ನಿಷೇಧವಿದ್ದರೂ ಮರಳು ಸಾಗಣೆ ನಿರಾಳ
-ಪಂಪಯ್ಯ ಮಠ
ಕ.ಪ್ರ. ವಾರ್ತೆ ಮುದಗಲ್ ಮಾ.24
ತಾಲೂಕಿನ ನಾಗರಹಾಳ ಹಿರೇಹಳ್ಳ, ಕಂಬಳಿಹಾಳ ಹಳ್ಳ, ಪಕ್ಕದ ಹುನಗುಂದ ತಾಲೂಕಿನ ಕೋಡಿಹಾಳದ ಹಳ್ಳ, ಕರಡಿ ಹಳ್ಳ, ಪಾಲಥಿ ಹಳ್ಳ, ಹೇಮವಾಡಗಿ ಹಳ್ಳದಿಂದ ನಿಷೇಧದ ನಡುವೆಯೇ ಹಗಲಿರುಳು ನಾಗರಹಾಳ ರಾಜ್ಯ ಹೆದ್ದಾರಿ 14 ರ ಮುಖಾಂತರ ಅಂತರ್ ಜಿಲ್ಲಾ ಅಕ್ರಮ ಮರಳು ಸಾಗಟ ನಿರಾಳವಾಗಿ ನಿರಂತರವಾಗಿ ನಡೆಯುತ್ತಿದೆ.
ಪರವಾನಗಿ ಇಲ್ಲ: ಈ ರೀತಿ ಕಾನೂನುಬಾಹಿರ ಮರಳು ಮಾಫಿಯಾ ಮರು ಜೀವ ಪಡೆದು, ಹಳ್ಳಿಗಳಲ್ಲಿ ಮರಳು ಸಾಗಣಿಕೆಯಿಂದ ತಗ್ಗುಗಳು ನಿರ್ಮಾಣವಾಗುತ್ತಿವೆ. ಸಮತಟ್ಟು ಪ್ರದೇಶ ಕಣ್ಮರೆಯಾಗುತ್ತಿದೆ. ನಾಗರಹಾಳ ಮುಖಾಂತರ ನಾರಾಯಣಪುರ ಅಣೆಕಟ್ಟೆಯ ಮುಂಭಾಗದ ಬೃಹತ್ ಸೇತುವೆ ಮುಖಾಂತರ ಬಿಜಾಪುರ, ಯಾದಗೀರ, ತಾಳಿಕೋಟೆ, ನಾಲತವಾಡ, ಮುದ್ದೇಬಿಹಾಳ ಸುರಪುರ, ಶಹಾಪುರ, ಗುಲ್ಬರ್ಗ ಕಡೆ ನೂರಾರು ಟಾರಸ್ ಲಾರಿಗಳು ಹಾಗೂ ಜೋಡು ಟ್ರಾಲಿ ಟ್ರಾಕ್ಟರ್ಗಳಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ.
ಕುಮ್ಮಕ್ಕು: ನಿಯಮದ ಪ್ರಕಾರ, ಮರಳು ಸಾಗಿಸುವ ಲಾರಿಗಳು ಮಾರ್ಗದ ಪರವಾನಗಿ ಪಡೆಯಬೇಕು. ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ಆದರೆ, ಇಲ್ಲಿ ಮರಳು ಸಾಗಿಸುವ ಲಾರಿಗಳಿಗೆ ಇವುಗಳ ಪರಿಚಯವೇ ಇಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ರಾಜ್ಯಧನ ನಷ್ಟವಾಗುತ್ತಿದೆ. ರಾಜ್ಯಧನ ಕಟ್ಟಬೇಕಾದ ಮಧ್ಯವರ್ತಿಗಳು ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಕೈ ಜೋಡಿಸಿ ಸರಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ನಷ್ಟವನ್ನುಂಟು ಮಾಡುತ್ತಿದ್ದಾರೆ. ಇವರಿಗೆ ಸ್ಥಳೀಯ ಜನಪ್ರತಿನಿಧಿಗಳ ಕುಮ್ಮಕ್ಕು ಇದೆ ಎನ್ನುವುದು ಮೇಲ್ನೋಟಕ್ಕೇ ಕಂಡುಬರುತ್ತದೆ ಎಂದು ಸಂಘ-ಸಂಸ್ಥೆಗಳು ಆರೋಪಿಸಿವೆ.
ಟಾರಸ್ ಲಾರಿಗಳಲ್ಲಿ 25 ರಿಂದ 30 ಟನ್ ಮರಳು ಸಾಗಿಸುತ್ತಿದ್ದರಿಂದ, ಗ್ರಾಮೀಣ ರಸ್ತೆಗಳು ಹದಗೆಟ್ಟು ಸಂಚಾರ ದುರ್ಗಮವಾಗಿದೆ. ನಾಗರಹಾಳ, ಕೋಡಿಹಾಳ, ನರಕಲದಿನ್ನಿ, ಚಿತ್ತಾಪೂರು, ಜಾವೂರು, ಪಾಲಥಿ, ಕೊಣ್ಣುರು ಇನ್ನಿತರ ಗ್ರಾಮಗಳ ರಸ್ತೆಯ ಪಕ್ಕದಲ್ಲಿಯೇ ಸರ್ಕಾರಿ ಶಾಲೆಗಳಿದ್ದು, ಮರಳು ಹೊತ್ತ ಲಾರಿಗಳು ತಿರುಗಾಟದಿಂದ ಗ್ರಾಮದ ರಸ್ತೆ ಪಕ್ಕದಲ್ಲಿದ್ದ ಮನೆಗಳು ಮತ್ತು ಶಾಲಾ ಕೊಠಡಿಗಳು ಅದರುತ್ತಿವೆ. ಶಾಲಾ ಮಕ್ಕಳು, ಶಿಕ್ಷಕರು ಭಯಭೀತರಾಗಿದ್ದಾರೆ. ಲಾರಿಗಳ ಶಬ್ದದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಸಾರ್ವಜನಿಕರಿಗೆ ರಾತ್ರಿ ನಿದ್ರೆ ಬಾರದಂತಾಗಿದೆ ಎಂಬುದು ಗ್ರಾಮಸ್ಥರ ಅಳಲು.
ಸಂಶಯ: ವಿಪರೀತ ಧೂಳಿನಿಂದ ಗ್ರಾಮೀಣ ಜನ ಹಾಗೂ ಶಾಲಾ ಮಕ್ಕಳು ಅಸ್ತಮಾ ರೋಗಕ್ಕೆ ಬಲಿಯಾಗುತ್ತಿದ್ದು, ಟ್ರಾಕ್ಟರ್, ಲಾರಿಗಳು ಹಿಂದೆ ಹೋಗುವ ದ್ವಿಚಕ್ರ ವಾಹನ, ಇನ್ನಿತರ ವಾಹನ ಸವಾರರು ಧೂಳು ಹಾಗೂ ಸಣ್ಣ ಮರಳು ಕಣ್ಣಿಗೆ ಸೇರುತ್ತಿರುವದರಿಂದ ಕಣ್ಣಿಗೆ ಸಂಬಂಧಿಸದ ರೋಗಗಳಿಂದ ಬಳಲುವಂತಾಗಿದೆ.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಚೆಕ್ಪೋಸ್ಟ್ಗಳನ್ನು ನಿರ್ಮಿಸಿದ್ದರೂ, ಮರಳು ಲಾರಿಗಳು, ಟ್ರ್ಯಾಕ್ಟಗಳನ್ನು ತಪಾಸಣೆ ಮಾಡದೆ ಕಳಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಗಳು ಶಾಮಿಲಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಮರಳು ಸಾಗಿಸುವ ವಾಹನಗಳಲ್ಲಿ ಅಕ್ರಮ ಮದ್ಯ, ಹಣ ಸಾಗಿಸಿದರೂ ಅಚ್ಚರಿ ಇಲ್ಲ.
ಪರಿಸರ ಸಂಪತ್ತು ಕೊಳ್ಳೆ ಹೊಡೆಯುವವರ ವಿರುದ್ಧ ಸಂಬಂಧಿಸಿದ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ನಿಷ್ಕಾಳಜಿ ವಹಿಸಿದ್ದಲ್ಲಿ ಕೆಲವೇ ದಿನಗಳಲ್ಲಿ ನಾಗರಹಾಳ ಮುಖ್ಯರಸ್ತೆಯಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆಂದು ಸ್ಥಳೀಯ ಸಂಘ-ಸಂಸ್ಥೆಗಳು ಹೋರಾಟಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

