ರಾಯಚೂರು

ಉರ್ದು ಮಾಧ್ಯಮದಲ್ಲಿ ಟಿಇಟಿಗೆ ಒತ್ತಾಯಿಸಿ ಪ್ರತಿಭಟನೆ

Published On :

ರಾಯಚೂರು: ಉರ್ದು ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮುಸ್ಲಿಂ ಜನಾಂಗದ ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಉರ್ದು ಮಾಧ್ಯಮದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶನಿವಾರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮತ್ತು ಜನಸಂಗ್ರಾಮ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ನಡೆಸುವುದರಿಂದ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕೈ ತಪ್ಪುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅವರು ವ್ಯಾಸಂಗ ಮಾಡಿದವರಿಗೆ ಉರ್ದು ಮಾಧ್ಯಮದಲ್ಲಿಯೇ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಪರೀಕ್ಷೆಗೆ ತೊಂದರೆ: ಜಿಲ್ಲೆ ಸೇರಿದಂತೆ ಎಲ್ಲೆಡೆ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಪ್ರಾಥಮಿಕ ಸೇರಿದಂತೆ ಪ್ರೌಢಶಾಲಾ ಶಿಕ್ಷಣವನ್ನು ಉರ್ದು ಮಾಧ್ಯಮದಲ್ಲಿಯೇ ಪೂರ್ಣಗೊಳಿಸಿರುತ್ತಾರೆ. ಉದ್ಯೋಗಕ್ಕಾಗಿ ಸದ್ಯ ನಡೆಸಲಾಗುವ ಟಿಇಟಿ ಪರೀಕ್ಷೆಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಗಳಲ್ಲಿ ಅವರಿಗೆ ಬರೆಯಲು ತೊಂದರೆಯಾಗುತ್ತದೆ ಎಂದು ಟೀಕಿಸಿದರು.
ಉದ್ಯೋವಕಾಶ ನೀಡಿ: ಸಾಚಾರ್ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರಗಳು ಮುಸಲ್ಮಾನರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಬೇಕಾದ ಉತ್ತಮ ಸವಲತ್ತು ನೀಡುವುದರ ಜತೆಗೆ ಉದ್ಯೋಗ ಅವಕಾಶಗಳು ದೊರೆಯುವಂತೆಯೂ ಮಾಡಬೇಕಿದೆ. ಕಾರಣ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಮೂಲಕ ಉದ್ಯೋವಕಾಶ ಕೈ ತಪ್ಪದಂತೆ ಮಾಡಲು ಆಗ್ರಹಿಸಿದರು.
ಸರ್ವರ್ ತೊಂದರೆ: ಹಾಗೆಯೇ ಕಳೆದ ಎರಡು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆಯಿದ್ದು, ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಮಾತ್ರ ಅವಕಾಶವಿದ್ದುದರಿಂದ ಸರ್ವರ್ ತೊಂದರೆ ಕಂಡುಬಂದಿತ್ತು. ಅದರಿಂದ ಬಹುತೇಕರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಕಾರಣ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವಂತೆ ಒತ್ತಾಯಿಸಿದರು.
ಜಾತಿ ಪ್ರಮಾಣ ಪತ್ರ ದೊರೆಯುವವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಬೇಕು. ಸ್ನಾತಕೋತ್ತರ ಪರೀಕ್ಷೆಗಳು ಇದೇ ಸಮಯದಲ್ಲಿ ನಡೆಯುತ್ತಿರುವುದರಿಂದ ಟಿಇಟಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು. ಮುಖಂಡರಾದ ಹ್ಯಾರಿಸ್ ಸಿದ್ದಿಕಿ, ಡಾ. ರಜಾಕ್ ಉಸ್ತಾದ್, ಅಕ್ಬರ್ ಹುಸೇನ್ ನಾಗುಂಡಿ, ನಾಜಿಯಾ, ಉಸ್ಮಾಬಾನು, ಖಾಜಾಬಾನು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಬಾಬಾ ವಿರೋಧ ದೂರು ಅನಗತ್ಯ
ರಾಯಚೂರು: ದಲಿತರು ಹರಿಜನರಲ್ಲ. ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದವರು ಮಾತ್ರ ದಲಿತರಲ್ಲದ್ದರಿಂದ ಸದ್ಯದ ಚುನಾವಣೆಯಲ್ಲಿ ಬಾಬಾ ರಾಮದೇವ್ ನೀಡಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ಹರಿಜನರು ಆಕ್ರೋಶ ವ್ಯಕ್ತಪಡಿಸುವುದು ಅನಗತ್ಯ ಎಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಬಾ ರಾಮದೇವ್ ಹೇಳಿಕೆ ಖಂಡನೀಯ. ಆದರೆ ಅವರು ದಲಿತರ ಬಗ್ಗೆ ಪ್ರಸ್ತಾಪ ವ್ಯಕ್ತಪಡಿಸಿದ್ದರಿಂದ ಹರಿಜನರು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಅನವಶ್ಯ ಎಂದು ಹೇಳಿದರು. ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಎಲ್ಲ ಜಾತಿಯ ಜನರು ದಲಿತರಾಗಿದ್ದು, ಸಾಮಾಜಿಕವಾಗಿ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರೆಲ್ಲರೂ ಹರಿಜನರೇ ಆಗಿದ್ದಾರೆ. ಆದರೆ ದಲಿತರು ಎಂಬ ಪದವನ್ನು ಹರಿಜನರಿಗೆ ಮಾತ್ರ ಅನ್ವಯಿಸಲಾಗುತ್ತಿದೆ ಎಂದು ದೂರಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.