ರಾಯಚೂರು

ಕಾಂಗ್ರೆಸ್ ಗೆಲವಿಗೆ ಕಾರ್ಯಕರ್ತರು ಶ್ರಮಿಸಿ

Published On :

ಮುದಗಲ್: ರಾಯಚೂರು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಗೆಲವಿಗೆ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಕೆಪಿಸಿಸಿ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ, ಮುಖಂಡರ ಸಭೆಯನ್ನುದ್ದೇಶಿಸಿ, ದೇಶದಲ್ಲಿ ಸುಭದ್ರ ಸರ್ಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲವೂ ಜನಪರ ಕೆಲಸಗಳಾಗಿವೆ. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯವರು ಅನ್ನಭಾಗ್ಯ, ಕ್ಷೀರಭಾಗ್ಯ, ಪರಿಶಿಷ್ಟ ಜಾತಿ, ಪಂಗಡಗಳ ನಿಗಮದ ಸಾಲ ಮನ್ನಾದಂತ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಡು ಬಡವರಿಗೂ ಯೋಜನೆ ತಲುಪುವಂತೆ ಮಾಡಿದ್ದಾರೆ.
ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಮನವಿ ಮಾಡಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಿ.ವಿ. ನಾಯಕ ಗೆಲವಿಗೆ ಕಾರಣರಾಗಬೇಕು ಎಂದರು.
ಕಷ್ಟಗಳಿಗೆ ಸ್ಪಂದಿಸಿ: ಕಾಂಗ್ರೆಸ್‌ಮುಖಂಡ ಸಂಗಣ್ಣ ಬಯ್ಯಾಪುರ ಮಾತನಾಡಿ, ಮುಖಂಡರು ಕಾರ್ಯಕರ್ತರನ್ನು ಕಡೆಗಾಣಿಸದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಬೇಕು. ಕಾರ್ಯಕರ್ತರು ಏನೇ ಭಿನ್ನಾಭಿಪ್ರಾಯ ಇದ್ದರು ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಚುನಾವಣೆಯಲ್ಲಿ ಹಣದಾಸೆಗೆ ಒಳಗಾಗದೆ ಮತ ಹಾಕಿಸುವ ಕೆಲಸ ಮಾಡಬೇಕು ಎಂದರು.
ಸಜ್ಜನರಿಗೆ ಮತ ಹಾಕಿ: ಬಿ.ವಿ. ನಾಯಕ ಸಹೋದರ ರಾಜಶೇಖರ ನಾಯಕ ಮಾತನಾಡಿ, ಬಿಜೆಪಿ ಅಭ್ಯರ್ಥಿ ಭ್ರಷ್ಟರಾಗಿದ್ದು, ತಮ್ಮ ಅಧಿಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಹಣ ಲೂಟಿ ಮಾಡಿದ್ದಾರೆ. ಇಂತಹವರಿಗೆ ಮತ ಹಾಕಬೇಡಿ.  ಭಗವಂತ ನಾಯಕ ಸರಳ, ಸಜ್ಜನಿಕೆ ಉಳ್ಳವರಾಗಿದ್ದಾರೆ. ತಂದೆ ವೆಂಕಟೇಶ ನಾಯಕರಿಗಿಂತಲೂ ಉತ್ತಮವಾದವರು. ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ, ಮುಖಂಡ ಡಿ.ಎಸ್. ಹೂಲಗೇರಿ, ಜಿ.ಪಂ. ಸದಸ್ಯ ಎಚ್.ಬಿ. ಮುರಾರಿ ಮಾತನಾಡಿದರು, ಮುಖಂಡರಾದ ಅಮರಗುಂಡಪ್ಪ ಮೇಟಿ, ಸುರೇಶಗೌಡ ಪಾಟೀಲ್, ಸುರೇಶ ಶೇಠ, ಚನ್ನವೀರಪ್ಪಗೌಡ, ಡಾ. ಅಯ್ಯಪ್ಪ ಬನ್ನಿಗೋಳ, ನಾಗನಗೌಡ ತರಡಗಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಜಯಲಕ್ಷ್ಮಿ ದೇಸಾಯಿ, ಎಸ್ಸಿ ಘಟಕ ಅಧ್ಯಕ್ಷ ರಾಮಣ್ಣ ಹಿರೇಮನಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮನ್ವರ್ ಖಾನ್, ಜಂಬನಗೌಡ ಕಾಚಾಪುರ, ಖಾದರಪಾಷಾ, ಗುಂಡಪ್ಪ ನಾಯಕ ಲಿಂಗಸುಗೂರು ಮುಂತಾದವರು ಉಪಸ್ಥಿತರಿದ್ದರು.
ಮುದಗಲ್ ಬ್ಲಾಕ್ ವ್ಯಾಪ್ತಿಯಲ್ಲಿ ಬರುವ ನಾಗಲಾಪುರ, ಹೂನೂರು, ಆಮದಿಹಾಳ, ಬನ್ನಿಗೋಳ, ನಾಗರಹಾಳ, ಕಾಚಾಪುರ, ಉಪ್ಪಾರನಂದಿಹಾಳ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
'ಶ್ರೀಸಾಮಾನ್ಯ ಪರವಾದ ಎಸ್‌ಯುಸಿಐ'
ರಾಯಚೂರು: ಜನಸಾಮಾನ್ಯರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಸ್‌ಯುಸಿಐ-ಸಿ ಪಕ್ಷವನ್ನು ಬೆಂಬಲಿಸುವಂತೆ ಪಕ್ಷದ ಅಭ್ಯರ್ಥಿ ಕೆ. ಸೋಮಶೇಖರ್ ಯಾದಗಿರಿ ಮನವಿ ಮಾಡಿದರು.
ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಶುಕ್ರವಾರ ಸಂಜೆ ಪಕ್ಷದಿಂದ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕೃಷ್ಣಾ-ತುಂಗಭದ್ರಾ-ಭೀಮಾ ನದಿಗಳು ಹರಿಯುತ್ತಿದ್ದರೂ ಇನ್ನೂ ಅರ್ಧದಷ್ಟು ಭೂಮಿ ನೀರಾವರಿಗೊಳಪಟ್ಟಿಲ್ಲ. ತುಂಗಭದ್ರಾ ಎಡದಂಡೆ, ಕೃಷ್ಣಾ ಎಡ ಮತ್ತು ಬಲದಂಡೆ ಕಾಲುವೆಗಳ ಕೊನೆಯ ಭಾಗದ ರೈತರು ನೀರಿಲ್ಲದೇ ಪರದಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆ ಟಾಸ್ಕ್ ವರ್ಕ್ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತರು ಕಡಿಮೆ ವೇತನದಲ್ಲಿ ದುಡಿಯುತ್ತಿದ್ದಾರೆ. ಆದರೆ ಪ್ರಮುಖ ರಾಜಕೀಯ ಪಕ್ಷಗಳವರು ಸದನದಲ್ಲಿ ಏಕೆ ಇಂಥವರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವುದಿಲ್ಲ ಎಂದು ಪ್ರಶ್ನಿಸಿದರು.
ಗುಜರಾತ್ ಅಭಿವೃದ್ಧಿಯಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ರೈತರಿಗೆ ಹೇಳದೆ ಕೇಳದೆ ಕೃಷಿ ಭೂಮಿಯನ್ನು ಗುಜರಾತ್‌ನಲ್ಲಿ ಒತ್ತಾಯಪೂರ್ವಕವಾಗಿ ವಶಪಡಿಸಿಕೊಳ್ಳುತ್ತಿರುವ ಬಗ್ಗೆ ಮರೆ ಮಾಚಲಾಗುತ್ತಿದೆ. ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳಿಗೆ ಸಾವಿರಾರು ಕೋಟಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಗುಜರಾತಿನಲ್ಲಿ ಶ್ರೀಮಂತರಿಗೆ ಅನುಕೂಲ ಕಲ್ಪಿಸಲಾಗಿದೆಯೇ ವಿನಾ ಬಡವರಿಗಲ್ಲ ಎಂಬ ಸತ್ಯ ಎಲ್ಲರೂ ಅರಿಯುವಂತೆ ಮನವಿ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಡಾ. ಟಿ.ಎಸ್. ಸುನೀತ್‌ಕುಮಾರ್ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯೆ ಅಪರ್ಣಾ ಬಿ.ಆರ್. ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ವೀರೇಶ್ ಎನ್.ಎಸ್. ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.