ಯುಪಿಎದಿಂದ ಬ್ರಹ್ಮಾಂಡ ಭ್ರಷ್ಟ
ಕ.ಪ್ರ. ವಾರ್ತೆ ರಾಯಚೂರು ಮಾ.26
ಯುಪಿಎ ಸರ್ಕಾರದ ದುರಾಡಳಿತ ಮತ್ತು ಬ್ರಹ್ಮಾಂಡ ಭ್ರಷ್ಟಾಚಾರದ ಕೊಳೆ ತೊಳೆಯಲು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಉತ್ತಮ ಆಡಳಿತ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ದೇಶದ ಪ್ರಗತಿಗೆ ನರೇಂದ್ರ ಮೋದಿ ಕಾರ್ಯಕ್ರಮ ರೂಪಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದರು.
ನಗರದಲ್ಲಿ ಬುಧವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯ ಸಮಾವೇಶದಲ್ಲಿ ಮಾತನಾಡಿ, ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಕಾರ್ಯಕರ್ತರು ಮುಂದಾಗಬೇಕಿದೆ ಎಂದರು.
ಯುಪಿಎ ಸರ್ಕಾರ ವಿಫಲ: ಕಳೆದ 10 ವರ್ಷಗಳಿಂದ ಸತತ ಆಡಳಿತ ನಡೆಸಿದ ಕೇಂದ್ರದ ಯುಪಿಎ ಸರ್ಕಾರವು ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಕೋಟಿಗಟ್ಟಲೆ ಭ್ರಷ್ಟಾಚಾರ ಎಸಗಿ ದೇಶವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದೆ ಎಂದು ಆರೋಪಿಸಿದರು.
ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಕಾಂಗ್ರೆಸ್ ಪಕ್ಷವು ಸದ್ಯ ಭಾರತ ನಿರ್ಮಾಣ ಪಾದಯಾತ್ರೆಗೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ನ ಭಾರತ ನಿರ್ಮಾಣ ಯಾತ್ರೆ ಚುನಾವಣೆ ನಂತರ ಪಕ್ಷದ ಅಂತಿಮ ಯಾತ್ರೆಯಾಗಲಿದೆ ಎಂದು ಕುಟುಕಿದರು.
ಯುಪಿಎ ಸರ್ಕಾರದ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ ದೇಶದೆಲ್ಲೆಡೆ ಕಾಂಗ್ರೆಸ್ ವಿರೋಧಿ ಅಲೆಯಿದೆ. ಈ ಹಿನ್ನೆಲೆಯಲ್ಲಿ ಯುಪಿಎನಲ್ಲಿದ್ದ ಮಿತ್ರ ಪಕ್ಷಗಳು ಕಾಂಗ್ರೆಸ್ ಜತೆಗಿನ ಮೈತ್ರಿಯಿಂದ ದೂರ ಸರಿಯುತ್ತಿವೆ. ಹಾಗೆಯೇ ಮೋದಿ ಅಲೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್ ಸಚಿವರು, ಸಂಸದರು ಚುನಾವಣೆಯಲ್ಲಿ ಸ್ಪರ್ಧಿಸಲೂ ಹಿಂದೇಟು ಹಾಕುವಂಥ ಸ್ಥಿತಿಯಿದೆ ಎಂದು ಲೇವಡಿ ಮಾಡಿದರು.
ಮೋದಿ ಗೆಲವಿಗೆ ಸೈನಿಕರಂತೆ ಕಾರ್ಯನಿರ್ವಹಿಸಿ: ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿ ಗೆಲವು ಸಾಧಿಸಲು ಸೈನಿಕರಂತೆ ಕೆಲಸ ಮಾಡಬೇಕು. ದೇಶದ ಹಿತಕ್ಕಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಎಲ್ಲರೂ ಪಣತೊಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಮಾತನಾಡಿ, ದೇಶದೆಲ್ಲೆಡೆ ಮೋದಿ ಬಿರುಗಾಳಿಯಿದ್ದು, ಬಿರುಗಾಳಿಗೆ ಸಿಲುಕಿ ಕಾಂಗ್ರೆಸ್ನ ಎಲ್ಲ ಹಿರಿಯ ನಾಯಕರು ಸೋಲು ಕಾಣಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ 26ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲವು ಸಾಧಿಸಲಿದ್ದು, ಕಾಂಗ್ರೆಸ್ ರಾಜ್ಯದ ಒಂದೆರಡು ಸ್ಥಾನಗಳಿಗೆ ಸೀಮಿತವಾಗಲಿದೆ ಎಂದರು.
ದೇಶಾಭಿವೃದ್ಧಿಗೆ ಮೋದಿ ಗೆಲವು ಅಗತ್ಯ: ಮಾಜಿ ಸಚಿವ ರಾಜುಗೌಡ ಮಾತನಾಡಿ, ನರೇಂದ್ರ ಮೋದಿ ಅವರ ಕುರಿತು ಬಿಜೆಪಿ ಕಾರ್ಯಕರ್ತರಿಗಿಂತ ಕಾಂಗ್ರೆಸ್ ಮುಖಂಡರೇ ಹೆಚ್ಚು ಜಪ ಮಾಡುತ್ತಿದ್ದು, ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ ಅವಶ್ಯ. ಜಿಲ್ಲೆ ಅಭಿವೃದ್ಧಿಗೆ ಶಿವನಗೌಡ ನಾಯಕ ಗೆಲ್ಲುವುದು ಎಲ್ಲರ ಗುರಿಯಾಗಬೇಕೆಂದರು.
ದೇಶದಲ್ಲಿ 5 ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಒಟ್ಟು ವ್ಯವಸ್ಥೆಯನ್ನೇ ಹಾಳುಗೆಡವಿದೆ. ಬರೀ ಸುಳ್ಳು ಪ್ರಚಾರ, ಆಶ್ವಾಸನೆ ನೀಡುವುದರಲ್ಲಿಯೇ ಕಾಲಹರಣ ಮಾಡಿದ ಕಾಂಗ್ರೆಸ್ ಮಿತಿ ಮೀರಿದ ಭ್ರಷ್ಟಾಚಾರದಿಂದ ಕೋಟಿಗಟ್ಟಲೆ ಹಣ ಸಂಪಾದಿಸಿದೆ
-ಶಿವನಗೌಡ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

