿಕೆಯ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಅಭ್ಯರ್ಥಿಗಳು ನಡೆಸಿದ್ದಾರೆ.
ಮೊದಲ ಹಂತದಲ್ಲಿ ನಗರ ಪ್ರದೇಶಕ್ಕೆ ದಾಳಿಯಿಟ್ಟಿರುವ ಎರಡೂ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ವಿವಿಧೆಡೆ ವಾರ್ಡ್ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಮತದಾರರ ಸೆಳೆಯುವ ತಂತ್ರ ನಡೆಸಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಎರಡು ದಿನಗಳ ಹಿಂದಷ್ಟೇ ಅಖೈರು ಆಗಿರುವುದರಿಂದ ಇನ್ನಷ್ಟೇ ಅವರು ಪ್ರಚಾರಕ್ಕೆ ತೊಡಗಬೇಕಿದೆ.
ಅಸಮಾಧಾನ, ಪಕ್ಷಾಂತರ?: ಈಗಾಗಲೇ ಜಿಲ್ಲೆಯಲ್ಲಿ ಅತೃಪ್ತಿಯ ಅಲೆ ಎಲ್ಲ ಪಕ್ಷಗಳಲ್ಲೂ ಕಂಡುಬಂದಿದ್ದು, ಅಭ್ಯರ್ಥಿಗಳು ಹಾಗೂ ಅವರ ಪರವಾಗಿ ಬೆಂಬಲಿಗರು ಇನ್ನಿತರೆ ಪಕ್ಷಗಳಲ್ಲಿನ ಪ್ರಮುಖ ನಾಯಕರಲ್ಲಿನ ಅಸಮಾಧಾನವನ್ನು ಬಳಕೆ ಮಾಡಿಕೊಂಡು ಅವರನ್ನು ತಮ್ಮ ಪಕ್ಷಗಳಿಗೆ ಸೆಳೆಯುವ ಪ್ರಯತ್ನವೂ ಜಾರಿಯಲ್ಲಿದೆ.
ಇನ್ನುಳಿದಂತೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿರುವ ಆಮ್ ಆದ್ಮಿ ಪಾರ್ಟಿಯು ತನ್ನ ಅಭ್ಯರ್ಥಿಯಾಗಿ ಭೀಮರಾಯ ಅವರನ್ನು ಸೂಚಿಸಿದೆ. ಆದರೆ ಪ್ರಚಾರ ಕಾರ್ಯ ಇನ್ನಷ್ಟೇ ಆರಂಭಗೊಳ್ಳಬೇಕಿದೆ.
ಲೆಕ್ಕಾಚಾರ: ಒಂದೆಡೆ ಭರ್ಜರಿ ಪ್ರಚಾರಕ್ಕೆ ಮುಂದಾಗಿರುವ ಅಭ್ಯರ್ಥಿಗಳು ಮತ್ತೊಂದೆಡೆ ನಾಮಪತ್ರ ಸಲ್ಲಿಕೆಗೆ ಸೂಕ್ತ ಸಮಯದ ಹುಡುಕಾಟ ದಲ್ಲಿದ್ದಾರೆ. ಅದಕ್ಕಾಗಿ ವಿವಿಧ ಮಠಗಳ ಮಠಾಧೀಶರ ಸಲಹೆ, ಆಶೀರ್ವಾದವನ್ನೂ ಪಡೆಯುತ್ತಿರುವುದು ಹೊಸದೇನಲ್ಲ. ಜ್ಯೋತಿಷಿಗಳು, ಪಂಡಿತರು, ಮಠಾಧೀಶರ ಸಲಹೆಯಂತೆ ನಾಮಪತ್ರ ಸಲ್ಲಿಕೆ ದಿನಾಂಕ ನಿಗದಿಗೆ ಲೆಕ್ಕಾಚಾರ ಈಗಾಗಲೇ ಆರಂಭಗೊಂಡಿದೆ ಎಂದು ಗೊತ್ತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.