ರಾಯಚೂರು

ಕೃಷಿ ಕ್ಷೇತ್ರ ನಾಶ ಮಾಡುವ ಹುನ್ನಾರ: ಆರೋಪ

Published On :

ಲಿಂಗಸ್ಗೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಗುಣಮಟ್ಟದ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವಿಫಲಗೊಂಡಿದೆ. ಅಲ್ಲದೆ ಕಳಪೆ ಬೀಜ, ಗೊಬ್ಬರ ಮಾರಾಟ ತಡೆಯುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಪರಿಣಾಮ ಕೃಷಿ ಕ್ಷೇತ್ರವನ್ನು ಸಂಪೂರ್ಣ ನಾಶ ಮಾಡುವ ಹುನ್ನಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಗಂಭೀರ ಆರೋಪ ಮಾಡಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತನ ಬೆನ್ನೆಲಬು ಎತ್ತುಗಳನ್ನು ಬಸವಣ್ಣನಿಗೆ ಹೋಲಿಸುತ್ತಾರೆ. ಶುಕ್ರವಾರ ಬಸವೇಶ್ವರ ಜಯಂತಿ ಆಚರಿಸಲಾಗುತ್ತಿದೆ. ರೈತರಿಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು. ರಾಜ್ಯದಲ್ಲಿ ಕಳಪೆ ಬೀಜ ಮಾರಾಟ ಹಾವಳಿ ಹೆಚ್ಚುತ್ತಿದೆ. ಕಳೆದ ವರ್ಷ ರಾಯಚೂರು ಕೃಷಿ ವಿವಿ ಹತ್ತಿರವೇ ಕಳಪೆ ಹತ್ತಿ ಬೀಜ ತಯಾರು ಮಾಡುವ ಕೃತ್ಯ ಕಂಡು ಬಂದಿತ್ತು. ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರು ಹತ್ತಿ ಬಿತ್ತನೆಗೆ ತಯಾರಿ ನಡೆಸಿದ್ದಾರೆ. ರೈತರು ಖರೀದಿ ಮಾಡುವ ಯಾವುದೇ ಬೀಜಕ್ಕೆ ಕಡ್ಡಾಯವಾಗಿ ರಸೀದಿ ನೀಡಬೇಕು. ಮಾರಾಟಗಾರರೇ ಹೊಣೆ: ಏಕೆಂದರೆ ಕಳಪೆ ಬೀಜ ಮಾರಾಟದಿಂದ ಬೆಳೆ ವಿಫಲವಾದರೆ ಬೀಜ ಮಾರಾಟ ಕಂಪನಿಗಳ ವಿರುದ್ಧ ಹೋರಾಟ ನಡೆಸಲು ರೈತರಿಗೆ ಶಕ್ತಿ ಇಲ್ಲದಂತಾಗಿದೆ. ಬೀಜ ಮಾರಾಟ ಮಾಡುವವರೇ ನೇರ ಹೊಣೆ ಹೊರಬೇಕಾಗುತ್ತದೆ.
ಪ್ರತಿ ಅಂಗಡಿ, ರೈತ ಸಂಪರ್ಕ ಕೇಂದ್ರದ ಮುಂದೆ ಬೀಜ, ರಸಗೊಬ್ಬರ ದರ ಪ್ರಕಟಿಸುವ ಜೊತೆಗೆ ಕಂಪ್ಯೂಟರ್ ರಸೀದಿ ನೀಡಬೇಕು ಹಾಗೂ ಜಿಲ್ಲೆಗೆ ಬೀಜ, ಗೊಬ್ಬರ ಎಷ್ಟು ಪ್ರಮಾಣದಲ್ಲಿ ಬಂದಿದೆ ಎಂಬ ಕುರಿತು ಮಾಹಿತಿ ನೀಡುತ್ತಿರಬೇಕು. ಬೀಜಕ್ಕೆ ಎಂಆರ್‌ಪಿ ದರ ನಿಗದಿ ಅವೈಜ್ಞಾನಿಕವಾಗಿದ್ದು, ಅಂಗಡಿ ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ದರ ಹೆಚ್ಚು ಕಡಿಮೆ ಇರುತ್ತದೆ. ಕೃಷಿ ಇಲಾಖೆ ದರದ ಬಗ್ಗೆ ಕರಪತ್ರ ಹಂಚಬೇಕು. ಕೇಂದ್ರ ಸರ್ಕಾರ ಸಹಾಯಧನದ ದರದಲ್ಲಿ ಇದುವರೆಗೆ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಕೃಷಿ ಇಲಾಖೆ ಗಂಭೀರವಾಗಿ ಪರಿಗಣಿಸಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.